ಇಂದು ಸಾಲ ಬಿಡುಗಡೆ
ಗುಲ್ಬರ್ಗ: ಗುಲ್ಬರ್ಗದ ಎಸ್ಬಿಐ ಲೀಡ್ ಬ್ಯಾಂಕ್ ವತಿಯಿಂದ 2013- 14ನೇ ಸಾಲಿನ ಗುಲ್ಬರ್ಗ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಮೇ 22ರ ಬೆ.11ಕ್ಕೆ ನಗರದ ಜಿಲ್ಲಾ ಪಂಚಾಯಿತಿಯ ಹಳೇ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್ನ ಸಹಾಯಕ ಮಹಾಪ್ರಬಂಧಕ ಸುನೀಲಕುಮಾರ ಆಗಮಿಸುವರು. ನೇರ ಫೋನ್ ಇನ್ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಮೇ 22ರಂದು ಸಂಜೆ 5.30ರಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುರಕ್ಷಿತ ಮತ್ತು ನೈಸರ್ಗಿಕ ಕೃಷಿಯ ತಾಂತ್ರಿಕತೆಗಳು ಕುರಿತು ವಿಷಯ ತಜ್ಞ ರಫೀಕ್ ಅಹ್ಮದ್ ಎನ್. ಭಗವಾನ್ ಮಾತನಾಡಲಿದ್ದಾರೆ. 220491, 220492 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
3 ಗುಡಿಸಲು ಭಸ್ಮ
ಗುಲ್ಬರ್ಗ: ಆಳಂದ ತಾಲೂಕಿನ ಮೋಘಾ(ಬಿ) ಗ್ರಾಮದಲ್ಲಿ ಭಾನುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಮೂರು ಗುಡಿಸಲು ಭಸ್ಮವಾದ ಘಟನೆ ನಡೆದಿದೆ. ಗ್ರಾಮದಲ್ಲಿರುವ ಬಸಮ್ಮ ಗುಂಡಪ್ಪ ಶೇಟಗಾರರ ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕದಲ್ಲಿನ ದೋಷದಿಂದಾಗಿ ರಾತ್ರಿ ಸಮಯದಲ್ಲಿ ಮನೆಯವರು ಮಲಗಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿರುವ ಮಲ್ಲಿಕಾರ್ಜುನ ಮುಲಗೆ ಮನೆಗೂ ಹರಡಿದ ಬೆಂಕಿಯು ಅವರ ಮನೆಯಲ್ಲಿರುವ ಎತ್ತಿನ ಗಾಡಿ, ಮೇವು, ಕೊಟ್ಟಿಗೆ ಇನ್ನಿತರ ಕಟ್ಟಿಗೆಯ ಸಾಮಗ್ರಿಗಳು ಆಹುತಿಯಾಗಿವೆ. ಪಕ್ಕದ ಇನ್ನೊಂದು ಗುಡಿಸಲಿಗೂ ಹಬ್ಬಿದ ಬೆಂಕಿಯಿಂದ ರಾಶಿ ಹಾಕಿದ ಸೌದೆ ಕಟ್ಟಿಗೆ ಸುಟ್ಟಿದೆ. ಸಮೀಪದಲ್ಲಿಯೇ ಮದುವೆಗಾಗಿ ನೆರೆದಿದ್ದವರು ಓಡಿ ಬಂದು ಬೆಂಕಿ ನಂದಿಸಲು ಮುಂದಾದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಆಳಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಟಂಟಂ ಉರುಳಿ ಮಹಿಳೆ ಸಾವು
ಗುಲ್ಬರ್ಗ: ಆಳಂದ ತಾಲೂಕಿನ ಜಮಗಾ ಮತ್ತು ರುದ್ರವಾಡಿ ಗ್ರಾಮದ ಸೀಮೆಯಲ್ಲಿರುವ ರಸ್ತೆಯಲ್ಲಿ ಟಂಟಂ ಉರುಳಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ತಡೋಳಾ ಗ್ರಾಮದ ಸಾವಿತ್ರಿಬಾಯಿ ಗಂಡ ಪಾಂಡುರಂಗ ಪಾಟೀಲ್(48) ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಸಾವಿತ್ರಿಬಾಯಿ ತವರೂರಾದ ಜಮಗಾ(ಆರ್) ಗ್ರಾಮದಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಟಂಟಂನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಟಂಟಂ ಚಾಲಕ ಪರಾರಿಯಾಗಿದ್ದು, ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

