ಕುಲಗೆಟ್ಟ ಲಿಂಗಾಯತರು
ಕ.ಪ್ರ. ವಾರ್ತೆ, ಸುರಪುರ, ಜೂ.20
ವೀರಶೈವ ಪದ ಬಳಕೆ ಮಾಡುವ ಮೂಲಕ ಲಿಂಗಾಯತರು ಕುಲಗೆಟ್ಟರು. ವೀರಶೈವದಲ್ಲಿ ಶಿವ- ಪಾರ್ವತಿ ಗಣಪತಿ ಇದ್ದಾರೆ. ಇದು ವೈದಿಕ ಪರಂಪರೆ. ಧಾರ್ಮಿಕ ಪರಂಪರೆಯಲ್ಲಿ ಭಕ್ತಸ್ಥಲದವರೆಗೆ ಮಾತ್ರ ಅಧ್ಯಾತ್ಮಿಕ ಜಗತ್ತು ಬೆಳೆದು ನಿಂತಿತ್ತು. ಶರಣರು ಇದೆಲ್ಲವನ್ನೂ ಮೀರಿ ಶರಣ ಸಂಸ್ಕೃತಿಯ ಸಿದ್ಧಾಂತ ಸಾಹಿತ್ಯವನ್ನು ಬದುಕಿದರು ಎಂದು ಖ್ಯಾತ ಸಂಶೋಧಕ ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟರು.
ತಾಲೂಕಿನ ಸತ್ಯಂಪೇಟೆ ಗ್ರಾಮದ ಶರಣ ಉದ್ಯಾನವನದಲ್ಲಿ ಜರುಗಿದ ಶರಣ ಗುರಪ್ಪ ಯಜಮಾನ, ಶಿವಮ್ಮ ತಾಯಿ ಹಾಗೂ ಲಿಂಗಣ್ಣ ಸತ್ಯಂಪೇಟೆಯವರ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಬಸವವಾದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಯದಲ್ಲೇ ಇವೆ ಗುರು-ಲಿಂಗ- ಜಂಗಮ: ಶರಣ, ಐಕ್ಯ, ಭಕ್ತ, ಮಹೇಶ, ಪ್ರಸಾದ, ಪ್ರಾಣಲಿಂಗ, ಶರಣ ಎಂಬ ಷಟಸ್ಥಲಗಳು ಕಂಡು ಬಂದರೂ ಅವು ನಿಜಕ್ಕೂ ಮೂರೇ ಆಗಿವೆ. ಗುರು- ಲಿಂಗ- ಜಂಗಮದೊಂದಿಗೆ ಕಾಯಕ ದಾಸೋಹ ಸೇರಿದರೆ ಅದು ಸಂಪೂರ್ಣ ಶರಣ ಧರ್ಮವಾಗುತ್ತದೆ. ಗುರು ಲಿಂಗ ಜಂಗಮ ಮೂರು ಪ್ರತ್ಯೇಕವಾಗಿ ಕಂಡರೂ ಅವು ನಮ್ಮೆಲ್ಲರ ಕಾಯದೊಳಗೆ ಅಡಗಿವೆ. ಅವನ್ನು ಹೊರಗೆ ಹುಡುಕುವ ಬದಲು ಒಳಗೆ ಹುಡುಕುವುದು ಒಳಿತೆಂದರು.
ಡಾ. ಸಬರದಗೆ 'ಬಸವ ಮಾರ್ಗ': ಇದೇ ಸಂದರ್ಭದಲ್ಲಿ ಬಸವ ಮಾರ್ಗ ಪ್ರತಿಷ್ಠಾನ ಪ್ರತಿ ವರ್ಷ ಕೊಡಮಾಡುವ ಬಸವ ಮಾರ್ಗ ಪ್ರಶಸ್ತಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ಅವರ ವಚನ ಸಂಸ್ಕೃತಿ ಎಂಬ ಕೃತಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸಬರದ, ಲಿಂಗಣ್ಣ ಸತ್ಯಂಪೇಟೆ ಬಂಡಾಯ ಮನೋಧರ್ಮದ ಹೋರಾಟಗಾರರಾಗಿದ್ದರು. ಬಾರದು ಬಪ್ಪದು ಬಪ್ಪದು ತಪ್ಪದು ಎಂಬಂತೆ ಬದುಕಿ ಎಲ್ಲರ ಬದುಕಿಗೆ ಬೆಳಕಾಗಿ ಹೋದರು ಎಂದು ತಿಳಿಸಿದರು.
ಲಿಂಸ ವಿಚಾರಧಾರೆ ಇಂದಿಗೂ ಪ್ರಸ್ತುತ: ಸಭೆಯ ಸಾನ್ನಿಧ್ಯವನ್ನು ವಹಿಸಿದ್ದ ಪಂಚಮಸಾಲಿಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 'ಲಿಂಸ' ಅವರು ನಮ್ಮೆಲ್ಲರಿಂದ ದೈಹಿಕವಾಗಿ ಕಣ್ಮರೆಯಾಗಿದ್ದರೂ ಅವರ ವಿಚಾರಗಳು ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿವೆ. ಒಬ್ಬ ಲಿಂಗಣ್ಣ ಸತ್ಯಂಪೇಟೆ ಕಣ್ಮರೆಯಾಗಿದ್ದಾರೆ ಎನೆಸಿದರೂ ನೂರಾರು ಲಿಂಗಣ್ಣನವರು ಸೃಷ್ಟಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ಕೃತಿಗಳ ಬಿಡುಗಡೆ: ಪ್ರತಿಷ್ಠಾನದ ವತಿಯಿಂದ ಪ್ರಕಟವಾದ ಬಸವ ಚಳವಳಿ, ಕಡಕೋಳದ ಮಡಿವಾಳಪ್ಪ, ಬಸವಣ್ಣತನದ ಎರಡು ರೀತಿಗಳು, ಬಸವ ಚಳವಳಿ, ಎನ್ನನದ್ದಿ ನೀನೆದ್ದು ಹೋಗು, ಕಣ್ಣ ಮರೆಯ ಬೆಳಕು, ಬಸವ ತತ್ವ ಆಚರಣೆಗಳು ಮತ್ತು ನಾವು, ಗಾಂಧೀಯ ನಾಡಿನಲ್ಲಿ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಸಕ ಬಿ.ಆರ್. ಪಾಟೀಲ, ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು. ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಲ್ಕಿ ಡಾ. ಬಸವಲಿಂಗ ಪಟ್ಟದ್ದೇವರು ಸಭೆ ಅಧ್ಯಕ್ಷತೆ ವಹಿಸಿದ್ದರು.
ಅಲ್ಲಮಪ್ರಭು ಬೆಟ್ಟದೂರ, ಸೂಗಪ್ಪ ಚುಕ್ಕಿ, ಬಸ್ಸಣ್ಣ ಬೂದೂರು, ಪ್ರಕಾಶ ಅಂಗಡಿ, ರವೀಂದ್ರ ಶಾಬಾದಿ, ತಿಮ್ಮನಗೌಡ ಚಿಲ್ಕಾರಾಗಿ, ಡಿ.ಎಂ. ಧನ್ನೂರ, ಜಂಬನಗೌಡ ಶೀಲವಂತರ, ಮಹಿಪಾಲರೆಡ್ಡಿ ಮುನ್ನೂರ, ವೀರೇಶ ಹಳ್ಳೂರ, ಪ್ರಕಾಶ ಕಶೆಟ್ಟಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

