ಗುಲ್ಬರ್ಗಾ

ಲೋಕಲ್‌ಗೆ ಅಸೆಂಬ್ಲಿ ಕರಿನೆರಳು!

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 17
ಚುನಾವಣೆ ನಡೆದು ಬರೋಬ್ಬರಿ 2 ತಿಂಗಳು 10 ದಿನ ಉರುಳಿದರೂ ಇಂದಿಗೂ 7 ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿರುವ 207 ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳು ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ.
ಅಷ್ಟೇ ಅಲ್ಲ, ಈ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ 4,976 ಪುರಪಿತೃಗಳು(ಸದಸ್ಯರು, ಸಿಟಿ, ಟೌನ್ ಫಾದರ್ಸ್) ಇಂದಿಗೂ ಶಾಸನಾತ್ಮಕ ಅಧಿಕಾರ ದಕ್ಕದೆ ಕೈಕಟ್ಟಿ ಕುಳಿತುಕೊಂಡಿದ್ದಾರೆ.
ಅಮರಿದ ಗ್ರಹಣ: ಮಾರ್ಚ್ 7ರಂದು ಸ್ಥಳೀಯ ಸಂಸ್ಥೆಗಳ ಮತದಾನವಾಯ್ತು. ಮಾ.10ರಂದು ಎಣಿಕೆ ನಡೆದು ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆಗಳು ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸ್ಥಳೀಯ ಸಂಸ್ಥೆಗಳ ರಚನೆ ಪ್ರಕ್ರಿಯೆಗೆ ಆಗ ಬಿದ್ದಿರುವ ಬ್ರೆಕ್ ಇನ್ನೂ ತೆರವಾಗಿಲ್ಲ.
ಅಸೆಂಬ್ಲಿಗೆ ಮೇ 5ರಂದು ಮತದಾನವಾಗಿ, ಮೇ 8ರಂದು ಎಣಿಕೆ ನಡೆದು ರಾಜ್ಯ 'ಕೈ' ವಶವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಆದರೀಗ ಸಂಪುಟ ರಚನೆ ಕಸರತ್ತು ಶುರುವಾಗಿದ್ದರಿಂದ ನಗರ ಸ್ಥಳೀಯ ಸಂಸ್ಥೆಗಳ ರಚನೆಗೆ ಅಮರಿಕೊಂಡಿದ್ದ ಗ್ರಹಣ ಹಾಗೇ ಮುಂದುವರಿಯುವಂತಾಗಿದೆ.
ಇದರಿಂದಾಗಿ ಮೇ ತಿಂಗಳಲ್ಲೇ ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲಗೊಳ್ಳಬೇಕಿದ್ದ ರಾಜ್ಯದ 207 ನಗರ- ಸ್ಥಳೀಯ ಸಂಸ್ಥೆಗಳು ಇನ್ನೂ ಕೆಲ ದಿನಗಳ ಮಟ್ಟಿಗೆ ಕೋಮಾ ಸ್ಥಿತಿಯಲ್ಲಿಯೇ ಮುಂದುವರಿಯುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾದಂತಾಗಿದೆ.
ಗೆಜೆಟ್ ನೋಟಿಫಿಕೇಶನ್ ಆಗಿಲ್ಲ: ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಿ ವಿಜೇತರಾದ ಪುರಪಿತೃಗಳ ಹೆಸರು, ವಿವರ ಎಲ್ಲವನ್ನು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯಪತ್ರ(ಗೆಜೆಟ್ ನೋಟಿಫಿಕೇಶನ್)ದಲ್ಲಿ ಪ್ರಕಟಿಸಬೇಕು. ಆನಂತರ ನಗರ ಪಾಲಿಕೆಗಳ ಮೇಯರ್/ಉಪ ಮೇಯರ್ ಹುದ್ದೆಗಳು ಸೇರಿದಂತೆ ಎಲ್ಲಾ 207 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರುಗಳ ಮೀಸಲಾತಿ ನಿರ್ಣಯಿಸಬೇಕು.
