ಆಳಂದ; ಶಿಕ್ಷಕರ ಸಂಘದಲ್ಲಿ ಬಂಡಾಯ ಸ್ಫೋಟ
ಕನ್ನಡಪ್ರಭ ವಾರ್ತೆ ಆಳಂದ ಜೂ.28
ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅಧ್ಯಕ್ಷರ ರಾಜಿನಾಮೆಗೆ ಪಟ್ಟುಹಿಡಿದ ಘಟನೆ ಗುರುವಾರ ನಡೆದ ಶಿಕ್ಷಕರ ಸಂಘದ ಸಭೆಯಲ್ಲಿ ನಡೆಯಿತು.
ಹಲವು ದಿನಗಳಿಂದ ಸಂಘದಲ್ಲಿದ್ದ ಬಂಡಾಯ ಗುರುವಾರ ನಡೆದ ಸಭೆಯಲ್ಲಿ ಸ್ಫೋಟಗೊಂಡಿದೆ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ.
ಪಟ್ಟಣದ ಗುರು ಭವನದಲ್ಲಿ 9 ತಿಂಗಳ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಅಧ್ಯಕ್ಷರ ವರ್ತನೆ ಆಕ್ರೋಶ ವ್ಯಕ್ತಪಡಿಸಿ ರಾಜಿನಾಮೆಗೆ ಒತ್ತಾಯಿಸಿದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಿಡಿಕಾರಿದರು.
ಮೇ 2009ರಿಂದ 2013ರವರೆಗೆ 4,52,108 ಜಮಾ ಆಗಿದೆ. 4,97,601 ಖರ್ಚಾಗಿದೆ. ಅಂದರೆ ಸಂಘಕ್ಕೆ 45,493 ಸಾಲವಿದೆ ಎಂದು ಕಾರ್ಯದರ್ಶಿ ನರಸಪ್ಪ ಬಿರಾದಾರ ವಿವರಿಸಿದಾಗ ಸದಸ್ಯರು ಆಕ್ಷೇಪಿಸಿದ್ದಾರೆ. ಇಷ್ಟು ಹಣ ಖರ್ಚು ಯಾವ ಕೆಲಸಕ್ಕಾಗಿ ಮಾಡಲಾಗಿದೆ ಎಂದು ಶಿಕ್ಷಕರು ಪ್ರಶ್ನಿಸಿದಾಗ, ಶಿಕ್ಷಕರ ದಿನಾಚರಣೆ, ಶೈಕ್ಷಣಿಕ ಸಮಾವೇಶ ಪ್ರವೇಶ ಇನ್ನಿತರ ಖರ್ಚು ವೆಚ್ಚಿನ ಬಾಬತ್ತು ಗದ್ದಲಕ್ಕೆ ಕಾರಣವಾಗಿತ್ತು.
2009ರಲ್ಲಿ ಸುಭಾಷ ಮಾನಾಜಿ ಅಧ್ಯಕ್ಷರಾಗಿದ್ದಾಗ ಸಂಘದ ಖಾತೆಯಲ್ಲಿ ಹಣವಿತ್ತು. ಗುರುಭವನ ನವೀಕರಣಕ್ಕೆ ಶಿಕ್ಷಕರಿಂದ ಚಂದಾ ಸಂಗ್ರಹಿಸಿ ಸುಣ್ಣ-ಬಣ್ಣ ಮಾಡಿ ಸುವ್ಯವಸ್ಥೆ ಮಾಡಿದ ಮೇಲೂ ಸಾಲ ತೋರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ಗುಡುಗಿದರು.
ಗುರುಭವನದಲ್ಲಿ ಮದುವೆ ಇನ್ನಿತರ ಖಾಸಗಿ ಕಾರ್ಯಕ್ರಮಗಳಿಂದ ಬಂದ ಬಾಡಿಗೆ, ಶಿಕ್ಷಕರ ಸದಸ್ಯತ್ವ ನಿಧಿ, ಸೈಕಲ್ ದಾಸ್ತಾನಿನಿಂದ ಬಂದ ಬಾಡಿಗೆ ಎಲ್ಲ ಹಣದ ವಿವರಣೆ ನೀಡಬೇಕು ಎಂದರು.
