ಮತಯಂತ್ರದಲ್ಲಿ ಐವರು ಸಚಿವರ ಹಣೆಬರಹ
ಕ.ಪ್ರ.ವಾರ್ತೆ, ಯಾದಗಿರಿ, ಮೇ 5
ಜಿಲ್ಲೆಯ ಐವರು ಮಾಜಿ ಸಚಿವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರ ರಾಜಕೀಯ ಭವಿಷ್ಯವನ್ನು ಭಾನುವಾರ ಮತದಾರ ಪ್ರಭು ಬರೆದಿದ್ದಾನೆ. ಅವರ ಭವಿಷ್ಯ ಸದ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 8ರವರೆಗೆ ಕಾಯಲೇಬೇಕಾಗಿದೆ.
ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಎ.ಬಿ. ಮಾಲಕರೆಡ್ಡಿ, ಶಹಾಪುರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ, ಸುರಪುರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಮದನಗೋಪಾಲ ನಾಯಕ, ಗುರುಮಠಕಲ್ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರು ವಿವಿಧ ಅವಧಿಯಲ್ಲಿ ಸರ್ಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಸುರಪುರ ಒಂದೇ ಕ್ಷೇತ್ರದಲ್ಲಿ ಇಬ್ಬರು ಮಾಜಿ ಸಚಿವರು ಸ್ಪರ್ಧಿಸಿದ್ದಾರೆ. ಈ ಐವರಲ್ಲಿ ಯಾರ ಭವಿಷ್ಯ ಏನಾಗಲಿದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇವರಲ್ಲಿ ಮದನಗೋಪಾಲ ನಾಯಕ ಅವರನ್ನು ಹೊರತುಪಡಿಸಿ ಉಳಿದ ನಾಲ್ಕು ಜನರು ಹಾಲಿ ಶಾಸಕರೂ ಆಗಿದ್ದು, ಇನ್ನೂ ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಆದ್ದರಿಂದ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ಹರಿದಿದೆ.
47 ಅಭ್ಯರ್ಥಿಗಳ ಭವಿಷ್ಯ: ನಾಲ್ಕು ಕ್ಷೇತ್ರಗಳಿಂದ ಒಟ್ಟು 47 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರದಲ್ಲಿ ತಲಾ 10 ಜನ ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ 17 ಜನ ಹುರಿಯಾಳುಗಳು ಇದ್ದಾರೆ. ಈ ಪೈಕಿ ಗುರುಮಠಕಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಲಿನಿ ಕೋರಿ ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ.
ಜಿಲ್ಲೆಯಲ್ಲಿ ಇಬ್ಬರು ಮಾಜಿ ಶಾಸಕರು ಸ್ಪರ್ಧಿಸಿದ್ದು, ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಯಾದಗಿರಿಯಲ್ಲಿ ಡಾ. ವೀರಬಸವಂತರೆಡ್ಡಿ ಮುದ್ನಾಳ ವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.
ಎಲ್ಲ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಗೆಲವಿನ ಮಂತ್ರ ಜಪಿಸುತ್ತಿದ್ದಾರೆ. ಆದರೆ ಎಲ್ಲ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆದಿದ್ದು, ಅದು ಸದ್ಯಕ್ಕೆ ಮತಯಂತ್ರದಲ್ಲಿ ಭದ್ರವಾಗಿದೆ. ಆದ್ದರಿಂದ ಮೇ 8ರ ಮತ ಎಣಿಕೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲಿಯವರೆಗೆ ಶೇಕಡಾವಾರು ಮತದಾನದ ಮೇಲೆ ಕೂಡಿಕಳೆಯುವ ಲೆಕ್ಕಾಚಾರದಲ್ಲೇ ಕಾಲ ಕಳೆಯಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

