ಗುಲ್ಬರ್ಗಾ

ಡೆಂಘೀ ಜ್ವರ ನಿಯಂತ್ರಣ: ಸಾರ್ವಜನಿಕರು ಸಹಕರಿಸಲಿ- ಜಿಲ್ಲಾಧಿಕಾರಿ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.15
ಜಿಲ್ಲೆಯಲ್ಲಿ ಇದುವರೆಗೆ 3 ಡೇಂಘೀ ಜ್ವರ ಪ್ರಕರಣಗಳು ದೃಢಪಟ್ಟಿದ್ದು, ಯಾವುದೇ ಮರಣ ಸಂಭವಿಸಿಲ್ಲ. ಮಳೆಗಾಲದ ಹಾಗೂ ನಂತರದ ಅವಧಿಯಲ್ಲಿ ಕಂಡುಬರುವ ಸಂಭವವಿದ್ದು, ಜಿಲ್ಲಾದ್ಯಂತ ಈ ರೋಗ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಹಾಗೂ ಜಿಪಂ ಸಿಇಒ ಎಸ್.ಎ. ಜಿಲಾನಿ ತಿಳಿಸಿದ್ದಾರೆ.
  ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಈ ರೋಗದ ಬಗ್ಗೆ ಅರಿವು ಮೂಡಿಸುತ್ತ ಸೊಳ್ಳೆ ಉತ್ಪತ್ತಿಯ ತಾಣಗಳ ಲಾರ್ವಾಗಳನ್ನು ಗುರುತಿಸಿ ಸ್ವಚ್ಫಗೊಳಿಸಲಾಗುತ್ತಿದೆ. ವಾರಕ್ಕೊಮ್ಮೆ ಸ್ವಚ್ಫತಾ ಕಾರ್ಯ ಮುಂದುವರೆಸಿಕೊಂಡು ಹೋಗಲು ಜನರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.
ಮನೆಗಳಿಗೆ ಭೇಟಿ: ಜಿಲ್ಲೆಯಲ್ಲಿ ಈಗಾಗಲೇ 2,14,000 ಮನೆಗಳ ಪೈಕಿ 58 ಸಾವಿರ ಮನೆಗಳಿಗೆ ಭೇಟಿ ನೀಡಿ 3 ಸಾವಿರ ತಾಣಗಳಲ್ಲಿ ಲಾರ್ವಾಗಳನ್ನು ಗುರುತಿಸಿ ಸ್ವಚ್ಫಗೊಳಿಸಲಾಗಿದೆ. ಜಿಲ್ಲೆಯಲ್ಲಿ 1,417 ಶಾಲೆಗಳಲ್ಲಿ ವೈದ್ಯಾಧಿಕಾರಿಗಳು, ಮೇಲ್ವಿಚಾರಕರು ಭೇಟಿ ಅರಿವು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 15 ಫಾಗಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 25 ಫಾಗಿಂಗ್ ಮೆಷಿನ್ ಖರೀದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
  ನಗರ ಮತ್ತು ಗ್ರಾಮಗಳಲ್ಲಿ ಸ್ವಚ್ಫತೆ ಕಾಪಾಡಲು ಸಂಬಂಧಪಟ್ಟ ಸಂಸ್ಥೆಗಳು ಚರಂಡಿ ಸ್ವಚ್ಫಗೊಳಿಸಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಧಾನದೊಂದಿಗೆ ವಿಲೇವಾರಿ ಮಾಡಲು ನಗರಸಭೆ, ಪುರಸಭೆ, ಪಪಂ, ಗ್ರಾಪಂ.ಗಳಿಗೆ ಸೂಚಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಡೇಂಘೀ ಸಮಸ್ಯೆಯಾಗಿರದಿದ್ದರೂ ಮುಂದಿನ ದಿನಗಳಲ್ಲಿ ಸಮಸ್ಯಾತ್ಮಕವಾಗುವ ಸಾಧ್ಯತೆ ಇರುವುದರಿಂದ ಎಲ್ಲರೂ ರೋಗ ನಿಯಂತ್ರಣ ಕ್ರಮಗಳ ಪ್ರಕ್ರಿಯೆಯಲ್ಲಿ ಭಾಗವಹಿಸಿ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.
 ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಗಳನ್ನು ತಾಲೂಕಿಗೆ ಒಬ್ಬರಂತೆ ನೇಮಿಸಿ ನಿಯಂತ್ರಣ ಚಟುವಟಿಕೆಗಳನ್ನು ಪರಿಶೀಲಿಸಲು ಹಾಗೂ ತಪ್ಪದೇ ವಾರಕ್ಕೆರಡು ಸಲ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಲಕ್ಷ್ಯ ಮತ್ತು ಬೇಜವಾಬ್ದಾರಿ ತೋರಿಸಿದ ಅಧಿಕಾರಿಗಳನ್ನು ಕಾನೂನಿನ ಅಡಿಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಕೆಯ ಆದೇಶವನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.