ಗುಲ್ಬರ್ಗಾ

ಶಿವ ಶರಣೆಯರ ವಚನ ಬದುಕಿಗೆ ಚೇತನ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ. 29
ಶರಣರ ವಚನಗಳನ್ನು ಅನುಭಾವದ ನೆಲೆಗಳಲ್ಲಿ ಅರ್ಥೈಸುವವರ ಕೊರತೆ ಇದೆ. ಈ ನಿಟ್ಟಿನಲ್ಲಿ ಶಿವ ಶರಣೆಯರ ವಚನಗಳನ್ನು ಅರ್ಥೈಸಿಕೊಂಡು ನಡೆದಾಗ ಆದರ್ಶ ಜೀವನ ನಡೆಸಲು ಸಾಧ್ಯ ಎಂದು 6ನೇ ಮಹಾದೇವಿಯಕ್ಕ ಸಮ್ಮೇಳನದ ಸರ್ವಾಧ್ಯಕ್ಷೆ ಶಾರದಾ ಅರವಿಂದ ಜತ್ತಿ ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಶನಿವಾರ ಬಸವ ಸಮಿತಿ ಅಕ್ಕನ ಬಳಗವು ಆಯೋಜಿಸಿದ್ದ 6ನೇ ಮಹಾದೇವಿಯಕ್ಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಅಕ್ಕಮಹಾದೇವಿ ಸೇರಿದಂತೆ ಇತರ ಶಿವಶರಣೆಯರ ವಚನಗಳನ್ನು ಎಲ್ಲ ಮಹಿಳೆಯರು ಅರ್ಥೈಸಿಕೊಂಡು ಜೀವನ ಸಾಗಿಸಬೇಕು ಎಂದರು.
ಜೀವನದ ಘನತೆ ಅರಿಯಬೇಕು: ನಾವೆಲ್ಲರೂ ನಮ್ಮೊಳಗಿನ ಅಂರ್ತಗತವಾಗಿರುವ ಮಹಾಘನವನ್ನು ಅರಿಯಬೇಕಾಗಿದೆ. ಈ ಅರಿವು ಮೂಡದೆ ಹೋದರೆ, ಅಂಥವರ ಬದುಕು ಅರ್ಥಹೀನವಾಗುತ್ತದೆ. ಈ ದಿಶೆಯಲ್ಲಿಯೇ ಅಂದಿನ ಈ ಶರಣೆಯರು ಕೂಡ ಅಂತರಂಗದ ಘನವನ್ನು ಆವಿಷ್ಕರಿಸುತ್ತ ಹೊರಟವರು.  ಈ ಆವಿಷ್ಕಾರಕ್ಕೆ ಬಸವಣ್ಣನವರೇ ಪ್ರೇರಣೆ. ಈ ನಿಟ್ಟಿನಲ್ಲಿ  ಇಂದಿನ ಮಹಿಳಾ ಸಮಾಜ ಸಾಗಬೇಕಾಗಿದೆ ಎಂದರು.
12ನೇ ಶತಮಾನದ ಶರಣೆಯರಂತೆ ನಮ್ಮೆಲ್ಲರ ಚಿತ್ತದ ಅಗ್ನಿ ಪ್ರಜ್ವಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅಂದು- ಇಂದು ಹಾಗೂ ಮುಂದಿನ ಬೆಳವಣಿಗೆಯನ್ನು ಆಲೋಚಿಸಬೇಕಾಗುತ್ತದೆ.  
ಕೇವಲ ಅಂದಿನ ವಿಷಯಗಳನ್ನು ವೈಭವೀಕರಿಸುತ್ತಾ ಹೊರಟರೆ, ಇಂದಿನ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಇಂದಿನ ಸ್ಥಿತಿ ಸುಧಾರಿಸದೆ ಹೋದರೆ ಮುಂದಿನ ಭವಿಷ್ಯವಂತು ಹೇಳತೀರದು ಎಂದರು.
ವಿಶ್ವಗುರು  ಬಸವಣ್ಣ ಅವರೇ ಹೇಳುವಂತೆ, ಅಕ್ಕನ ವ್ಯಕ್ತಿತ್ವ ಬಹು ಎತ್ತರದ್ದು,  ಇಂತಹ ಅಪರೂಪದ ವ್ಯಕ್ತಿತ್ವ ಅಂದಿನ ಅನುಭವ ಮಂಟಪದಲ್ಲಿ ಅನರ್ಘ್ಯರತ್ನವಾಗಿ ಮೂಡಿಬಂದಿದ್ದು ಶರಣ ಸಂಕುಲದ ಸೌಭಾಗ್ಯ. ಈ ನಿಟ್ಟಿನಲ್ಲಿ ಇಂದು ನಾವೆಲ್ಲರೂ ರೂಪಿಸಿಕೊಳ್ಳಬೇಕಾದರೆ ನಮ್ಮನ್ನು ನಾವು ಮೊದಲು ಅರಿಯಬೇಕಾಗಿದೆ ಎಂದರು.
