ಮ್ಯಾರಥಾನ್ ಮೆರವಣಿಗೆಯೇ ಆಗ್ಬೇಕಾ?
ವಿಶೇಷ ವರದಿ
ಗುಲ್ಬರ್ಗ: ಮಂತ್ರಿ ಕುರ್ಚಿ ಹತ್ತಿ ಕುಂತಮ್ಯಾಗೆ ತವರೂರಿನ ಮೊದಲ ಭೇಟಿಗೆ ಮೆರವಣಿಗೆಯೇ ಮುನ್ನುಡಿ ಆಗ್ಬೇಕಾ ಜನಮನದ ಕಷ್ಟ- ನಷ್ಟಗಳಿಗೆ ಸ್ಪಂದಿಸುವ ಸೃಜನಶೀಲ ಕೆಲಸಗಳೊಂದಿಗೆ ತಾವು (ಸಚಿವರು) ತವರಿನಲ್ಲೇ ಇರುವ ಸಂದೇಶ ಜನಮಾನಸದಲ್ಲಿ ರವಾನಿಸಬಹುದಲ್ಲವೆ
ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ, ವಕ್ಫ್, ಸ್ಥಳೀಯ ಸಂಸ್ಥೆಗಳ ಸಚಿವರಾಗಿ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಡಾ. ಶರಣಪ್ರಕಾಶ ಹಾಗೂ ಜವಳಿ ಸಚಿವರಾಗಿ ಪಕ್ಕದ ಯಾದಗಿರಿ ಜಿಲ್ಲೆಯ ಬಾಬೂರಾವ್ ಚಿಂಚನ್ಸೂರ್ ಪ್ರಮಾಣ ಸ್ವೀಕರಿಸಿ 8 ದಿನಗಳಾದ ನಂತರ ಶನಿವಾರ ಗುಲ್ಬರ್ಗ ಮಹಾ ನಗರದಲ್ಲಿ ನಡೆದ ಸುದೀರ್ಘ 6 ಗಂಟೆಗಳಿಗೂ ಹೆಚ್ಚು ಅವಧಿಯ ರ್ಯಾಲಿಯಲ್ಲಿ ಭಾಗವಹಿಸಿರುವ ವಿಚಾರ ಈ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಏಕೆಂದರೆ ಸಾಮಾನ್ಯವಾಗಿ ಸಚಿವರಾದವರು ತುಂಬ ಕಾರ್ಯಬಾಹುಳ್ಯ ಇರುವವರು (ಬಿಸಿ) ಎಂದು ಯಾವ ಕಾರ್ಯಕ್ರಮಗಳಿಗೂ ಹತ್ತಿಪ್ಪತ್ತು ನಿಮಿಷಗಳ ಕಾಲ ಸಹ ಭಾಗವಹಿಸದೆ ಆತುರದಲ್ಲೇ ಓಡುತ್ತಿರುತ್ತಾರೆ. ಅಂತಹದ್ದರಲ್ಲಿ ಇಬ್ಬರು ಕ್ಯಾಬಿನೆಟ್, ಓರ್ವ ರಾಜ್ಯ ಸಚಿವರು 6 ಗಂಟೆಗಳಷ್ಟು ಕಾಲದ ಸುದೀರ್ಘ ಮೆರವಣಿಗೆಯಲ್ಲಿ ಕಂಡಿದ್ದು ನಗರ ಜನಮನಕ್ಕೆ ಸೋಜಿಗವಾಗಿ ಕಂಡಿದೆ.
