' ನೆಮ್ಮದಿಗೆ ಸಂಗೀತ ಸಂಜೀವಿನಿ'
ಗುಲ್ಬರ್ಗ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಜೂ. 23 ಮತ್ತು 24 ರಂದು ಹರಿದಾಸರ ಹಾಡುಗಳ ಸಂಗೀತ ಹರಿದಾಸ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ, ಸ್ವರಮಾಧುರಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 23ರಂದು ಸಂಜೆ 6ಕ್ಕೆ ನಡೆಯುವ ಸಮಾರಂಭವನ್ನು ಈಶಾನ್ಯ ವಲಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಬರೆದಿರುವ ಶ್ರೀರಾಮದಾಸರ ಬದುಕು, ಸಾಹಿತ್ಯ ಕೃತಿಯನ್ನು ಹಿರಿಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ್ ಬಿಡುಗಡೆಗೊಳಿಸಲಿದ್ದಾರೆ. ಹಲವಾರು ಸಾಹಿತಿ, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಜೂ. 24 ರಂದು ಸಂಜೆ 6ಕ್ಕೆ ನಡೆಯುವ ಸಮಾರಂಭದಲ್ಲಿ ಹರಿದಾಸ ಸಂಗೀತ ರತ್ನ ರಾಜ್ಯಮಟ್ಟದ ಗೌರವ ಪ್ರಶಸ್ತಿಯನ್ನು ಬಾಗಲಕೋಟೆಯ ಅನಂತ ಕುಲಕರ್ಣಿ ಅವರಿಗೆ ನೀಡಲಾಗುತ್ತಿದೆ. ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಅರ್ಜಿ ಆಹ್ವಾನ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಕರಜಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗಾಗಿ ಬಿಎ, ಬಿಎಸ್ಸಿ, ಬಿಬಿಎಂ ಹಾಗೂ ಬಿಕಾಂ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜುಲೈ 20 ರೊಳಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಕಾಲೇಜಿನ ಕಚೇರಿ ಅವಧಿಯಲ್ಲಿ ಖುದ್ದಾಗಿ ಹಾಜರಾಗಿ ಮಾಹಿತಿ ಪಡೆದು ಪ್ರವೇಶ ಪಡೆಯಬಹುದು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಂ. ಸಾವರಕರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಎಐಡಿಎಸ್ಓನ ಪರಿಸರ ಕಾಳಜಿ ಶ್ಲಾಘನೀಯ
ಗುಲ್ಬರ್ಗ/ಶಹಾಬಾದ್: ದೇಶದಲ್ಲಿ ಎಐಡಿಎಸ್ಓ ಏಕ ಮಾತ್ರ ವಿದ್ಯಾರ್ಥಿ ಸಂಘಟನೆಯಾಗಿದ್ದು, ನೈಜ ಹೋರಾಟದ ಮುಂಚೂಣಿಯಲ್ಲಿರುವ ಸಂಘಟನೆಯಾಗಿದೆ. ಪರಿಸರ ರಕ್ಷಣೆಗಾಗಿ ಈ ಸಂಘಟನೆ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದ್ದು, ಸಂಘಟನೆ ಪರಿಸರ ಕಾಳಜಿ ತೋರಿಸುತ್ತದೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಗುರುಗಳಾದ ಅಮೃತಪ್ಪ ಹೇಳಿದರು. ಎಐಡಿಎಸ್ಓ ವತಿಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆ,ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಚವ್ಹಾಣ ಶಿಕ್ಷಣ ಸಂಸ್ಥೆಯ ನಿರ್ದೇಶಕ ವಾಸುದೇವ ಚವ್ಹಾಣ ಮಾತನಾಡಿದರು.
ಲೈಂಗಿಕ ಶಿಕ್ಷಣಕ್ಕೆ ವಿರೋಧ
ರಾಯಚೂರು: ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಿಕೆಗೆ ಮುಂದಾಗಿರುವ ಕ್ರಮವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವಿರೋಧಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ ಮತ್ತಿತರರು, ಅಮೆರಿಕಾ ಮತ್ತಿತರೆ ದೇಶಗಳಲ್ಲಿ ಶಾಲಾ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿಕೆ ಜಾರಿಗೆ ಬಂದ ನಂತರದಲ್ಲಿ ಮೂಲ ಆಶಯಕ್ಕೆ ಹಿನ್ನಡೆಯಾಗಿದ್ದಲ್ಲದೇ ಅಪಾಯಕಾರಿ ಪರಿಣಾಮಗಳನ್ನು ಅಲ್ಲಿ ಅನುಭವಿಸುವಂತಾಗಿದ್ದನ್ನು ರಾಜ್ಯ ಸರ್ಕಾರ ಅರಿಯಬೇಕಿದೆ ಎಂದು ಸಲಹೆ ನೀಡಿದರು.
