ಆರು ದಶಕಗಳ ಬಳಿಕ ಸಚಿವ ಸ್ಥಾನ
ಗುಲ್ಬರ್ಗ: ಸ್ವಾತಂತ್ರ್ಯ ಸಿಕ್ಕು ಆರು ದಶಕಗಳ ಬಳಿಕ ಸೇಡಂ ತಾಲೂಕಿನವರಿಗೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ.
ಸೇಡಂ ವಿಧಾನಸಭಾ ಕ್ಷೇತ್ರದ 13 ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಅಂದರೆ 8 ಬಾರಿ ಆಶೀರ್ವಾದ ಮಾಡಿದರೂ ಒಂದೇ ಒಂದು ಸಲವಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸದ್ಯ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಶಾಸಕರಾಗಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ತಡವಾದರೂ ನ್ಯಾಯ ಸಿಕ್ಕಂತಾಗಿದೆ.
ಶರಣಪ್ರಕಾಶ ಅದೃಷ್ಟವಂತ: ಅಂದಿನ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಟಿಕೆಟ್ ಕಟ್ ಮಾಡಿ ಅಂದಿನ ಮಳಖೇಡ ಜಿಪಂ ಸದಸ್ಯ ಹಾಗೂ ಯುವ ಮುಖಂಡ ಡಾ. ಶರಣಪ್ರಕಾಶ ಪಾಟೀಲರನ್ನು ಕಾಂಗ್ರೆಸ್ ಪಕ್ಷದಿಂದ 2004ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಗಿಳಿಸಿತು.
ಕ್ಷೇತ್ರದಲ್ಲಿ ಅಷ್ಟೊಂದು ಯಾರಿಗೂ ಪರಿಚಯವಿಲ್ಲದ ಶರಣಪ್ರಕಾಶರು ಸೋಲುತ್ತಾರೆಂದು ಅನೇಕರು ಮಾತನಾಡಿದ್ದುಂಟು. ಆದರೆ, ಆ ಚುನಾವಣೆಯಲ್ಲಿ ಶರಣಪ್ರಕಾಶ ಗೆಲವು ಸಾಧಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಅದೃಷ್ಟ ಅವರ ಬೆನ್ನಿಗೆ ಇರುವುದರಿಂದ ಗೆಲವು ಸಾಧ್ಯವಾಯಿತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಶರಣಪ್ರಕಾಶ ಅಭಿವೃದ್ಧಿಪರ ವ್ಯಕ್ತಿ, ಜನಸಾಮಾನ್ಯರ ವ್ಯಕ್ತಿಯಾಗಿರುವುದರಿಂದ ಗೆಲವು ಸಾಧಿಸಿದ್ದಾರೆ ಎನ್ನುತ್ತಾರೆ. ಅದು ಏನೇ ಇರಲಿ ಗೆಲವು ಸಾಧಿಸಿದ್ದಂತೂ ಸತ್ಯ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇಲ್ಲ. ಈ ಸಲ ಶರಣಪ್ರಕಾಶ ಸೋಲುವುದು ಗ್ಯಾರಂಟಿ ಎಂದು ಸಮೀಕ್ಷೆಗಳು ಹೇಳಿದ್ದುಂಟು. ಮತ್ತೆ ಶರಣಪ್ರಕಾಶ ಗೆದ್ದು ಬಂದರು. 2013ರ ಚುನಾವಣೆಯಲ್ಲೂ ಇಂತದ್ದೆ ಗಾಳಿಸುದ್ದಿ ಹಬ್ಬಿತ್ತು. ಅದನ್ನು ಸುಳ್ಳು ಮಾಡಿ ಹ್ಯಾಟ್ರಿಕ್ ಗೆಲವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. ರಾಜ್ಯದ ಕಾಂಗ್ರೆಸ್‌ನಲ್ಲಿ ಘಟಾನುಘಟಿಗಳಿದ್ದಾರೆ. ಶರಣಪ್ರಕಾಶರಿಗೆ ಮಂತ್ರಿ ಪದವಿ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಹೈಕಮಾಂಡ್ ಕೃಪೆಯಿಂದ ಮಂತ್ರಿ ಪದವಿಯೂ ಲಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