ಸಚಿವರ ಮುಂದಿವೆ ಸವಾಲುಗಳ ಬೆಟ್ಟ: 6ನೇ ಬಾರಿ ಶಾಸಕರಾಗಿರುವ ಖಮರುಲ್ ಇಸ್ಲಾಂ ಇದೀಗ ಜಿಲ್ಲಾ ಉಸ್ತುವಾರಿ ಸಚಿವರು. ಮಂತ್ರಿಗಿರಿ 2 ನೇ ಬಾರಿ ಅನುಭವ, ಜಿಲ್ಲಾ ಉಸ್ತುವಾರಿಗಿರಿ ಮಾತ್ರ ಮೊದಲ ಅನುಭವ. ಕಳೆದಾರು ತಿಂಗಳಿಂದ ಜಿಲ್ಲೆಯಲ್ಲಿ ಸರ್ಕಾರದ ಪ್ರಗತಿ- ವಿಗತಿಗಳ ಪರಿಶೀಲನೆಯೇ ಆಗಿಲ್ಲ
ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಂತೂ ಸಾಕಷ್ಟು ಬೇಕಾಬಿಟ್ಟಿತನ ಸಾಗಿದ್ದರೂ ಯಾರೂ ಕೇಳುವವರಿಲ್ಲ ಎಂಬಂತಾಗಿದೆ. ಬಿರು ಬೇಸಿಗೆಯ ಈ ದಿನಗಳಲ್ಲಿ ಜಿಲ್ಲೆಯ 500 ಕ್ಕೂ ಅಧಿಕ ಹಳ್ಳಿಗಳು ಕುಡಿಯುವ ನೀರಿಲ್ಲದೆ ತತ್ತರಿಸಿವೆ.
ನರಳುತ್ತಿದೆ ಗುಲ್ಬರ್ಗ: ಬಿಜೆಪಿ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಗುಲ್ಬರ್ಗ ನರಲಿದ್ದು, ಪ್ರಗತಿಗೆ ಪೆಟ್ಟು ಬಿದ್ದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆಗ ವಿರೋಧ ಪಕ್ಷದಲ್ಲಿದ್ದ ಖಮರುಲ್ ಇಸ್ಲಾಂ ಖುದ್ದು ತಾವೇ ಈ ಸಂಗತಿಯನ್ನು ಸಭೆಗಳಲ್ಲಿ ಚರ್ಚೆಗೆ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದವರು.
ಆದರೆ ಅದ್ಯಾಕೋ, ಏನೋ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂಪೂರ್ಣ ಅಧಿಕಾರ, ಹೊಣೆಗಾರಿಕೆ ಇದೀಗ ಅವರ ಹೆಗಲೇರಿ ಕುಳಿತಿರುವಾಗ ಈ ರೀತಿ ಹೊಣೆಗಾರಿಕೆ ಅರಿತರೂ ಮರೆತವರಂತೆ ಮೆರವಣಿಗೆ, ಸನ್ಮಾನ, ಸತ್ಕಾರಗಳಿಗೆ ಹೆಚ್ಚಿನ ಒತ್ತು ನೀಡುತ್ತ ತಮ್ಮ ಮಂತ್ರಿಗಿರಿ ಮೊದಲ ಹೆಜ್ಜೆಯನ್ನೇ ಪ್ರಜ್ಞಾಪೂರ್ವಕವಾಗಿರುವ, ಚಿಂತನೆ ನಡೆಸುವವರನ್ನು ಕೆಣಕುವಂತೆ ಇಟ್ಟಿದ್ದಾರೆ.
ಭೀಮಾ ನದಿಯಲ್ಲಿ ನೀರಿಲ್ಲ: ಪಾಲಿಕೆ ನಿಷ್ಕ್ರೀಯವಾಗಿದೆ. ಕಸ ವಿಲೇವಾರಿ, ಪೌರ ಕಾರ್ಮಿರ ಸಮಸ್ಯೆಗಳು ನಗರವನ್ನು ತಿಪ್ಪೆ ಗುಂಡಿಯಾಗಿಸಿವೆ. ಭೀಮಾನದಿಯಲ್ಲಿ ನೀರಿಲ್ಲ, ಬತ್ತಿ ಹೋಗಿರುವ ನದಿಗೆ ಮಹಾರಾಷ್ಟ್ರದ ನೀರು ಬಿಡಿಸಿ ಎಂದು ಕಾಂಗ್ರೆಸ್ ಶಾಸಕ ಅಲ್ಲಂಪ್ರಭು ಪಾಟೀಲರೇ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವುಗಳತ್ತ ಹೆಚ್ಚು ಗಮನ ಹರಿಸಬೇಕಾಗಿದ್ದ ಇಸ್ಲಾಂ ಸಾಹೇಬರು ಮೆರವಣಿಗೆ ಆಗುವವರೆಗೂ ಯಾವುದು ಇಲ್ಲ ಎಂಬಂತೆ ಮೆರವಣಿಗೆಗೆ ಹೆಚ್ಚಿನ ಸಮಯ ನೀಡಿದ್ದಾರೆ ಎಂದು ಜನರೇ ಆಡಿಕೊಳ್ಳುವಂತಾಗಿದೆ.
