ಗುಲ್ಬರ್ಗಾ

ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

Published On :

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ   ,   ಯಾದಗಿರಿ   ,   ಮೇ 7

ಕಳೆದ ಸುಮಾರು ಒಂದೂವರೆ ತಿಂಗಳಿಂದ ಏರಿದ್ದ ಚುನಾವಣಾ ಕಾವು ಅಂತಿಮ ಘಟ್ಟಕ್ಕೆ ತಲುಪಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 46 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅವರ ಎದೆಬಡಿತವೂ ಹೆಚ್ಚಾಗಿದೆ. ಮತದಾರ ಯಾರನ್ನು ಬೆಂಬಲಿಸಿದ್ದಾನೆ ಎನ್ನುವುದು ಬುಧವಾರ ಮಧ್ಯಾಹ್ನದ ವೇಳೆಗೆ ಹೊರಬೀಳಲಿದೆ.
ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಹಾಗೂ ಗುರುಮಠಕಲ್ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆದು ಸರಾಸರಿ ಶೇ.62ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇಕಡಾವಾರು ಮತ ಚಲಾವಣೆಯ ಅಂಕೆ ಸಂಖ್ಯೆಯನ್ನೇ ಆಧರಿಸಿ ಮುಖಂಡರು ಹಾಗೂ ಕಾರ್ಯಕರ್ತರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆದರೆ ಯಾರಿಗೂ ತಾವೇ ಗೆಲ್ಲುತ್ತೇವೆ ಎಂಬ ಧೈರ್ಯ ಇಲ್ಲದಂತಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ನೇರ, ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಬುಧವಾರದ ಮತ ಎಣಿಕೆ ಪ್ರಕ್ರಿಯೆ ಮೇಲೆ ಚಿತ್ತ ನೆಟ್ಟಿದೆ. ಇದು ಅಭ್ಯರ್ಥಿಗಳ ಎದೆ ಬಡಿತವನ್ನೂ ಹೆಚ್ಚಾಗುವಂತೆ ಮಾಡಿದೆ. ಗೆದ್ದರೆ ವಿಜಯೋತ್ಸವ, ಸೋತರೆ ಮುಖ ತೋರಿಸದೇ ಸೀದಾ ಮನೆಗೆ ಎಂಬಂಥ ಮನಃಸ್ಥಿತಿಯಲ್ಲಿ ಅಭ್ಯರ್ಥಿಗಳು ಹಾಗೂ ಮುಖಂಡರು ನಿದ್ದೆಗೆಟ್ಟಿದ್ದಾರೆ.
ಪ್ರಮುಖರು ಕಣದಲ್ಲಿ: ಜಿಲ್ಲೆಯಲ್ಲಿ ಹಾಲಿ, ಮಾಜಿ ಶಾಸಕರು ಹಾಗೂ ಸಚಿವರು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ. ಸುರಪುರದಲ್ಲಿ ಮಾಜಿ ಸಚಿವ ರಾಜುಗೌಡ ಅವರು ಬಿಜೆಪಿಯಿಂದ ಹೊರಬಂದು, ಕಾಂಗ್ರೆಸ್ ಕದತಟ್ಟಿ ನಂತರ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸ್ಪರ್ಧಿಸಿದ್ದು, ಇವರಿಬ್ಬರ ನಡುವೆ ತೀವ್ರ ಸೆಣಸಾಟ ಏರ್ಪಟ್ಟಿದೆ. ಇದೇ ಕ್ಷೇತ್ರದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ ಹಾಗೂ ಕೆಜೆಪಿಯ ಗುರುಪಾಟೀಲ ಶಿರವಾಳ ನಡುವೆ ಜಿದ್ದಾಜಿದ್ದಿ ನಡೆದಿದೆ. ಜೆಡಿಎಸ್‌ನ ಶರಣಪ್ಪ ಸಲಾದಪುರ ಅವರೂ ಸವಾಲು ಒಡ್ಡಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಾ.ಎ.ಬಿ. ಮಾಲಕರೆಡ್ಡಿ, ಕೆಜೆಪಿಯಿಂದ ಡಾ.ವೀರಬಸವಂತರೆಡ್ಡಿ ಮುದ್ನಾಳ, ಜೆಡಿಎಸ್‌ನಿಂದ ಎ.ಸಿ.ಕಾಡ್ಲೂರ ನಡುವೆ ಪೈಪೋಟಿ ನಡೆದಿದೆ. ಗುರುಮಠಕಲ್‌ನಲ್ಲಿ ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರ, ಕೆಜೆಪಿಯ ವೆಂಕಟರೆಡ್ಡಿ ಮುದ್ನಾಳ, ಜೆಡಿಎಸ್‌ನ ನಾಗನಗೌಡ ಕಂದಕೂರ, ಬಿಜೆಪಿಯ ಗಿರೀಶ ಮಟ್ಟಣ  ,  ವರ ನಡುವೆ ಸ್ಪರ್ಧೆಯಿದೆ. ಇವರಲ್ಲಿ ಮತದಾರನ ಒಲವು ಯಾರಿಗೆ ಎನ್ನುವುದು ತೀವ್ರ ಕುತೂಹಲ ಸೃಷ್ಟಿಸಿದೆ.
ಯಾರಿಗೆ ವಿಜಯಮಾಲೆ?: ಪ್ರಮುಖ ಪಕ್ಷಗಳು ಹಾಗೂ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿಗಳೂ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ನಡೆಸಿದ ಪ್ರಚಾರ ಮತಗಳನ್ನು ಪಡೆಯಲು ನೆರವಾಗಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ. ಜಾತಿ ಲೆಕ್ಕಾಚಾರ, ಹಣ ಬಲ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎನ್ನುವುದೂ ಗೊತ್ತಾಗಲಿದೆ. ಪ್ರಮುಖ ಪಕ್ಷಗಳ ನಾಯಕರು, ಸ್ಟಾರ್ ಪ್ರಚಾರಕರು ಜಿಲ್ಲೆಯಲ್ಲಿ ಪ್ರಚಾರ ನಡೆಸಲು ಹೆಚ್ಚು ಆಸಕ್ತಿ ತೋರಿಲ್ಲ. ಆದರೂ ಅಭ್ಯರ್ಥಿಗಳೇ ಇಲ್ಲಿ ಮತದಾರರನ್ನು ಸೆಳೆಯಲು ತಿಂಗಳ ಕಾಲ ಓಡಾಡಿದ್ದಾರೆ. ಎಲ್ಲಾ ರೀತಿಯ ಲೆಕ್ಕಾಚಾರಗಳು ಮುಗಿದಿದ್ದರೂ ಗೆಲವು ಯಾರಿಗೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಬುಧವಾರ ಯಾದಗಿರಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಲ್ಲಿ ಯಾರು ಡಾನ್ ಆಗಲಿದ್ದಾರೆ ಎನ್ನುವುದು ಹೊರಬೀಳಲಿದೆ.
ಹೆಚ್ಚಾದ ಎದೆಬಡಿತ: ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರ ಎದೆಬಡಿತೆ ಹೆಚ್ಚಾಗಿದೆ. ಮತದಾರರಲ್ಲೂ ಕುತೂಹಲ ತೀವ್ರಗೊಂಡಿದೆ. ಕೆಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟ್ಯಂತರ ರುಪಾಯಿ ಖರ್ಚು ಮಾಡಿಕೊಂಡು ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟವರಿದ್ದಾರೆ. ಆದ್ದರಿಂದ ಭಾನುವಾರವೇ ಮತದಾನ ಪ್ರಕ್ರಿಯೆ ಮುಗಿದರೂ ಚಿಂತೆ ದೂರವಾಗಿಲ್ಲ. ಅನೇಕರು ದೇವಸ್ಥಾನ, ಸಂಬಂಧಿಕರ ಮನೆ ವಿವಾಹ ಸಮಾರಂಭ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೂ, ಮುಖದ ಮೇಲೆ ಗೆಲುವು ಕಾಣುತ್ತಿಲ್ಲ. ಸದ್ಯ ಎಲ್ಲರ ಚಿತ್ತ ಮತ ಎಣಿಕೆ ಪ್ರಕ್ರಿಯೆಯತ್ತ ಇದ್ದು, ಬುಧವಾರ ಮಧ್ಯಾಹ್ನದ ವೇಳೆಗೆ ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.