ಇದಾದ ಬಳಿಕ ಸಂಸ್ಥೆಗಳ ಸಭೆ ನಡೆದು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆಯಾಗಬೇಕು. ನಂತರ ಮೀಸಲಾತಿಯಂತೆ ಮೇಯರ್/ಉಪ ಮೇಯರ್, ಪುರಸಭೆ, ನಗರಸಭೆ, ಪಪಂ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ನಡೆಯಬೇಕು. ಇಷ್ಟೆಲ್ಲ ಪ್ರಕ್ರಿಯೆಗಳಾದ ನಂತರವಷ್ಟೇ ಸ್ಥಳೀಯ ಸಂಸ್ಥೆಗಳು ಶಾಸನಬದ್ಧವಾಗಿ ರಚನೆಯಾಗಿ ಕ್ರಿಯಾಶೀಲವಾಗುವುದು, ಶಾಸನಾತ್ಮಕ ಅಧಿಕಾರ ಗೆದ್ದ ಸದಸ್ಯರ ಕೈಗೆಟಕುವುದು.
ಆದರೆ ಪ್ರಸಕ್ತ ಸಂದರ್ಭದಲ್ಲಿ ಸರ್ಕಾರ ಇನ್ನೂ ರಾಜ್ಯಪತ್ರದಲ್ಲಿ ಸ್ಥಳೀಯ ಸಂಸ್ಥೆಗಳ ವಿಜೇತರ ಹೆಸರು ಪ್ರಕಟಿಸುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಹೀಗಾಗಿ ಮೀಸಲಾತಿ ನಿಗದಿ, ಸಂಸ್ಥೆಗಳ ಸಭೆ, ಮುಖ್ಯಸ್ಥರ ಆಯ್ಕೆ, ಸ್ಥಾಯಿ ಸಮಿತಿ ಸೇರಿದಂತೆ ನಡೆಯಬೇಕಿರುವ ಹಲವಾರು ಪ್ರಕ್ರಿಯೆಗಳು ವಿಳಂಬವಾಗುತ್ತಿವೆ.
ನಗರ/ಪಟ್ಟಣ ಆಡಳಿತಕ್ಕೆ ಗರ: ಸ್ಥಳೀಯ ಸಂಸ್ಥೆಗಳ ರಚನೆಯಲ್ಲಿನ ಈ ಸುದೀರ್ಘ ವಿಳಂಬ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿಗೆ ಮೂಲವಾಗುತ್ತಿದೆ. ಈ ಸಂಸ್ಥೆಗಳಿಗೆ ಹರಿದು ಬಂದಿರುವ ಅನುದಾನದಲ್ಲಿ ಜನಪರ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಪುರಪಿತೃಗಳಿಗೆ ಅಸಾಧ್ಯವಾಗಿದೆ. ಆಯ್ಕೆಯಾಗಿ 2 ತಿಂಗಳ ಮೇಲಾದರೂ ಇನ್ನೂ ಯಾವ ಕಾಮಗಾರಿಗಳೂ ಕೈಗೆತ್ತಿಕೊಂಡಿಲ್ಲ ಎಂದು ಜನತೆ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಅಸೆಂಬ್ಲಿ ಚುನಾವಣೆಯಲ್ಲಿ ಮತ ಯಾಚಿಸಲು ವಾರ್ಡ್‌ಗಳಿಗೆ ಹೋದ ಸಂದರ್ಭದಲ್ಲಿಯೂ ಪುರಪಿತೃಗಳು ಎದುರಿಸಿದ್ದ ಜನಾಕ್ರೋಶ ಅಷ್ಟಿಷ್ಟಲ್ಲ. ನಾವೇನು ಮಾಡಬೇಕು, ಗೆದ್ದು ಬಂದಿದ್ದೇವೆ. ಆದರೆ ನಮಗಿನ್ನೂ ಶಾಸನಾತ್ಮಕ ಅಧಿಕಾರ ದಕ್ಕಿಲ್ಲ. ಎಲ್ಲ ಅಧಿಕಾರಿಗಳೇ ಮಾಡುತ್ತಿದ್ದಾರೆ. ನಾವಿನ್ನೂ ಅಧಿಕೃತ ಸದಸ್ಯರಾಗಿಯೇ ಹೊರಹೊಮ್ಮಿಲ್ಲ ಎಂದು ಗೆದ್ದವರು ತಮಗೆ ಅಧಿಕಾರ ಗಗನಕುಸುಮವಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಜನರ ಗೊಣಗಾಟ: ಪಾಲಿಕೆಗಳಿಗಂತೂ 13ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ ಸಾಕಷ್ಟು ಅನುದಾನ ಬಂದಿದೆಯಾದರೂ ಇದರ ಉಪಯೋಗಕ್ಕೆ ಕ್ರಿಯಾ ಯೋಜನೆ ರೂಪಿಸಲು ಪಾಲಿಕೆಯೇ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಹಣವಿದ್ದರೂ ಅದು ಪಾಲಿಕೆ ಹೊಂದಿರುವ ನಗರಗಳ ಪಾಲಿಗೆ ಕನ್ನಡಿಗಂಟಾಗಿದೆ. ನಗರ/ಪುರಸಭೆಗಳು, ಪಪಂಗಳ ವ್ಯಾಪ್ತಿಯಲ್ಲಿಯೂ ಇದೇ ದುರವಸ್ಥೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ತಮ್ಮ ಬಡಾವಣೆ, ಗಲ್ಲಿಗಳಲ್ಲಿ ಕೆಲಸಗಳೇ ಆಗುತ್ತಿಲ್ಲ ಎಂದು ಜನರೇ ಗೊಣಗುವಂತಾಗಿದೆ.
ಇತ್ತ ಗೆದ್ದು ಬಂದಿರುವ ಸದಸ್ಯರು ಶಾಸನ ಸಮ್ಮತ ಅಧಿಕಾರ ದಕ್ಕದೆ ಅತ್ತ ಅಧಿಕಾರಿಗಳ ಅಸಹಕಾರ, ಇತ್ತ ಜನರ ಹಿಡಿಶಾಪಗಳ ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ನೀರು ಪೂರೈಕೆ, ಕಸ ವಿಲೇವಾರಿ, ನಿವೇಶನ ರಚನೆ, ರಸ್ತೆಗಳ ಸುಧಾರಣೆ, ಡಾಂಬರೀಕರಣ, ಹೊಸ ರಸ್ತೆಗಳ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ನಾಗರಿಕ ಮೂಲ ಸೌಕರ್ಯ ಪೂರೈಕೆ, ಎಸ್ಸಿ- ಎಸ್ಟಿ ಅನುದಾನದ ಸಮರ್ಪಕ ಬಳಕೆಯಂತಹ ಮಹತ್ವದ ಕಾರ್ಯಕ್ರಮಗಳು ಸಹ ಸ್ಥಳೀಯ ಸಂಸ್ಥೆಗಳ ರಚನೆಯಲ್ಲಿನ ವಿಳಂಬತನದಿಂದಾಗಿ ಅತಂತ್ರವಾಗಿವೆ.
ಬೇಗ ಚಾಲನೆ ದೊರಕೀತೆ?: ಗೆಜೆಟ್ ನೋಟಿಫಿಕೇಶನ್, ಮೀಸಲಾತಿ ನಿಗದಿಯಂತಹ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲು ಸರ್ಕಾರ ಈಗಲಾದರೂ ಮುಂದಾಗುವುದೇ?. ಏಕೆಂದರೆ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ನಡೆಯಬೇಕಿದ್ದ ಮಹತ್ವದ ಕೆಲಸಗಳಿಗೂ ಈ ಬೆಳವಣಿಗೆಯಿಂದ ಅಡಚಣೆ ಉಂಟಾಗಿದೆ. ಜನರಂತೂ ತಮ್ಮ ಬಡಾವಣೆಗಳಲ್ಲಿ ಕೆಲಸಗಳೇ ನಡೆಯದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪುಟ ರಚನೆಯ ಮೊದಲ ಹಂತದ ಕಸರತ್ತು ಮುಗಿದ ಮರುಕ್ಷಣವೇ ಸರ್ಕಾರ ಸ್ಥಳೀಯ ಸಂಸ್ಥೆಗಳ ವಿಜೇತರ ಗೆಜೆಟ್ ಪ್ರಕಟಣೆ, ಮೀಸಲಾತಿ ನಿಗದಿಯಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತಾಗಬೇಕು ಎಂಬುದು ಆಯ್ಕೆಯಾದ ಸದಸ್ಯರ ಆಗ್ರಹ.