ರಕ್ಷಣೆಗೆ ಒತ್ತಾಯ
ರಾಯಚೂರು: ಉತ್ತರಾಖಂಡ್ನ ಬದರೀನಾಥ್ ಮತ್ತಿತರ ಯಾತ್ರಾ ಸ್ಥಳಗಳಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಕೊಂಡಿರುವ ರಾಯಚೂರಿನ ಭಕ್ತರನ್ನು ಕೂಡಲೇ ರಕ್ಷಿಸಿ ಕರೆತರುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ. ಈ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮಹಾಸಭಾದ ಜಿಲ್ಲಾ ಶಾಖೆಯಿಂದ ಮನವಿ ಸಲ್ಲಿಸಿ, ಉತ್ತರಾಖಂಡ್ನ ಬದರೀನಾಥ್, ಕೇದಾರ್ ನಾಥ್, ಹರಿದ್ವಾರ, ಉತ್ತರಕಾಶಿಯಲ್ಲಿ ಈಚೇಗೆ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ಅಲ್ಲಿಗೆ ತೆರಳಿದ ಕರ್ನಾಟಕದ ಎರಡು ಸಾವಿರ ಜನತೆ ಯಾವುದೇ ರೀತಿಯ ನೆರವು ದೊರೆಯದೇ ಸಂಕಷ್ಟದಲ್ಲಿದ್ದಾರೆಂದು ಆರೋಪಿಸಿದರು. ರಾಯಚೂರಿನ ಕೆಲವರು ಯಾತ್ರೆಗೆ ತೆರಳಿದ್ದು ಅವರೂ ಅಲ್ಲಿಯೇ ಸಿಲುಕಿದ್ದು, ಕೂಡಲೇ ರಾಜ್ಯ ಸರ್ಕಾರ ಭಕ್ತರ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಹಾಸಭಾದ ಸಭಾಪತಿ ಡಾ. ಆನಂದ ತೀರ್ಥ ಫಡ್ನೀಸ್ ಇದ್ದರು.
ಬೀಳ್ಕೊಡುಗೆ
ಸಿಂಧನೂರು: ನಗರದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಿ.ಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ, ದೀಪದಾನ ಸಮಾರಂಭದಲ್ಲಿ ನಡೆಯಿತು. ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿಯ ರಾಜ್ಯ ಸಂವಾದ ಪ್ರಭಾರಿ ಎಂ. ಭಾಸ್ಕರ್ ಮಾತನಾಡಿದರು. ಯೋಗದ ಬಗ್ಗೆ ಹಾಗೂ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು. ಅತಿಥಿ ಡಾ.ಎಸ್.ವಿ. ಪಾಟೀಲ್ ಮಾತನಾಡಿದರು. ಪ್ರಶಿಕ್ಷಕರಾದ ಬೀರಪ್ಪ ಶಂಭೋಜಿ, ಎಸ್.ಎಸ್. ಹಿರೇಮಠ. ರಮಾದೇವಿ ಶಂಭೋಜಿ, ಕೆ.ಬಿ. ಹವಾಲ್ದಾರ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಪ್ರಶಿಕ್ಷಕಿ ಶಕುಂತಲಾದೇವಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಿಕ್ಷಣಾರ್ಥಿಗಳಾದ ಪಿ.ಮಂಜುಳಾ, ಮಂಜಮ್ಮ ಜವಳಗೇರಾ, ಶಿಲ್ಪಾ ಹಿರೇಮಠ, ಮಲ್ಲಿಕಾರ್ಜುನ, ಬಸವರಾಜ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಶಿಕ್ಷಕರಾದ ಬಾಬುಜಯಶಾಲಿ, ಗಂಗಾಧರ ಹಿರೇಮಠ, ಚಿತ್ರಕಲಾ ಶಿಕ್ಷಕ ಕೃಷ್ಣ, ಸಂಗೀತ ಶಿಕ್ಷಕ ಮಾರುತೇಶ, ಹನುಮಂತಪ್ಪ, ಮೀನಾಕ್ಷಮ್ಮ ಇದ್ದರು. ಗೌರಮ್ಮ ಪ್ರಾರ್ಥಿಸಿದರು. ರಾಜೇಶ್ವರಿ ಸ್ವಾಗತಿಸಿದರು. ಸಿದ್ದಮ್ಮ ವಂದಿಸಿದರು. ಆನಂದ ಜ್ಯೋತಿ ನಿರೂಪಿಸಿದರು.
