ವಿದ್ಯುತ್ ಕಳ್ಳತನ; 42 ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.17
ಜೆಸ್ಕಾಂನ ಜಾಗೃತ ದಳ ಹಾಗೂ ಅಧಿಕಾರಿಗಳ ತಂಡ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಕಳ್ಳತನ ಪತ್ತೆ ಹಚ್ಚಲು ಹಂತ ಹಂತವಾಗಿ ಸಾಮೂಹಿಕ ದಾಳಿ ನಡೆಸುವ ಯತ್ನ ಆರಂಭಿಸಿದೆ.
ಇದರ ಪ್ರಥಮ ಹೆಜ್ಜೆಯಾಗಿ ಮಾ.13ರಂದು ನಗರದ ಲಾಲಗಿರಿ, ಆಶ್ರಯ ಕಾಲನಿ ಮತ್ತು ರಾಣೇಶ ಪೀರ್ ದರ್ಗಾ ಬಡಾವಣೆಗಳಲ್ಲಿ ಸಾಮೂಹಿಕವಾಗಿ ದಾಳಿ ನಡೆಸಿ 42 ವಿದ್ಯುತ್ ಕಳ್ಳತನದ ಪ್ರಕರಣಗಳನ್ನು ಹಾಗೂ 10 ವಿದ್ಯುತ್ ದುರ್ಬಳಕೆಯ ಪ್ರಕರಣಗಳನ್ನು ದಾಖಲಿಸಿ, ಸಂಬಂಧಿಸಿದವರಿಗೆ ಹೆಚ್ಚಿನ ದಂಡವನ್ನು ವಿಧಿಸಲಾಗಿದೆ.
ಮುಂಬರುವ ದಿನಗಳಲ್ಲಿ ಈ ರೀತಿಯ ದಾಳಿಯನ್ನು ಮತ್ತಷ್ಟು ಹೆಚ್ಚಿಸಲು ಜೆಸ್ಕಾಂ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಹಕರು ವಿದ್ಯುತ್ ಕಳ್ಳತನಕ್ಕೆ ಕೈಹಾಕದೇ, ದಂಡ ಭರಿಸುವ ಹಾಗೂ ಜೈಲು ಶಿಕ್ಷೆಗೆ ಗುರಿಯಾಗುವ ಕೃತ್ಯಕ್ಕೆ ಕೈಹಾಕದಿರುವಂತೆ ಜಾಗ್ರತೆಯಿಂದಿರಲು ಗುವಿಸಕಂನಿ ಕಾರ್ಯ ಮತ್ತು ಪಾಲನೆ ವಲಯದ ಮುಖ್ಯ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನವಿ: ಅವಘಡ ಸೃಷ್ಟಿಸುವ ವಿದ್ಯುತ್ ಪರಿಕರಗಳ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಜೆಸ್ಕಾಂ ಗುಲ್ಬರ್ಗ ವಲಯ ವ್ಯಾಪ್ತಿಯ ಗುಲ್ಬರ್ಗ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿದ್ಯುತ್ ಅವಘಡಗಳಿಂದ ಜನ-ಜಾನುವಾರುಗಳನ್ನು ರಕ್ಷಿಸುವ ಹಾಗೂ ವಿದ್ಯುತ್ ಅಪಘಾತಗಳನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಸಾರ್ವಜನಿಕರು ತಮ್ಮ ಗ್ರಾಮ, ತಾಲೂಕು ಹಾಗೂ ನಗರ ಪ್ರದೇಶಗಳಲ್ಲಿ ಎಲ್ಲೆಡೆ ಇರುವ ಟ್ರಾನ್ಸ್ಫಾರ್ಮರ್ ಕೇಂದ್ರಗಳಿಗೆ ಬೇಲಿ ಇಲ್ಲದೇ ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಮಾಹಿತಿ ನೀಡಲು ಜೆಸ್ಕಾಂ ಮನವಿ ಮಾಡಿದೆ.
ಕಬ್ಬು ಮತ್ತು ಬತ್ತದ ಬೆಳೆಗಳ ಮೇಲಿಂದ ಹಾಯುತ್ತಿರುವ ಲೈನುಗಳಿದ್ದರೆ, ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಶಾಲೆಗಳು, ಮಸೀದಿಗಳು, ಮಂದಿರ ಹಾಗೂ ಚರ್ಚಗಳ ಮೇಲಿಂದ ಹಾದೂ ಹೋಗಿ ಸಾರ್ವಜನಿಕರಿಗೆ ಜೀವ ಹಾನಿಯನ್ನುಂಟು ಮಾಡುವ ಸ್ಥಿತಿಯಲ್ಲಿದ್ದರೆ, ಆ ಮಾಹಿತಿಯನ್ನು ತಮ್ಮ ಸ್ಥಳೀಯ ಪಂಚಾಯಿತಿ ಮೂಲಕ ಜೆಸ್ಕಾಂ ಶಾಖಾಧಿಕಾರಿ ಕಚೇರಿಗಳಿಗೆ ಲಿಖಿತವಾಗಿ ನೀಡುವಂತೆ ಗುವಿಸಕಂನಿದ ಕಾರ್ಯ ಮತ್ತು ಪಾಲನೆ ವಲಯದ ಮುಖ್ಯ ಎಂಜಿನಿಯವರು ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಅಲ್ಲದೇ ಸದರಿ ಮಾಹಿತಿಯನ್ನು ಎಸ್ಎಂಎಸ್ ಇಲ್ಲವೇ ಇ-ಮೇಲ್ ಮುಖಾಂತರವಾಗಿಯೂ ಕಳುಹಿಸುವಂತೆ ಅವರು ಕೋರಿದ್ದಾರೆ.
ನೀರಿನ ಸಮಸ್ಯೆ
ಗುಲ್ಬರ್ಗ/ಶಹಾಬಾದ್: ಜೆಸ್ಕಾಂ ಇಲಾಖೆಯಿಂದ ಅನಿಯಮಿತ ವಿದ್ಯುತ್ ಕಡಿತ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವುದರಿಂದ ಹೊನಗುಂಟ್ ಗ್ರಾಮಸ್ಥರಿಗೆ ಕನಿಷ್ಠ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ ಎಂದು ಗ್ರಾಮದ ಬಿಜೆಪಿ ಮುಖಂಡ ಡಾ. ಚನ್ನಪ್ಪ ಹಳಿಮನಿ ಹಾಗೂ ಗ್ರಾಮಸ್ಥರು ದೂರಿದ್ದಾರೆ. ಜೆಸ್ಕಾಂ ಇಲಾಖೆ ಬೆಳಗ್ಗೆ ಕೇವಲ 3 ಗಂಟೆ ಮಾತ್ರ ಡಬಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಇರುವ ಗ್ರಾಮಕ್ಕೆ ನೀರು ಸರಬರಾಜು ಮಾಡಲು ದುಸ್ತರವಾಗಿದೆ ಎಂದು ತಿಳಿಸಿದ್ದಾರೆ.
ಜಗದೀಶ ಶೆಟ್ಟರ್ ಬೆಂಗಳೂರಿನಲ್ಲಿ, ಗ್ರಾಮೀಣ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು 6 ಗಂಟೆ ಕಾಲ ಡಬಲ್ ಫೇಸ್ ವಿದ್ಯುತ್ ನೀಡಲು ಆದೇಶಿಸಿದ್ದರು. ಆದರೆ ಅಧಿಕಾರಿಗಳು ಅವರ ಮಾತಿಗೆ ಬೆಲೆ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

