ಗುಲ್ಬರ್ಗಾ

ಬೆವರ ಹನಿ ಮುತ್ತಿಕ್ಕುವಲ್ಲಿ ದಲಿತ ಸಾಹಿತ್ಯ ವಿಫಲ

Published On :

-ಶೇಷಮೂರ್ತಿ ಅವಧಾನಿ
ಶರಣಬಸವೇಶ್ವರ- ಬಂದೇ ನವಾಜ್ ವೇದಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16

ಬಿಸಿಲೂರು ದಲಿತರ ಬೆವರ ಹನಿ, ಅದರೊಳಗ ಬದುಕಿನ ವಾಸನೆ, ಕಷ್ಟ- ಸಂಕಷ್ಟಗಳೆಲ್ಲ ಅಕ್ಷರ ರೂಪ ಪಡೆಯಬೇಕಾಗಿತ್ತು. ಆದರೆ ಇದುವರೆಗೆ ಜಿಲ್ಲೆಯಿಂದ ಮೂಡಿ ಬಂದಿರುವ ಸೃಜನಶೀಲ, ಸೃಜನೇತರ ಎರಡೂ ವಿಭಾಗಗಳಲ್ಲಿನ ದಲಿತ ಸಾಹಿತ್ಯ ನೊಂದವರ ಬೆವರ ಹನಿ ಮುತ್ತಿಕ್ಕಿಲ್ಲ. ಅಲ್ಲಿನ ಕಷ್ಟ- ಸಂಕಷ್ಟಗಳ ವಾಸನೆ ಜಾಡು ಹಿಡಿದಂತಹ ಗಟ್ಟಿ ಸಾಹಿತ್ಯ ಹುಟ್ಟಿ ಬಂದಿಲ್ಲ. ಅಂಬೇಡ್ಕರ್ ಎಳೆದು ತಂದಿರುವ ದಲಿತೋದ್ಧಾರದ ತೇರನ್ನು ಸಾಹಿತಿಗಳೆಲ್ಲರೂ ಮುಂದೆಳೆಯಬೇಕಾಗಿದೆ. ಇದು ಈಗಲೇ ಗಂಭೀರ ರೂಪದಲ್ಲಾಗಬೇಕಿದೆ.
ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರದ ಮೊದಲ ಗೋಷ್ಠಿ ಬೆವರ ಹನಿ ಮೂಡ್ಯಾವೋ... ದಲಿತ ಸಾಹಿತ್ಯ ಚಿಂತನ- ಮಂಥನದ ಆಶಯ ನುಡಿಗಳಿಂದ ಅಧ್ಯಕ್ಷೀಯ ಮಾತುಗಳವರೆಗಿನ ಎಲ್ಲಾ ಹಂತಗಳಲ್ಲಿ ದಲಿತರ ಬದುಕು ಸಾಹಿತ್ಯದಲ್ಲಿ ಗಟ್ಟಿಯಾಗಿ ಸೆರೆಹಿಡಿಯಲಾಗಿಲ್ಲ ಎಂಬ ಕೊರಗು ಸ್ಪಷ್ಟವಾಗಿ ಕೇಳಿಬಂತು.
ಅಫಜಲ್ಪುರ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ನಾರಾಯಣ ರೋಲೇಕರ್ ತಮ್ಮ ಆಶಯ ಮಾತುಗಳಲ್ಲಿ ಅಂಬೇಡ್ಕರ್, ಬುದ್ಧರನ್ನು ಸ್ಮರಿಸುತ್ತ ದಲಿತರ ಬದುಕು ಕಷ್ಟದ್ದು, ಹಾಗಂತ ದಲಿತ ಸಮುದಾಯ ಯಾವ ಸಮುದಾಯವನ್ನು ವಿರೋಧಿಸುವುದಿಲ್ಲ, ಹಲವು ಸಿದ್ಧಾಂತಗಳನ್ನು ವಿರೋಧಿಸುತ್ತದೆ ಎಂದರಲ್ಲದೆ ಇಲ್ಲಿಯವರೆಗಿನ ಸಾಹಿತ್ಯ ಕೃಷಿಯಲ್ಲಿ ದಲಿತರ ಬದುಕ- ಕಷ್ಟಗಳು ಗಟ್ಟಿಗೊಂಡಿಲ್ಲ, ಆ ಕೆಲಸ ಬರುವ ದಿನಗಳಲ್ಲಿ ಆಗಬೇಕಾಗಿದೆ ಎಂದರು.
