ಗುಲ್ಬರ್ಗಾ

ಜಗದ್ಗುರು ವಿಶ್ವಧರ್ಮದ ಪ್ರಭು

Published On :

ಕನ್ನಡಪ್ರಭ ವಾರ್ತೆ, ಶಹಾಪುರ, ಮಾ.25
ಜಗದ್ಗುರು ರೇಣುಕಾಚಾರ್ಯರು ವಿಶ್ವ ಧರ್ಮದ ಪ್ರಭು. ಮಾನವೀಯ ಚಿಂತನೆಯ ಆಧ್ಯಾತ್ಮ ವಿಕಾಸದ ಪ್ರಥಮಾಚಾರ್ಯರು ಎಂದು ಪಂಡಿತ ಬಸವರಾಜ ಶಾಸ್ತ್ರಿ ಕಣೇಕಲ್ ತಿಳಿಸಿದರು.
  ಸ್ಥಳೀಯ ವೀರಶೈವ ಸಮಾಜ ಹಾಗೂ ಜಯಂತ್ಯುತ್ಸವ ಸಮಿತಿ ವತಿಯಿಂದ ಚರಬಸವೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದ ಸಂದರ್ಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
  ಅಹಿಂಸಾದಿ ಧ್ಯಾನ ಪರ್ಯಂತರ ದಶಧರ್ಮ ಸೂತ್ರಗಳನ್ನು ಅಗಸ್ತ್ಯ ಮಹಾಮುನಿಗಳಿಗೆ ಬೋಧಿಸಿದ ಶ್ರೇಯಸ್ಸು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ವಿಶೇಷವಾಗಿ ವೀರಶೈವ ಧರ್ಮದ ಸನಾತನ ಪರಂಪರೆಯ ವಿಶಾಲ ತಳಹದಿಯ ಮೇಲೆ ನಿರ್ಮಾಣಗೊಂಡಿದೆ. ಇದು ತತ್ವ ಪ್ರಧಾನವಾದ ಸತ್ವಪೂರ್ಣವಾದ ಜಾತಿ, ಮತ, ಪಂಥಗಳೆಣಿಸದೆ ಎಲ್ಲರನ್ನೂ ಉದ್ಧರಿಸಿದ ಧರ್ಮವೆಂಬುದಕ್ಕೆ ಅಗಸ್ತ್ಯ ಮಹಾಮುನಿಗಳಿಗೆ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದು ಸಾಕ್ಷೀಕರಿಸಿದೆ ಎಂದರು.
ಪಂಚಾಚಾರ್ಯರ ತತ್ವಗಳ ಅಧ್ಯಯನ ಮಾಡಿ: ಪ್ರತಿಯೊಬ್ಬ ವೀರಶೈವ ಮತಸ್ಥರು ಜಗದ್ಗುರು ಪಂಚಾಚಾರ್ಯರು ಬೋಧಿಸಿದ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡುವುದರೊಂದಿಗೆ ಧಾರ್ಮಿಕವಾಗಿ ಸಮಾಜಮುಖಿ ಚಿಂತನೆಯಲ್ಲಿ ತೊಡಗಬೇಕು. ಈ ದಿಸೆಯಲ್ಲಿ ರೇಣುಕಾಚಾರ್ಯರ ಜಯಂತ್ಯುತ್ಸವಗಳು ಅರ್ಥಪೂರ್ಣವಾಗಿ ನಡೆಯಬೇಕು ಎಂದರು.
  ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರಶೈವ ಧರ್ಮ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದ್ದು, ಸಮಾಜ ಬಾಂಧವರು ಸ್ವಧರ್ಮದ ಬಗ್ಗೆ ಭಕ್ತಿ, ಶ್ರದ್ಧೆಯಿಟ್ಟು ಇತರ ಧರ್ಮವನ್ನು ಗೌರವಿಸುವ ವಿಶಾಲ ಹೃದಯವರಾಗಿದ್ದಾರೆ. ಈ ದೇಶದಲ್ಲಿ ವೀರಶೈವ ಧರ್ಮ ಪರಂಪರೆಯ ಮೇಲ್ಪಂಕ್ತಿ ಎದ್ದು ಕಾಣುತ್ತಿದೆ. ರೇಣುಕಾಚಾರ್ಯರು ನೀಡಿದ ಸಂದೇಶಗಳನ್ನು ಅನುಸರಿಸುವ ಮೂಲಕ ಧರ್ಮ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಸಿದ್ದೇಶ್ವರ ಶಿವಾಚಾರ್ಯರು, ಗುರುಪಾದ ಸ್ವಾಮೀಜಿ, ಸೂಗೂರೇಶ್ವರ ದೇವರು, ವೇದಮೂರ್ತಿ ಬಸವಯ್ಯ ಶರಣರು, ದೇವಯ್ಯ ಸ್ವಾಮೀಜಿ ಮತ್ತು ನಾಗನಟಗಿಯ ಶ್ರೀಗಳು ಮಾತನಾಡಿದರು. ಅಧ್ಯಕ್ಷತೆಯನ್ನು ಬಸವರಾಜೇಂದ್ರ ದೇಶಮುಖ ವಹಿಸಿದ್ದರು.
  ಪ್ರಮುಖರಾದ ಚಂದ್ರಶೇಖರ ಆರಬೋಳ, ಸಿದ್ಲಿಂಗಣ್ಣಾ ಆನೇಗುಂದಿ, ಸುರೇಂದ್ರಪಾಟೀಲ ಮಡ್ನಾಳ, ಡಾ. ಎಸ್.ಆರ್. ಶಿಣ್ಣೂರ, ಗುರು ಕಾಮಾ, ರಾಯಪ್ಪಗೌಡ ದರ್ಶನಾಪುರ, ಡಾ. ಗುರುಲಿಂಗಯ್ಯ ಎಸ್. ಹಿರೇಮಠ, ಸೋಮಶೇಖರಯ್ಯ ಸ್ವಾಮಿ, ಪವಡಯ್ಯ ಸ್ವಾಮಿ, ಸಿದ್ದಯ್ಯಸ್ವಾಮಿ ಮಠ ಇದ್ದರು. ಮಂಜುಮನಾಥಸ್ವಾಮಿ ಸ್ವಾಗತಿಸಿ ಅಮರೇಶಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.