ಗುಲ್ಬರ್ಗಾ

ಸಂಪುಟ ಉಪ ಸಮಿತಿ ಕಾಲಹರಣ ತಂತ್ರ!

Published On :

ಕ.ಪ್ರ.ವಾರ್ತೆ  ಗುಲ್ಬರ್ಗ  ಜೂ.30
ಹೈದ್ರಾಬಾದ್-ಕರ್ನಾಟಕ 6 ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿ ಸಂವಿಧಾನದಲ್ಲಿ ತಿದ್ದುಪಡಿ ಅನುಚ್ಛೇದ 371ನೇ ಜೆ ಯನ್ನು ಸೇರ್ಪಡೆ ಮಾಡಿ 6 ತಿಂಗಳಾದರೂ ನಿಯಮ ರೂಪಿಸಿ ಕೇಂದ್ರದ ಹಸಿರು ನಿಶಾನೆ ಪಡೆಯುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆಯೆ ಎಂಬ ಗುಮಾನಿ ಈ ಭಾಗದ ಜನರನ್ನು ಕಾಡಲಾರಂಭಿಸಿದೆ.
ಏಕೆಂದರೆ ಕಲಂ 371 (ಜೆ) ಕೇಂದ್ರದಿಂದ ವಿಧೇಯಕವಾಗಿ ಅಂಗೀಕಾರ ಮುದ್ರೆ ಪಡೆದು 6 ತಿಂಗಳಾದರೂ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ... ಎಂಬಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಕರ್ತವ್ಯ ನಿಭಾಯಿಸುವಲ್ಲಿ ವಿನಾಕಾರಣ ವಿಳಂಬ ಮಾಡುತ್ತಿರುವ ಭಾವನೆ ಮೂಡಲಾರಂಭಿಸಿದೆ.
ಹಿಂದೆಯೇ ನಿರ್ಧಾರವಾಗಿತ್ತು: ಅಂತಿಮ ರೂಪ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಸಿಎಂ ಜಗದೀಶ ಶೆಟ್ಟರ್ ಗುಲ್ಬರ್ಗದಲ್ಲಿ ನಡೆಸಿದ್ದ ಸಂಪುಟ ಸಭೆಯಲ್ಲಿ ನಿಯಮ ರೂಪಿಸುವ ಮುನ್ನ ಎಲ್ಲೆಲ್ಲಿ ಈ ವಿಧೇಯಕದಡಿ ಸೌಕರ್ಯ ಈಗಾಗಲೇ ಪಡೆಯಲಾಗಿದೆಯೋ ಅಂತಹ ರಾಜ್ಯಗಳಿಗೆ ಭೇಟಿ ಕೊಟ್ಟು ಅಧ್ಯಯನ ಮಾಡಲು ಅಧಿಕಾರಿಗಳ ತಂಡ ಕಳುಹಿಸುವ ನಿರ್ಣಯ ಅಂಗೀಕರಿಸಿತ್ತು.
ಜೊತೆಗೆ, ಸಂಪುಟ ಉಪ ಸಮಿತಿ ರಚಿಸಿ ನಿಯಮಗಳಿಗೆ ಅಂತಿಮ ರೂಪ ನೀಡುವ ನಿರ್ಣವೂ ಗುಲ್ಬರ್ಗ ಸಂಪುಟ ಸಭೆಯಲ್ಲೇ ಅಂಗೀಕಾರವಾಗಿತ್ತು. ಆದರೆ, ಬಿಜೆಪಿ ಸರ್ಕಾರ ಇರುವವರೆಗೂ ಈ ವಿಚಾರ ತಣ್ಣಗಿತ್ತು. ಚುನಾವಣೆ ಕಾವು ಜೋರಾಗಿದ್ದರಿಂದ ಯಾವ ಹಂತದಲ್ಲಿಯೂ ಸಂಪುಟ ನಿರ್ಣಯಗಳಿಗೆ ಚಾಲನೆ ದೊರಕಲೇ ಇಲ್ಲ. ಈ ಎರಡೂ ನಿರ್ಣಯಗಳಿಗೆ ಜನತೆ, ವಿವಿಧ ಸಂಘಟನೆಗಳು, ಹೈ-ಕ ಹೋರಾಟ ಸಮಿತಿ ಹೀಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿತ್ತು.