ಇವರ ಮಾತಿಗೆ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ ದನಿಗೂಡಿಸಿದರಲ್ಲದೆ ಇದುವರೆಗಿನ ಜಿಲ್ಲೆಯ ದಲಿತ ಸಾಹಿತ್ಯ, ಅಲ್ಲಿನ ರಚನೆಗಳು ಯಾರನ್ನೋ ಮೆಚ್ಚಿಸಲು ಎಂಬಂತೆ ಮೂಡಿ ಬಂದಿವೆಯೇ ಹೊರತು ಚಿಂತನೆಗಳು ಹರಳುಗಟ್ಟುವಂತೆ ಹೊರಬಂದಿಲ್ಲ ಎಂದು ನೋವಿನಿಂದ ನುಡಿದರು.
ಅಲ್ಲಲ್ಲಿ ಹೆಜ್ಜೆ ಮೂಡಿವೆ: ಜಿಲ್ಲೆಯ ಸೃಜನಶೀಲ ದಲಿತ ಸಾಹಿತ್ಯದ ಬಗ್ಗೆ ಮಾತನಾಡಿದ ಉಪನ್ಯಾಸಕ ಶ್ರೀಶೈಲ ನಾಗರಾಳ, ಕವನ ರಂಗದಲ್ಲಿ ಜಿಲ್ಲೆಯ ದಲಿತ ಪ್ರತಿಭೆಗಳು ಅರಳಿದಷ್ಟು ಇತರೆ ಪ್ರಕಾರಗಳಲ್ಲಿ ಕಂಡಿಲ್ಲ. ಕಾದಂಬರಿ, ನಾಟಕ, ಲಲಿತ ಪ್ರಬಂಧ, ವೈಚಾರಿಕ ಲೇಖನಗಳಂತಹ ಸಾಹಿತ್ಯ ರಂಗದಲ್ಲಿ ಇಲ್ಲಿನ ದಲಿತ ಸಾಹಿತಿಗಳು, ಚಿಂತಕರು ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಡಾ. ಚೆನ್ನಣ್ಣ ವಾಲೀಕಾರ್, ಬಸಣ್ಣ ಸಿಂಗೆ, ವಿಠ್ಠಲ ಚಾಮನಾಳ, ಎಸ್.ಪಿ. ಸುಳ್ಳದ, ಟಿಎಂ ಭಾಸ್ಕರ್, ಎಚ್ಟಿ ಪೋತೆ, ರಾಜಶೇಖರ ಮಾಂಗ್, ಸುರೇಶ ಬಡಿಗೇರ್, ದೇವೇಂದ್ರ ಹೆಗಡೆ ಸೇರಿದಂತೆ ಹಲವರ ಹೆಸರು ಪಟ್ಟಿ ಮಾಡುತ್ತ ಅನೇಕ ಸ್ತರಗಳಲ್ಲಿ ಈ ಸಾಹಿತಿಗಳು ಉತ್ತಮ ಕೃತಿಗಳನ್ನು ನೀಡುವ ಪ್ರಯತ್ನ ಮಾಡಿದ್ದಾರೆಂದು ಶ್ಲಾಘಿಸಿದರು.
ಹಣಮಂತರಾವ ದೊಡ್ಮನಿಯವರ ಪಂಚಮ ಈ ಭಾಗದ ಮೊದಲ ದಲಿತ ಸಾಹಿತಿಯ ಆತ್ಮಚರಿತ್ರೆ ಎಂದು ಹೇಳಿದ ನಾಗರಾಳ, ಇಲ್ಲಿನ ದಲಿತ ಲೇಖಕರ ಕೃತಿಗಳು ರಾಜ್ಯ ಮಟ್ಟದ ವಿಮರ್ಶಕರ ಗಮನ ಸೆಳೆಯುವಲ್ಲಿ ವಿಫಲವಾಗಿದ್ದೇ ಅವರು ಎಲೆಮರೆಯ ಕಾಯಿಯಂತೆ ಹಾಗೇ ಉಳಿಯುವಂತಾಗಿದೆ ಎಂದು ವಿಷಾದಿಸಿದರು.
