ಗುಲ್ಬರ್ಗಾ

ಗುಲ್ಬರ್ಗ-ಬೆಂಗಳೂರು ವಿಭಾಗದ ಶಾಲೆಗಳಿಗೆ 27 ಲಕ್ಷ ಜೋಡಿ ಸಮವಸ್ತ್ರ ವಿತರಣೆ

Published On :

ಆಳಂದ: ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕೈಮಗ್ಗ ನಿಗಮದ ಬಟ್ಟೆ ಖರೀದಿಸುವ ಮೂಲಕ ಸಂಕಷ್ಟದಲ್ಲಿರುವ ಕೈಮಗ್ಗ ನಿಗಮ ಮತ್ತು ನೇಕಾರರಿಗೆ ಆರ್ಥಿಕ ಜೀವ ತುಂಬಲು ಸಾಧ್ಯವಾಗುತ್ತದೆ. ತಕ್ಷಣವೇ ಸರ್ಕಾರ ಎಲ್ಲ ಇಲಾಖೆ ಕಚೇರಿಯ ಬಳಕೆಗಾಗಿ ಕೈಮಗ್ಗದ ಬಟ್ಟೆ ಖರೀದಿಸಲು ಆದೇಶಿಸಬೇಕು ಎಂದು ಹುಬ್ಬಳ್ಳಿ ಕೇಂದ್ರ ಕಚೇರಿಯ ಕೈಮಗ್ಗ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ತಂಬಕರ್ ಸರ್ಕಾರಕ್ಕೆ ಕೋರಿದರು.
ಪಟ್ಟಣದಲ್ಲಿ ನೇಕಾರರ ಕುಟುಂಬಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದ 6 ಕೋಟಿ ಕನ್ನಡಗರು ತಲಾ ಒಂದು ಮೀಟರ್ ಕೈಮಗ್ಗದ ಬಟ್ಟೆ ಖರೀದಿಸಿದರೆ, ನಿಗಮದ ಎಲ್ಲ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.
ಸಹಕಾರ ನೀಡಿದರೆ ಅನುಕೂಲ: 1975ರಲ್ಲಿ ನೇಕಾರಿಕೆ ಕಾರ್ಮಿಕ ಒಡಬಂಡಿಕೆ ಮೂಲಕ ಆರಂಭಗೊಂಡಿದೆ. ಈಗಾಗಲೇ 12 ಸಾವಿರ ಕಾಟನ್ ಬಟ್ಟೆ ನೇಕಾರರಿದ್ದು, 2 ಸಾವಿರ ಮಂದಿ ರೇಷ್ಮೆ ಬಟ್ಟೆ ತಯಾರಿಸುತ್ತಾರೆ. 1 ಮೀಟರ್ಗೆ 20 ಸೇರಿ ಶೇ.10ರಷ್ಟು ಹೆಚ್ಚುವರಿ ಕೂಲಿ ಸೇರಿದರೆ ದಿನಕ್ಕೆ ಕುಟುಂಬವೊಂದಕ್ಕೆ ಕನಿಷ್ಠ 160 ಮಾತ್ರ ದೊರೆಯುತ್ತಿದೆ. ಇದು ನೇಕಾರರಿಗೆ ಸಾಲುವುದಿಲ್ಲ ಎಂದರು. ಸರ್ಕಾರ ಹೊಸ ಉದ್ಯೋಗ ಸೃಷ್ಟಿಸುವ ಅವಸರದಲ್ಲಿರುವ ನೇಕಾರಿಕೆ ಉದ್ಯೋಗ ನಿರ್ಲಕ್ಷಿಸುವುದು ಸರಿಯಲ್ಲ. ಇರುವ ಉದ್ಯೋಗಿಗಳನ್ನೇ ಬೀದಿಪಾಲು ಮಾಡುವುದಕ್ಕಿಂತ ಕೈಮಗ್ಗಕ್ಕೆ ಎಲ್ಲ ರೀತಿಯಿಂದಲೂ ಸಹಾಯ, ಸಹಕಾರ ನೀಡಿದರೆ ಅನುಕೂಲವಾಗುತ್ತದೆ ಎಂದರು.
27 ಲಕ್ಷ ಜೋಡಿ ಸಮವಸ್ತ್ರ: ರಾಜ್ಯದ ನಾಲ್ಕು ವಿಭಾಗದ ಪೈಕಿ ಗುಲ್ಬರ್ಗ ಮತ್ತು ಬೆಂಗಳೂರು ವಿಭಾಗಕ್ಕೆ 27 ಲಕ್ಷ ಜೋಡಿಗೆ 84 ಲಕ್ಷ ಮೀಟರ್ ಕೈಮಗ್ಗದ ಬಟ್ಟೆಯಿಂದ ಶಾಲಾ ಸಮಸ್ತ್ರಗಳನ್ನು ಸಿದ್ಧಪಡಿಸಿ ವಿದ್ಯಾವಿಕಾಸ ಯೋಜನೆಯಡಿ ಪೂರೈಸಲಾಗಿದೆ ಎಂದು ಮಂಜುನಾಥ ತಂಬಕರ್ ಹೇಳಿದರು.
ಬೆಳಗಾವಿ ಮತ್ತು ಮೈಸೂರು ವಿಭಾಗಕ್ಕೆ ಸರ್ಕಾರವೇ ಸಮವಸ್ತ್ರಗಳನ್ನು ಮಿಲ್ಗಳಿಂದ ಖರೀದಿಸಿ ನಿರ್ವಹಿಸುತ್ತಿರುವುದು ನಿಗಮಕ್ಕೆ ಹಾನಿಯಾಗುತ್ತದೆ. ಈಗ ಮೈಸೂರು ಮತ್ತು ಬೆಳಗಾವಿ ವಿಭಾಗದಲ್ಲಿ ಪೂರೈಸುವ ಸಮವಸ್ತ್ರ ವಿತರಣೆಯ ಜವಾಬ್ದಾರಿಯೂ ಕೈಮಗ್ಗ ನಿಗಮಕ್ಕೆ ವಹಿಸಿ ಶೇ.50ರಷ್ಟು ಮುಂಗಡ ಹಣಕೊಟ್ಟರೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.