ಹೊಸ ಕಸರತ್ತು ಬೇಕಿತ್ತಾ: ಇದೀಗ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಉಪ ಸಮಿತಿ ರಚಿಸಿದ್ದಾರೆ. ಅದು ನೀಡುವ ವರದಿ ಆಧರಿಸಿ ನಿಯಮ ರಚನೆ ಮಾಡುವ ಮಾತುಗಳನ್ನಾಡಿದ್ದಾರೆ. ಆ ಸಮೀತಿ ಹೈ-ಕ ನೆಲದ 6 ಜಿಲ್ಲೆಗಳಲ್ಲೆಲ್ಲಾ ಪ್ರವಾಸ ಹೊರಟಿದೆ. ಅಷ್ಟೆ ಅಲ್ಲ, ತಾಲೂಕು, ಹೋಬಳಿವಾರು ಪ್ರವಾಸ ಕೈಗೊಂಡು ಜನಾಭಿಪ್ರಾಯ ಕಲೆ ಹಾಕುವ ಹೇಳಿಕೆ ನೀಡಿದೆ. ಇದೇನಿದು ಹೊಸ ಕಸರತ್ತು ಎಂದು ಜನತೆ ಹೌಹಾರಿದ್ದಾರೆ.
ಕಲಂ 371 ವಿಧೇಯಕದ ಅಡಿಯಲ್ಲಿ ಕೇಂದ್ರ ಸೂಚಿಸಿರುವ ಉದ್ಯೋಗ, ಪ್ರದೇಶ ಅಭಿವೃದ್ಧಿ ಮಂಡಳಿ, ವೃತ್ತಿ ಶಿಕ್ಷಣ ಮೀಸಲಾತಿಯಂತಹ  ಮಹತ್ವದ 3 ಸಂಗತಿಗಳನ್ವಯ ಈ ಭಾಗಕ್ಕೆ, ಜನತೆಗೆ, ಪ್ರಗತಿಗೆ ಅದ್ಹೇಗೆ ಅನುಕೂಲವಾಗುವುದೋ ಅಂತಹ ನಿಯಮಗಳು ಸಚಿವಾಲಯದ ಹಂತದಲ್ಲೇ ರೂಪ ಪಡೆಯಬೇಕಾದ್ದು ಸೂಕ್ತ. ಇದಕ್ಕೆಲ್ಲ ಸಂಘ- ಸಂಸ್ಥೆಗಳ ಅಭಿಪ್ರಾಯ ಆಲಿಸುವುದಾಗಲಿ, ಜಿಲ್ಲೆ, ತಾಲೂಕುವಾರು ಸಂಚಾರ ನಡೆಸುವುದು ಅದೆಷ್ಟು ಸಮಂಜಸ ಎಂಬ ಪ್ರಶ್ನೆ ಎದ್ದಿದೆ.
ಕಲಂ 371 ವಿಧೇಯಕ ಜಾರಿಯಲ್ಲಿರುವ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಬೆಳವಣಿಗೆ ಅಧ್ಯಯನ ಮಾಡುವುದು ಸೂಕ್ತವಾಗಿತ್ತು. ಆದರೆ,  ಕಾಂಗ್ರೆಸ್ ಸರ್ಕಾರ ಆರಂಭಿಸಿರುವ ಈ ಹೊಸ ಕಸರತ್ತು ಪ್ರಚಾರ ಕೇಂದ್ರಿಕೃತವಾಗಿದೆ ಎಂದು ಇಲ್ಲಿನ ಜನತೆ  ಅಲವತ್ತುಕೊಂಡಿದ್ದಾರೆ.
