ರಾಜುಗೌಡ ಮ್ಯಾಜಿಕ್ ಈ ಬಾರಿ ನಡೆಯಲಿಲ್ಲ
ಯಾದಗಿರಿ: ಎರಡು ಬಾರಿ ಎರಡು ಪಕ್ಷದಿಂದ ಗೆದ್ದು ಈ ಬಾರಿ ಮತ್ತೊಂದು ಪಕ್ಷದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಮಾಜಿ ಸಚಿವ ರಾಜುಗೌಡರ ಮ್ಯಾಜಿಕ್ ಈ ಬಾರಿ ಕ್ಷೇತ್ರದ ಎತದಾರರ ಎದುರು ನಡೆಯಲಿಲ್ಲ.
ಸುರಪುರ ಎಸ್ಟಿ ಮೀಸಲು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ 4075 ಮತಗಳ ಅಂತರದಿಂದ ರಾಜುಗೌಡರ ವಿರುದ್ಧ ಗೆದ್ದಿದ್ದಾರೆ. ಕಾಂಗ್ರೆಸ್ ಬಾಗಿಲು ಬಡಿದು ಬಂದು ಕೊನೆ ಕ್ಷಣದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ರಾಜುಗೌಡ ಹಾಗೂ ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದ್ದರಿಂದ ರಾಜ್ಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಕ್ಷೇತ್ರವಾಗಿತ್ತು. ಆದ್ದರಿಂದ ಅಲ್ಲಿಯ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಕೆರಳಿಸಿತ್ತು.
ಹೆಗ್ಗಳಿಕೆ: ರಾಜುಗೌಡ ಅವರು 2004ರ ಚುನಾವಣೆಯಲ್ಲಿ ಕನ್ನಡ ನಾಡು ಪಕ್ಷದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಈ ಪಕ್ಷದಿಂದ ಗೆದ್ದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ನಂತರ ಸಿದ್ದರಾಮಯ್ಯ ಎಬಿಪಿಜೆಡಿಗೆ ಹೋಗಿ ನಂತರ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಎರಡೂ ಬಾರಿ ರಾಜಾ ವೆಂಕಟಪ್ಪ ನಾಯಕ ಅವರೇ ರಾಜುಗೌಡರಿಗೆ ಎದುರಾಳಿಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ರಾಜುಗೌಡ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತು ಟಿಕೆಟ್ಗಾಗಿ ತೀವ್ರ ಲಾಬಿ ನಡೆಸಿದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಅವಕೃಪೆಯಿಂದ ಇತ್ತ ಸಚಿವ ಸ್ಥಾನಕ್ಕೂ ರಾಜಿನಾಮೆ ಕೊಟ್ಟಿದ್ದ ಅವರು ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿದರು. ನಂತರ ಜೆಡಿಎಸ್ನಿಂದ ಟಿಕೆಟ್ ತಂದು ಅಖಾಡಕ್ಕಿಳಿದಿದ್ದರು.
ಹ್ಯಾಟ್ರಿಕ್ ದಕ್ಕಲಿಲ್ಲ: ಸುಮಾರು ಒಂದು ತಿಂಗಳ ಕಾಲ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗದೇ ರಾಜುಗೌಡ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ ಮತಎಣಿಕೆ ಕೇಂದ್ರದಲ್ಲಿ ಬಂದ ಫಲಿತಾಂಶವೇ ಬೇರೆಯಾಗಿತ್ತು. ಅವರ ಹ್ಯಾಟ್ರಿಕ್ ಕನಸು ನುಚ್ಚುನೂರಾಯಿತು.
ಮತ ಎಣಿಕೆ ಕಾರ್ಯ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲ್ಲೇ ಇದ್ದರು. ಅದು ಒಂದು ಹಂತದಲ್ಲಿ 10ಸಾವಿರದವರೆಗೂ ಹೋಯಿತು. ನಂತರ ಅಂತರ ಕಡಿಮೆಯಾಗುತ್ತ 8, 6, 4 ಹೀಗೆ ಇಳಿಯುತ್ತಾ ಬಂದು 3ಸಾವಿರದ ಆಸುಪಾಸಿಗೆ ಬಂತು. ಆಗ ಸ್ವಲ್ಪ ಆಶಾದಾಯಕರಂತೆ ಕಂಡ ರಾಜುಗೌಡರಿಗೆ ಮುಂದಿನ ಸುತ್ತಿನ ಎಣಿಕೆ ಆರಂಭವಾಗುತ್ತಿದ್ದಂತೆ ಸೋಲು ಖಚಿತ ಎನ್ನುವುದು ಮನದಟ್ಟಾಯಿತು. ಇನ್ನೂ 2ಸುತ್ತಿನ ಎಣಿಕೆ ಬಾಕಿ ಇರುವಾಗಲೇ ಅಲ್ಲಿಂದ ರಾಜುಗೌಡ ಹೊರನಡೆದರು. ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ 4ಸಾವಿರ ಮತಗಳಿಂದ ಗೆಲ್ಲುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವದಲ್ಲಿ ಕಾರ್ಯಕರ್ತರ ಕೇಕೆ ಮುಗಿಲುಮುಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

