ಹಾಳುಬಿದ್ದ ಉಪಮಾರುಕಟ್ಟೆ ಕಟ್ಟಡ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.30
ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲೆಂದು ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಕೃಷಿ ಉಪ ಮಾರುಕಟ್ಟೆ ನಿರ್ಮಾಣ ಮಾಡಿದರೂ ಅದು ಸಮರ್ಪಕವಾಗಿ ಬಳಕೆಯಾಗದೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ನಿರಾಶ್ರಿತರ ಆಶ್ರಯ ಕೇಂದ್ರವಾಗಿ ಮಾರ್ಪಾಟಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ನಿರಾಶ್ರಿತರ ತಾಣ: ತಾಲೂಕಿನ ಗಡಿಭಾಗದ ಕೊಂಕಲ್ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅನೇಕ ವರ್ಷಗಳ ಹಿಂದೆ ಸುಸಜ್ಜಿತ ಉಪಮಾರುಕಟ್ಟೆ ನಿರ್ಮಾಣ ಮಾಡಿದೆ. ಗ್ರಾಮೀಣ ಪ್ರದೇಶದ ರೈತರು ಬೆಳೆದ ತರಕಾರಿ ಇನ್ನಿತರ ಆಹಾರ ಪದಾರ್ಥಗಳನ್ನು ಒಂದು ಕಡೆ ಮಾರಾಟ ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ ಈ ಮಾರುಕಟ್ಟೆಯ ಉಪಯೋಗವನ್ನು ರೈತರು ಪಡೆದುಕೊಳ್ಳದ ಪರಿಣಾಮ ಇಂದು ಅದು ನಿರಾಶ್ರಿತರ ತಾಣವಾಗಿ ನಿರುಪಯೋಗಿಯಾಗಿದೆ.
ಆಹಾರ ಧಾನ್ಯಗಳ ಮಾರಾಟ ಕೇಂದ್ರವಾಗಬೇಕಿದ್ದ ಈ ಕಟ್ಟಡ ರೈತರ ಕೃಷಿ ಪರಿಕರಗಳನ್ನಿಡುವ ಹಾಗೂ ಮಳೆಗಾಲದಲ್ಲಿ ಸುರಕ್ಷಿತವಾಗಿ ಜಾನುವಾರುಗಳನ್ನು ಕಟ್ಟುವ ಸ್ಥಳವಾಗಿ ಬಳಸಲಾಗುತ್ತಿದೆ. ಕಟ್ಟಡದ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಬದಲಾಗಿದೆ.
ಜನಪ್ರತಿನಿಧಿಗಳ ಜಾಣ ಕುರುಡು: ಹೀಗೆ ಸರ್ಕಾರದ ಕಟ್ಟಡ ಸಮರ್ಪಕವಾಗಿ ಬಳಕೆಯಾಗದೆ ನಿರುಪಯುಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಾಸ್ತವಿಕತೆ ಕಂಡರೂ ಕಾಣದ ಹಾಗೆ ವರ್ತಿಸುತ್ತಿರುವುದು ಕಟ್ಟಡ ಹಾಳು ಬೀಳಲು ಕಾರಣವಾಗಿದೆ.
ವಾರದ ಸಂತೆ ನಿಮಿತ್ತ ಬೀದಿಯಲ್ಲಿ ವ್ಯಾಪಾರ ಮಾಡುವ ರೈತರಿಗೆ ಅಗತ್ಯ ತಿಳಿವಳಿಕೆ ನೀಡಿ ಉಪ ಮಾರುಕಟ್ಟೆ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