ಸಿಹಿಫಲ ವಿಳಂಬ ನಿಶ್ಚಿತ: ಇಷ್ಟೊತ್ತಿಗಾಗಲೇ ನಿಯಮಗಳು ರೂಪ ಪಡೆದಿದ್ದರೆ ಪ್ರಸ್ತುತ ಸಿಇಟಿಯಲ್ಲಿ ಹೈ-ಕ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗುತ್ತಿತ್ತು. ಇದಲ್ಲದೆ ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಯವರು ಆರಂಭಿಸಿರುವ ನೇಮಕಾತಿಗಳಲ್ಲಿಯೂ ಇಲ್ಲಿನ ನಿರುದ್ಯೋಗಿಗಳಿಗೆ ಸಿಂಹಪಾಲು ದೊರಕುತ್ತಲಿತ್ತು.
ಆದರೀಗ ನಿಯಮಗಳ ರೂಪಿಸುವ ದಾರಿಯಲ್ಲಿಯೇ ಈ ಪರಿಯ ಕಸರತ್ತುಗಳು ಶುರುವಾಗಿದ್ದರಿಂದ ಈ ಶೈಕ್ಷಣಿಕ ವರ್ಷದ ಮೈಡಿಕಲ್, ಇಂಜಿನಿಯರಿಂಗ್, ದಂತವೈದ್ಯ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಹೈ- ಕ ವಿದ್ಯಾರ್ಥಿಗಳಿಗೆ ಅವರ ಪಾಲು ಕೈತಪ್ಪಿ ಹೋದಂತಾಗಿದೆ.
ಹೀಗೆ ಉದ್ಯೋಗ, ವೃತ್ತಿ ಶಿಕ್ಷಣ ಹಾಗೂ ಅಭಿವೃದ್ಧಿಯ ರಂಗದಲ್ಲಿ ಅದಾಗಲೇ ಬರಬೇಕಿದ್ದ ಪಾಲೂ ಸಹ ಈ ವಿಲಂಬತನ ಧೋರಣೆಯಿಂದ ಬಾರದಂತಾಗಿದೆ. ರಾಜ್ಯ ಸರ್ಕಾರ ಅದ್ಯಾಕೆ ಉಪ ಸಮಿತಿ ರಚಿಸಿತೋ.. ಎಂದು ಇಲ್ಲಿನ ಪ್ರಜ್ಞಾವಂತರೆಲ್ಲರೂ ತಲೆ ಚಚ್ಚಿಕೊಳ್ಳುವಂತಾಗಿದೆ.
ಇದೆಲ್ಲ ವ್ಯರ್ಥ
ಕಸರತ್ತು
ಹೈ-ಕ ಹೋರಾಟ ಸಮಿತಿ ರೂವಾರಿ ವೈಜನಾಥ ಪಾಟೀಲ್ ಅವರಂತೂ ಸಂಪುಟ ಉಪ ಸಮೀತಿ ಯಾಕೆ, ಇದೆಲ್ಲ ವ್ಯರ್ಥ ಕಸರತ್ತು ಎಂದು ಅದಾಗಲೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಪಿಎಆರ್ ಕಾರ್ಯದರ್ಶಿ ಸಂಜೀವ ಕುಮಾರ್ ರಚಿಸಿರುವ ಕರಡು ನಿಯಮಗಳೇ ಜಾರಿಯಾಗಲಿ ಎಂದೂ ಆಗ್ರಹಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಹೈ- ಕ ಭಾಗದ ಜನಮನದ ಭಾವನೆಗಳಿಗೆ ಕಿವಿಗೊಡದೆ ಸಂಪುಟ ಉಪ ಸಮೀತಿ ಎಂಬ ಮತ್ತೊಂದು ಕಸರತ್ತು ಶುರು ಮಾಡಿದೆ.