ಶಾಸಕ, ಸಚಿವರಿಗೆ ನಾಳೆ ಸನ್ಮಾನ
ಜೇವರ್ಗಿ: ಜಿಲ್ಲಾ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಜೇವರ್ಗಿ ಶಾಖೆಯಿಂದ ಜೂ.24ರಂದು ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಶಾಸಕ, ಸಚಿವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣ ಬಾಗೇವಾಡಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 11.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕ್ಷೇತ್ರದ ನೂತನ ಶಾಸಕ ಡಾ. ಅಜಯಸಿಂಗ್ ಸೇರಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಜವಳಿ ಸಚಿವ ಬಾಬುರಾವ ಚಿಂಚನಸೂರ, ವೈದ್ಯಕಿಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಮಾಲೀಕಯ್ಯ ಗುತ್ತೇದಾರ, ಪ್ರಿಯಾಂಕ ಖರ್ಗೆ, ಎ.ಬಿ. ಮಲಕರೆಡ್ಡಿ, ರಾಜಾವೆಂಕಟಪ್ಪನಾಯಕ, ಜಿ. ರಾಮಕೃಷ್ಣ, ಡಾ. ಉಮೇಶ ಜಾಧವ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಕನಕ ಗುರುಪೀಠದ ಲಿಂಗಾನಂದ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣ ಬಾಗೇವಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಲ್ಲಂಪ್ರಭು ಜ್ಯೋತಿ ಬೆಳಗಿಸಲಿದ್ದಾರೆ.
ಸಂಘದ ಚುನಾವಣೆ
ಗುಲ್ಬರ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2013-18ನೇ ಸಾಲಿನ ಚುನಾವಣೆ ಘೋಷಣೆಯಾಗಿದ್ದು, ಜುಲೈ 11 ರಿಂದ 15ರವರೆಗೆ ಸಂಜೆ 4ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ಜುಲೈ 15 ರಂದು ಸಂಜೆ 5ಕ್ಕೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾಗಿದೆ. ಜು. 15 ಸಂಜೆ 5ರವರೆಗೆ ನಾಮಪತ್ರ ಪರಿಶೀಲನೆ ನಡೆಯುವುದು. ಅಂದೇ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಜು. 16 ರಂದು ಸಂಜೆ 4ರವರೆಗೆ ನಾಮಪತ್ರ ವಾಪಸ್ಸು ಪಡೆಯುವುದು. ಜು. 22 ರಂದು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಎಸ್. ಪಾನಗಾಂವ ತಿಳಿಸಿದ್ದಾರೆ.
ಕಾಂಗ್ರೆಸ್ ಹರ್ಷ
ಆಳಂದ: ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಮತ್ತು ಕಾರ್ಮಿಕ ಸಚಿವರಾಗಿ ಪರಿಣಾಮಕಾರಿ ಕೆಲಸ ಮಾಡಿದ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೆ ಖಾತೆ ಸಚಿವ ಸ್ಥಾನ ಲಭಿಸಿರುವುದು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರರಾವ ದೇಶಮುಖ, ಗುರುಶಾಂತ ಪಾಟೀಲ್ ನಿಂಬಾಳ, ಶಿವರಾಜ ಭಾಸಗಿ, ಸೂರ್ಯಕಾಂತ ಕೊರಳ್ಳಿ, ಶರಣು ಭೂಸನೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಗೆ ಅರ್ಜಿ
ಗುಲ್ಬರ್ಗ: ಡ್ರಾಯಿಂಗ್ ಗ್ರೇಡ್ ಪರೀಕ್ಷೆಯನ್ನು ನವೆಂಬರ್ ತಿಂಗಳಲ್ಲಿ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು ನಿರ್ಧರಿಸಿದೆ. ಪರೀಕ್ಷಾ ಶುಲ್ಕ ಹಾಗೂ ನಾಮಿನಲ್ ರೋಲ್ ಸಲ್ಲಿಸಲು, ಪರೀಕ್ಷಾ ಶುಲ್ಕವನ್ನು ಜುಲೈ 10 ಕೊನೆಯ ದಿನ. ಬ್ಯಾಂಕ್ ಹುಂಡಿಯನ್ನು ಪಡೆಯಲು ಜು.13 ಮತ್ತು ನಾಮಿನಲ್ ರೋಲನ್ನು ಹಾಗೂ ಡಿಡಿಯನ್ನು ಮಂಡಳಿಗೆ ರವಾನಿಸುವ ಕೊನೆಯ ದಿನ ಜು.16 ಆಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