ಸ್ಥಳೀಯ ಸಂಸ್ಥೆಗಳತ್ತ ಇಣುಕು ನೋಟ
1) ಒಟ್ಟು ಪಾಲಿಕೆಗಳು- 7
(ಗುಲ್ಬರ್ಗ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮೈಸೂರು, ದಾವಣಗೆರೆ, ಮಂಗಳೂರು ಹಾಗೂ ಬಳ್ಳಾರಿ)
ಒಟ್ಟು ಸ್ಥಾನಗಳು- 381
2) ನಗರಸಭೆ ಒಟ್ಟು ಸ್ಥಾನಗಳು- 1,393
3) ಪುರಸಭೆ ಒಟ್ಟು ಸ್ಥಾನಗಳು- 2,199
4) ಪಟ್ಟಣ ಪಂಚಾಯ್ತಿ ಒಟ್ಟು ಸ್ಥಾನಗಳು- 1,003
ಒಟ್ಟು ಸ್ಥಳೀಯ ಸಂಸ್ಥೆಗಳು- 207
ಒಟ್ಟು ಸ್ಥಾನಗಳು- 4,976
ಕೈಕಟ್ಟಿಕೊಂಡು ಕುಳಿತಿದ್ದೇವಷ್ಟೆ
ಅಸೆಂಬ್ಲಿ ಚುನಾವಣೆ ನೀತಿ ಸಂಹಿತೆಯಿಂದ ವಿಳಂಬವಾಯ್ತು. ಈಗಲಾದರೂ ಸರ್ಕಾರ ನಗರ ಪಾಲಿಕೆ ಮೊದಲ್ಗೊಂಡು ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಶಾಸನಬದ್ಧವಾಗಿ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ವಿಳಂಬ ಮುಂದುವರಿದಲ್ಲಿ ಜನ ನಮ್ಮನ್ನು ಸುಮ್ಮನೆ ಬಿಡೋದಿಲ್ಲ. ಜನ ಬಯಸಿದ ಕೆಲಸಗಳು ಆಗುತ್ತಿಲ್ಲ. ಸರ್ಕಾರ ತಕ್ಷಣ ನಮ್ಮನ್ನು ಈ ಅತಂತ್ರ ಪರಿಸ್ಥಿತಿಯಿಂದ ಮುಕ್ತಿ ಕೊಡಬೇಕು.
- ಭೀಮರೆಡ್ಡಿ ಪಾಟೀಲ್ ಕುರಕುಂದಾ
ಗುಲ್ಬರ್ಗ ಮಹಾನಗರ ಪಾಲಿಕೆ ವಾರ್ಡ್ 15ರ ಸದಸ್ಯ
ವಿಳಂಬದ ಪುನರಾವರ್ತನೆ
2007ರಲ್ಲಿ ಸೆಪ್ಟೆಂಬರ್ 2ರಂದು ಸ್ಥಳೀಯ ಸಂಸ್ಥೆ ಚುನಾವಣೆ ನಡೆದರೂ ರಾಜಕೀಯ ಅಸ್ಥಿರತೆಯಿಂದಾಗಿ ಗೆಜೆಟ್ ನೋಟಿಫಿಕೆಶನ್ ಫೆಬ್ರವರಿ 2008ರಲ್ಲಿ ಆಗಿತ್ತು. 6 ತಿಂಗಳ ವಿಳಂಬದ ನಂತರ ಪಾಲಿಕೆ ಮೊದಲಾದ ಸ್ಥಳೀಯ ಸಂಸ್ಥೆಗಳ ರಚನೆಯಾಗಿದ್ದನ್ನು ಸ್ಮರಿಸಬಹುದು.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.