ಸಮಿತಿಗೆ ಎಚ್ಕೆ ಪಾಟೀಲರನ್ನು ಅಧ್ಯಕ್ಷರನ್ನಾಗಿಸಿ, ಹೈ-ಕ ಭಾಗದ ಜಿಲ್ಲೆಗಳನ್ನು ಪ್ರತಿನಿಧಿಸುವ ಶಿವರಾಜ ತಂಗಡಗಿ (ಕೊಪ್ಪಳ), ಖಮರುಲ್ ಇಸ್ಲಾಂ ಮತ್ತು ಡಾ. ಶರಣಪ್ರಕಾಶ ಪಾಟೀಲ್ (ಗುಲ್ಬರ್ಗ), ಬಾಬುರಾವ ಚಿಂಚನ್ಸೂರ್ (ಯಾದಗಿರಿ) ಪಿಟಿ ಪರಮೇಶ್ವರ ನಾಯಕ (ಬಳ್ಳಾರಿ) ಇವರನ್ನು ಸದಸ್ಯರನ್ನಾಗಿಸಿದೆ. ಈಗಾಗಲೇ ಸಂಮಿತಿ 2 ಸಭೆಗಳನ್ನು ನಡೆಸಿದ್ದು, ಬೇಗ ವರದಿ ಕೊಡುವುದಾಗಿ ಹೇಳಿದೆಯಾದರೂ ವಿಳಂಬತನ ಕಾಡುವ ಆತಂಕ ಮಾತ್ರ ದೂರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು 3
ಜಿಲ್ಲೆಗಳ ಸಭೆ
ಎಚ್.ಕೆ. ಪಾಟೀಲ್ ನೇತೃತ್ವದ ಈ ಸಚಿವ ಸಂಪುಟದ ಉಪ ಸಮಿತಿಯು ಹೈದ್ರಾಬಾದ ಕರ್ನಾಟಕ ಪ್ರದೇಶದ  ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ಜು.1 ರಂದು ಗುಲ್ಬರ್ಗದಲ್ಲಿ ಸಭೆ ನಡೆಸಲು ಉದ್ದೇಶಿಸಿದೆ. ಇಡೀ ದಿನ ಗುಲ್ಬರ್ಗ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಜನತೆ, ಸಂಘಟನೆಗಳ ಅಭಿಪ್ರಾಯ ಸಮಿತಿ ಆಲಿಸಲಿದೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಇರುವ ವಿಕಾಸ ಭವನದ ಸಭಾಂಗಣದಲ್ಲಿ ಸಮೀತಿ ಸಭೆಗಾಗಿ ಸಕಲ ತಯಾರಿಗಳನ್ನು ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ವರದಿ ನೀಡಲಿದ್ದಾರೆ.
ಸಂಪುಟ ಸಮಿತಿ
ಬೇಕಾಗಿರಲಿಲ್ಲ
ವಿಧೇಯಕದ ಅನ್ವಯ ಡಿಪಿಎಆರ್ ನಿಯಮ ಸಿದ್ಧಪಡಿಸಿದೆ. ಸರ್ಕಾರ ಸಂಪುಟ ಉಪ ಸಮೀತಿ ಯಾಕೆ ರಸಿಚಿ ಈ ಕಸರತ್ತಿಗೆ ಮುಂದಾಯ್ತೋ ಗೊತ್ತಿಲ್ಲ. ಇಂತಹ ಕಸರತ್ತು ಈ ಸಂದರ್ಭದಲ್ಲಿ ಅನಗತ್ಯ ಎಂಬುದು ನನ್ನ ಅಭಿಮತ.ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ನಿಯಮ ಬೇಗ ರಚನೆಯಾಗಿ ಜಾರಿಗೊಂಡಲ್ಲಿ ಹೈ-ಕ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ. ಆದರೆ ಈ ಹೊಸ ಕಸರತ್ತಿನಿಂದ ನಿಯಮಗಳ ರಚನೆಯಲ್ಲಿಯೂ ವಿನಾಕಾರಣ ವಿಳಂಬವಾಗಲಿದೆ.
- ವೈಜನಾಥ ಪಾಟೀಲ್,
ಅಧ್ಯಕ್ಷರು, ಹೈ-ಕ
ಹೋರಾಟ ಸಮಿತಿ

ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.