ಹೆಣ್ಣಿನಿಂದ ಬದಲಾವಣೆ ಸಾಧ್ಯ: ಪ್ರಸ್ತುತ ಸ್ಥಿತಿಯಲ್ಲಿ ಪುರುಷ ತನ್ನ ಸಾಕ್ಷಿಪ್ರಜ್ಞೆ ಮರೆತು ಸ್ತ್ರೀಯರ ಶೋಷಣೆ ಮತ್ತು ಅತ್ಯಾಚಾರ ತನ್ನ ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿದಾನೆ. ಇಂತಹ ಪುರುಷ ಪ್ರವೃತ್ತಿ ಮತ್ತು ಮನೋಸ್ಥಿತಿ ಬದಲಾಯಿಸುವ ಕೆಲಸ ಪ್ರಸ್ತುತ ಮಹಿಳೆಯರು ಮಾಡಬೇಕಾಗಿದೆ ಎಂದರು.
ತಾರತಮ್ಯ ಸಲ್ಲ: ಆತ್ಮಕ್ಕೆ ಲಿಂಗಭೇದವಿಲ್ಲ, ಹೆಣ್ಣು ಮಾಯೆಯಲ್ಲ, ಹೆಣ್ಣು ಅಸ್ಪೃಶ್ಯಳಲ್ಲ, ಹೆಣ್ಣು ಪ್ರತ್ಯಕ್ಷ ದೇವತೆ, ಪರಸ್ತ್ರೀ ಪಾರ್ವತಿ ಸಮಾನ, ದಾಂಪತ್ಯ ಧರ್ಮ ಶ್ರೇಷ್ಠ ವಾದದು ಎಂಬ 6 ಸೂತ್ರಗಳನ್ನು ಆಧರಿಸಿ ಶಿವಶರಣೆಯರು ಪುರುಷ ಮತ್ತು ಸ್ತ್ರೀ ತಾರತಮ್ಯ ಬೇಧಿಸಲು ಪ್ರಯತ್ನಿಸಿದರು ಎಂದರು.
ಬಸವ ಸಮಿತಿ ಅಕ್ಕನ ಬಳಗದ ಅಧ್ಯಕ್ಷೆ ವಿಲಾಸವತಿ ಖೂಬಾ ಪ್ರಾಸ್ತಾವಿಕವಾಗಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯದಲ್ಲಿರುವ ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಅವರಿಗೊಂದು ವೇದಿಕೆ ಕಲ್ಪಿಸಿ ಅವರ ಪ್ರತಿಭೆಗೆ ಪ್ರೋತ್ಸಾಹಿಸಲು ಮತ್ತು ಅಕ್ಕಮಹಾದೇವಿಯ ವಚನಗಳನ್ನು ಮಹಿಳೆಯರಿಗೆ ತಲುಪಿಸಲು ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಶರಣಮ್ಮ ಅಂಬಲಗಿ, ಕರುಣಾದೇವಿ ಧನ್ನೂರ್, ಡಾ. ಶಕುಂಕಲಾ ದುರಗಿ, ಮಂಜುಳಾ, ಅನುಸೂಯಾ ನಡಕಟ್ಟಿ, ಅರವಿಂದ ಜತ್ತಿ, ಭುವನೇಶ್ವರಿ, ಶಕುಂತಲಾ ತಂಬಾಕೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶರಣೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೀಲು ಚವ್ಹಾಣ ಇತರರು ನೃತ್ಯ ಪ್ರದರ್ಶಿಸಿದರು. ಇದೆ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷೆ ಶಾರದ ಜತ್ತಿ ಮತ್ತು ಅರವಿಂದ ಜತ್ತಿ ದಂಪತಿಯನ್ನು ಸನ್ಮಾನಿಸಲಾಯಿತು.
ಸಮ್ಮೇಳನಕ್ಕೂ ಮುನ್ನ ಬೆಳಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ಮತ್ತು ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಬಸವೇಶ್ವರ ವೃತ್ತದಿಂದ ಅನುಭವ ಮಂಟಪದವರೆಗೆ ಮಹಾದೇವಿಯಕ್ಕ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಶರಣೆ ಶರಣಮ್ಮ ಜಂಬಗಿ ಈ ಮೆರವಣಿಗೆಗೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.