ದಲಿತ ಸಾಹಿತ್ಯದ ಮಾತನ್ನಾಡುವಾಗ ಇಲ್ಲಿನ ದಲಿತ ಪರ ಚಳವಳಿಗಳನ್ನು ಮೆಲಕು ಹಾಕಿದ ಸೂರ್ಯಕಾಂತ ಸುಜ್ಯಾತ, ಚಳುವಳಿಗಳು ಇನ್ನೂ ಗಟ್ಟಿಗೊಳ್ಳುವ ಕಾಲ ಇದಾಗಿದೆ. ಹೋರಾಟದಿಂದಲೇ ಸಮುದಾಯದ ಪ್ರಗತಿ ಸಾಧ್ಯ. ಚಳವಳಿ ಮಾಡುವವರು ಸ್ವಾರ್ಥ ಬದಿಗೊತ್ತಿ ಸಮುದಾಯದ ಉದ್ಧಾರಕ್ಕೆ ಮುಂದಾಗಬೇಕೆಂದು ಮಾರ್ಮಿಕವಾಗಿ ನುಡಿದರು.
ದಲಿತ ಸಾಹಿತಿಗಳೇ ಸ್ವಾರ್ಥ ಬಿಡಿ: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಹಣಮಂತರಾಯ ದೊಡ್ಮನಿ ದಲಿತ ಸಾಹಿತಿಗಳಲ್ಲಿನ ಭಿನ್ನಾಭಿಪ್ರಾಯ, ಸ್ವಾರ್ಥ ಸಾಧನೆ ಮನೋಭಾವನೆಗಳನ್ನು ಪ್ರಸ್ತಾಪಿಸುತ್ತ ತಮ್ಮ ಮಾತುಗಳಲ್ಲಿ ಹೆಸರಿಸದೆ ಸೂಚ್ಯವಾಗಿ ಅನೇಕ ಘಟನೆಗಳನ್ನು ಪ್ರಸ್ತಾಪಿಸುತ್ತ ಜರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗಂಟು ಬಿದ್ದು ಅಲ್ಲಿಂದ ಲಕ್ಷಾಂತರ ರುಪಾಯಿ ಅನುದಾನ ಪಡೆಯುವ ದಲಿತ ಸಾಹಿತಿಗಳು ಹಲವರು ಮೇಳ, ಸಮ್ಮೇಳನ ಅಂತ ಕಾಟಾಚಾರದ ಕಾರ್ಯಕ್ರಮಗಳನ್ನು ಮಾಡಿ ಕೈತೊಳೆದುಕೊಳ್ಳುತ್ತಾರೆ. ಇತ್ತ ತೋಟ- ಹೊಲಗದ್ದೆ ಖರೀದಿಸಿ ಸಿರಿವಂತರಾಗುತ್ತಿದ್ದಾರೆ. ದಲಿತ ಸಾಹಿತ್ಯದ ಹೆಸರನ್ನು ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಬಳಸುವ ಇಂತಹ ಸಾಹಿತಿಗಳು ಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಾಹಿತ್ಯ ಸ್ಪಂದಿಸಿಲ್ಲ: ಗೋಷ್ಠಿಯಲ್ಲಿ ಸಾಹಿತ್ಯ ಸಂಘಟಕ ಲಕ್ಷ್ಮಣರಾವ ಗೋಗಿ, ಎಂಎಲ್ಸಿ ಕೆಬಿ ಶಾಣಪ್ಪ ಮಾತನಾಡಿ, ಜಿಲ್ಲೆಯ ದಲಿತ ಸಂವೇದನೆಗಳಿಗೆ ಸಾಹಿತ್ಯದಿಂದ ನಿರೀಕ್ಷಿತ ಸ್ಪಂದನೆ ದೊರಕಿಲ್ಲ. ಇದುವರೆಗಿನ ಗೋಷ್ಠಿಯ ಆಶಯಗಳಂತೆ ದಲಿತ ಸಂವೇದನೆಗಳಿಗೆ ಸಾಹಿತ್ಯ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಸ್ಪಂದಿಸಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.