ಸಂಘದ ಖಾತೆ ಖಜಾಂಚಿ, ಕಾರ್ಯದರ್ಶಿ ಹೆಸರಿನಲ್ಲಿರಬೇಕು. ಆದರೆ ಇದುವರೆಗೂ ಕಾರ್ಯದರ್ಶಿ ಒಬ್ಬರ ಹೆಸರಿನಲ್ಲೇ ಇದೆ. ಕಿಣ್ಣಿ ಅಬ್ಬಾಸ್ ಶಾಲೆಯಲ್ಲಿದ್ದ ಪ್ರಬಾರಿ ಮುಖ್ಯಗುರು ಚಂದ್ರಶಾ ಪೂಜಾರಿ ಅಮಾನತ್ತಾದಾಗ ಶಿಕ್ಷಣಾಧಿಕಾರಿ ವರ್ತನೆ ಕುರಿತು ಮತ್ತು ತನಗಾದ ಅನ್ಯಾಯ ಕೇಳಲು ಸಂಘದ ಅಧ್ಯಕ್ಷರು ಸಂಪರ್ಕಿಸಿದಾಗ ಬೇಜವಾಬ್ದಾರಿ ಮಾತುಗಳನ್ನಾಡಲಾಗಿದೆ ಎಂದು ಅಧ್ಯಕ್ಷ ಬಸವರಾಜ ಕಾಮಶೆಟ್ಟಿ ವಿರುದ್ಧ ಕೆಲವರು ಹರಿಹಾಯ್ದರು ಎನ್ನಲಾಗಿದೆ.
ಶಿಕ್ಷಕಿ ಸುರೇಖಾ ಮಾತನಾಡಿ, ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಸಂಘವಿದೆ. ಆದರೆ ಅಧ್ಯಕ್ಷರು ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿದು ಶಿಕ್ಷಕರ ಸಮಸ್ಯೆಗಳಿಗೆ ನಿಷ್ಕಾಳಜಿ ತೋರಿದ್ದು, ಕೂಡಲೇ ಅಧ್ಯಕ್ಷರು ರಾಜಿನಾಮೆ ನೀಡಬೇಕು ಎಂದಾಗ ಅನೇಕರು ಧ್ವನಿಗೂಡಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಬಟ್ಟೆ, ಪುಸ್ತಕಗಳು ನೇರವಾಗಿ ಸಿಆರ್ಸಿ ಕೇಂದ್ರ ಮೂಲಕ ಶಾಲೆಗಳಿಗೆ ಸಾಗಿಸದೆ ಮುಖ್ಯಗುರುಗಳನ್ನು ಹಮಾಲಿಗಳಂತೆ ಅಲೆದಾಡಿ ಪುಸ್ತಕ ತೆಗೆದುಕೊಂಡು ಹೋಗುವಂತಾದರೂ ಸಂಘದವರು ಕೇಳುತ್ತಿಲ್ಲ ಎಂದು ಶಿಕ್ಷಕರು ಗೊಣಗಿದರು.
ಎಲ್ಲ ಪ್ರಶ್ನೆಗಳಿಗೆ ಅಧ್ಯಕ್ಷ, ಕಾರ್ಯದರ್ಶಿ ನಿಷ್ಕ್ರೀಯರಾಗಿದ್ದರಲ್ಲದೆ, ಪದಾಧಿಕಾರಿಗಳ ಹಲವು ಪ್ರಶ್ನೆಗಳಿಗೆ ಅಧ್ಯಕ್ಷರು ತಡವರಿಸಿದರೆ, ಕಾರ್ಯದರ್ಶಿ ಕೆಲವೊಂದು ತಪ್ಪುಗಳು ಒಪ್ಪಿಕೊಂಡು ಮೌನ ವಹಿಸಿದ್ದರು ಎನ್ನಲಾಗಿದೆ.
ಎಲ್ಲ ಪ್ರಕ್ರಿಯೆ ಕಂಡು ಸಭೆಯಲ್ಲಿದ್ದ ಸದಸ್ಯರು ಅಧ್ಯಕ್ಷರ ರಾಜಿನಾಮೆಗೆ ಒತ್ತಾಯಿಸಿದರು. ಸಭೆಯಲ್ಲಿ ಖಜಾಂಚಿ ಗುರುನಾಥ ಭಾವಿ, ಸಂಘಟನಾ ಕಾರ್ಯದರ್ಶಿ ಚಂದ್ರಕಲಾ, ಸುರೇಖಾ ಶ್ರೀಶೈಲ್ ಮಾಡಿಯಾಳೆ, ಶಿವಶರಣಪ್ಪ ಪಾಟೀಲ್, ಶಿವುಪುತ್ರ ಭಕರೆ, ಪೀರಪ್ಪ ಡೊಳ್ಳೆ, ರಾಜ್ಯ ಪ್ರತಿನಿಧಿ ಅಣ್ಣಾರಾವ ಮಂಗಾಣೆ, ಮಹಾಂತಪ್ಪ ಜಕ್ಕಾಣಿ, ಜ್ಞಾನಸಾಗರ ಪಾಟೀಲ್, ಅಂಬಾರಾಯ ಕರಹರಿ, ಶಿಕ್ಷಕಿ ಶೋಭಾ, ಸುಜಾತ, ಇತರರು ಸಭೆಯಲ್ಲಿ ಹಾಜರಿದ್ದರು ಎಂದು ಶ್ರೀಶೈಲ್ ಮಾಡಿಯಾಳ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

