ಸುರಪುರದಲ್ಲಿ ಕುಡಿವ ನೀರಿನ ಸಮಸ್ಯೆ: ಜೆಡಿಎಸ್ನಿಂದ ಉಪವಾಸ ಸತ್ಯಾಗ್ರಹ
ಸುರಪುರ: ಪಟ್ಟಣದ 27 ವಾರ್ಡುಗಳಲ್ಲಿ ಸಮರ್ಪಕವಾಗಿ ಕುಡಿವ ನೀರು ಸರಬರಾಜು ಮಾಡದಿದ್ದರೆ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಇಲ್ಲಿನ ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಎಚ್ಚರಿಸಿದ್ದಾರೆ.
ಉಸ್ತಾದ ಮಂಜಿಲ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಜನತೆ ಕಳೆದ 20 ದಿನಗಳಿಂದ ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ದಿನಬೆಳಗಾದರೆ ಮಹಿಳೆಯರು ಮಕ್ಕಳು ಖಾಲಿ ಕೊಡ ಹಿಡಿದು ಗಲ್ಲಿ ಗಲ್ಲಿಗಳಲ್ಲಿ ನೀರಿಗಾಗಿ ಓಡಾಡುತ್ತಿದ್ದಾರೆ. ನೀರು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ತೋರುವ ನಿಷ್ಕಾಳಜಿಗೆ ಪಟ್ಟಣದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪುರಸಭೆ ವಿಫಲ: ಪ್ರತಿ ವರ್ಷವೂ ಬೇಸಿಗೆ ಸಮಯದಲ್ಲಿ ನದಿಯಲ್ಲಿ ನೀರಿನ ಕೊರತೆಯಾಗಿ ಪಟ್ಟಣದ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂಬ ವಾಸ್ತವಿಕ ಸತ್ಯ ಗೊತ್ತಿದ್ದೂ ಅಧಿಕಾರಿಗಳು ಪೂರ್ವತಯಾರಿ ಮಾಡಿಕೊಂಡಿಲ್ಲ. ಆದರೆ ಪೈಪ್ಗಳು ಒಡೆದಿವೆ ಎಂಬುದು ಸೇರಿದಂತೆ ಇನ್ನಿತರ ಕುಂಟು ನೆಪಗಳನ್ನು ಹೇಳುತ್ತಿರುವ ಪುರಸಭೆ ಮುಂಜಾಗ್ರತೆ ಕ್ರಮವಾಗಿ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಬೇಸಿಗೆ ಆರಂಭದ ದಿನಗಳಾದ್ದರಿಂದ ಪಟ್ಟಣದ 27 ವಾರ್ಡುಗಳಲ್ಲಿ ನೀರಿನ ಹಾಹಾಕಾರ ಎದ್ದಿದೆ. ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಶೆಳ್ಳಗಿ ಬಳಿ ನದಿಯಲ್ಲಿ ರಿಂಗ್ ಬಾಂಡ್ ನಿರ್ಮಿಸಿ ಜಾಕವೆಲ್ಗೆ ಸಮರ್ಪಕವಾಗಿ ನೀರು ಹರಿದು ಬರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲಿಯ ಸಮಸ್ಯೆ ಇತ್ಯರ್ಥವಾಗುವವರೆಗೂ ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಪಕ್ಷದ ವತಿಯಿಂದ ನಾಗರಿಕರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