ರಸ್ತೆಗಳಿಲ್ಲದೆ ಅಫಜಲ್ಪುರ, ಆಳಂದ, ಚಿತ್ತಾಪುರದಂತಹ ತಾಲೂಕುಗಳಲ್ಲಿ ಗ್ರಾಮೀಣ ಜನತೆ ಪರದಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯವರ ಸಭೆ ಕರೆದು ಈ ಚರ್ಚೆ ನಡೆಸಬೇಕು. ಇನ್ನು ನಗರೋತ್ಥಾನ ಯೋಜನೆಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಗರಕ್ಕೆ ಹರಿದುಬಂದಂತಹ ರು. 200 ಕೋಟಿಯಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ನಿಲ್ದಾಣ, ಶಹಾಬಜಾರ್ ನಾಕಾ, ರಸ್ತೆಯಂತೂ ಕುಂಟುತ್ತ ಸಾಗಿದೆ.
ರಸ್ತೆ ದುರವಸ್ಥೆ: ಕಿರಾಣಾ ಬಜಾರ್ ರಸ್ತೆ ಅಗಲೀಕರಣವಾದರೂ ಅಲ್ಲಿ ಪಕ್ಕಾ ರಸ್ತೆ ನಿರ್ಮಾಣವಾಗಿಲ್ಲ. ರಾಷ್ಟ್ರಪತಿ ಚೌಕ್- ಲಾಲಗೇರಿ ಕ್ರಾಸ್ ರಸ್ತೆಯಂತೂ ಹದಗೆಟ್ಟು ಹೋದರೂ ಕೇಳುವವರಿಲ್ಲ. ಇವುಗಳಿಗೆಲ್ಲ ಪರಿಹಾರ ಕಾಣವುದು ಯಾವಾಗಯ ಪ್ರಗತಿ ಪರಿಶೀಲನೆಯಾದಾಗಲೇ ಅಲ್ಲವೆ ಇವೆಲ್ಲ ಸಮಸ್ಯೆಗಳು ಸಚಿವರು, ಅಧಿಕಾರಿಗಳ ಗಮನಕ್ಕೆ ಬಂದು, ನಿಷ್ಕರ್ಷೆಯಾಗಿ ಒಂದು ರೂಪ ಪಡೆಯೋದು. ಮೆರವಣಿಗೆಗಳಿಗಿಂತ ಅಹವಾಲು ಆಲಿಕೆ, ಚರ್ಚೆಯ ಭೇಟಿಗಳೇ ಹೆಚ್ಚು ಕಾಲ ಜನಮನದಲ್ಲಿ ನೆನಪಿನಲ್ಲಿ ಉಳಿಯುವುದು ಎಂಬುದು ಕಟು ವಾಸ್ತವ. ಆದರೆ ಗುಲ್ಬರ್ಗ ಹಾಗೂ ಯಾದಗಿರಿಯ ಸಚಿವತ್ರಯರು ಇದೀಗ ಆ ಅವಕಾಶ ವಂಚಿತರಾಗಿದ್ದಾರೆ.
ಆದರೇನು ಮಾಡುವುದು, ಇನ್ನೂ ಕಾಲ ಮಿಂಚಿಲ್ಲ. ಮೆರವಣಿಗೆ, ಸತ್ಕಾರದಂತಹ ಕಾರ್ಯಕ್ರಮಗಳಿಗೆ ಸಿಂಹಪಾಲು ಸಮಯ ಮೀಸಲಿಡದೆ ಜನಾದೇಶದ ರೂಪವಾಗಿ ದಕ್ಕಿರುವ ಅಧಿಕಾರ, ಹೊಣೆಗಾರಿಕೆ ಎರಡನ್ನು ಬಲು ಸಮರ್ಥವಾಗಿ, ಜನಪರವಾಗಿ ನಿಭಾಯಿಸುವರೆ? ಈ ಪ್ರಶ್ನೆಗೆ ಎಂದಿನಂತೆ ಕಾಲವೇ ಉತ್ತರಿಸಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

