ಗುಲ್ಬರ್ಗಾ

ಭೀಮೆ ಬರಿದು; ಜನನಾಯಕರ ಮೌನಾನುಷ್ಠಾನ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 28
ಜೀವನದಿ ಭೀಮೆ ಬತ್ತಿ ಹೋದರೂ ಈ ನದಿ ಪ್ರವಹಿಸುವ ಗುಲ್ಬರ್ಗ, ಬಿಜಾಪುರ, ಯಾದಗಿರಿ ಜಿಲ್ಲೆಗಳ ಜನನಾಯಕರು ತುಟಿ ಬಿಚ್ಚದೆ ಮೌನವ್ರತಧಾರಿಯಾಗಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಭೀಮೆ ಪ್ರವೇಶಿಸುವುದೇ ಬಿಜಾಪುರ ಜಿಲ್ಲೆಯಿಂದ. ಈ ಜಿಲ್ಲೆಯವರೇ ಆಗಿರುವ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಸಚಿವರು. ಅವರೂ ಭೀಮಾ ಬತ್ತಿ ಹೋಗಿ ಭಣಗುಡುತ್ತಿದ್ದರೂ ಏನನ್ನೂ ಹೇಳದೆ ಸುಮ್ಮನಿದ್ದಾರೆ.
ನದಿ ಪಾತ್ರದ ಜನನಾಯಕರ ಮೌನ ಅನುಷ್ಠಾನ ಜಿಲ್ಲೆಯ ಜನ- ಜಾನುವಾರುಗಳ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಭೀಮಾ ನದಿ ಬತ್ತಿ ಹೋಗಿರುವ ವಿಚಾರ ಯಾವೊಂದು ಜಿಲ್ಲೆ, ತಾಲೂಕು ಅಥವಾ ಹೋಬಳಿ ಮಟ್ಟದ ಸಂಗತಿಯಂತೂ ಅಲ್ಲ, ಅದೇನಿದ್ದರೂ ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರ. ಇದನ್ನು ರಾಜ್ಯ ಸರ್ಕಾರವೇ ನಿಭಾಯಿಸಬೇಕು.
ನೀರು ಬಿಡುವಂತೆ ಆಗ್ರಹ: ಕೃಷ್ಣಾ ನದಿ ಬತ್ತಿ ಹೋಯ್ತು ಅಂದಾಕ್ಷಣ ಬೆಳಗಾವಿ ಹಾಗೂ ಸುತ್ತಲಿನ ಸೀಮೆಗಳ ಜನಪ್ರತಿನಿಧಿಗಳಂತೂ ಹೇಳಿಕೆಗಳ ಸುರಿಮಳೆ ಸುರಿಸುತ್ತಾರೆ. ರಾಜ್ಯ ಸರ್ಕಾರದ ಗಮನ ಸೆಳೆದು ಮಹಾರಾಷ್ಟ್ರದಿಂದ ನೀರನ್ನು ಬಿಡಿಸಿಕೊಳ್ಳುತ್ತಾರೆ. ಕಳೆದೆರಡು ವರ್ಷಗಳಿಂದ ಈ ಕೆಲಸದಲ್ಲಿ ಅವರು ಯಶ ಕಂಡಿದ್ದು ಗುಟ್ಟೇನಲ್ಲ.
ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬೊಮ್ಮಾಯಿಯವರೇ ಖುದ್ದು ಮುಂಬೈಗೆ ಹೋಗಿ ಅಲ್ಲಿನ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆಯಾಡಿ ಬೆಳಗಾವಿ ಪ್ರಾಂತದಲ್ಲಿ ಪ್ರವಹಿಸುವ ಕೃಷ್ಣೆಗೆ 2 ಟಿಎಂಸಿ ನೀರು ಹರಿದು ಬರುವಂತೆ ಮಾಡಿದ್ದರು. ಇದೀಗ ಆ ಕೆಲಸ ಮತ್ತೆ ಯಶ ಕಂಡಿದೆ.
ದುರಂತವೆಂದರೆ ಕಳೆದ ವರ್ಷವೂ ಭೀಮಾ ನದಿ ಬೇಸಿಗೆಯಲ್ಲಿ ಬತ್ತಿದ್ದರೂ, ಜಲಸಂಪನ್ಮೂಲ ಸಚಿವ ಬೊಮ್ಮಾಯಿಯವರು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಭೀಮಾ ನೀರಿನ ಬಗ್ಗೆ ಕಿಂಚಿತ್ತು ಅವರು ಬಾಯಿಬಿಟ್ಟಿರಲಿಲ್ಲ. ಅಷ್ಟೇ ಯಾಕೆ, ಮಹಾರಾಷ್ಟ್ರಕ್ಕೆ ತೆರಳಿದ್ದ ನಿಯೋಗದಿಂದಲೂ ಭೀಮಾ ನದಿಗೂ ಕುಡಿಯಲು ಅನುಕೂಲವಾಗುವಂತೆ ನೀರು ಬಿಡಿ ಎಂದು ಆಗ್ರಹವನ್ನೂ ಮಾಡಿರಲಿಲ್ಲ.
ಜಲಸಂಪನ್ಮೂಲ ಸಚಿವರೂ ಸುಮ್ಮನಿದ್ರ ಹ್ಯಾಂಗ್ರಿ?: ಅದೇ ಸಂಪ್ರದಾಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮುಂದುವರಿದೆ. ಬಿಜಾಪುರ, ಗುಲ್ಬರ್ಗ, ಯಾದಗಿರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುವ ನಾಯಕರು ಸರ್ಕಾರದ ಒಳಗೆ, ಹೊರಗೆ ಇದ್ದರೂ ಭೀಮಾ ನದಿ ಪಾತ್ರ ಹಸಿಯಾಗಿಸುವಲ್ಲಿ ಅದು ನೆರವಾಗುತ್ತಿಲ್ಲ.
ಬಿಜಾಪುರದ ಎಂ.ಬಿ. ಪಾಟೀಲ್ ಆ ಜಿಲ್ಲೆಯ ಉಸ್ತುವಾರಿ, ಜೊತೆಗೆ ಜಲಸಂಪನ್ಮೂಲ ಮಂತ್ರಿಗಳು. ಭೀಮಾ ತೀರದ ದಾಹ ಗೊತ್ತಿದ್ದೂ ಅವರು ಸುಮ್ಮನಿದ್ದಾರೆ ಎಂದಮೇಲೆ ಇದು ಜಾಣ ಕುರುಡು ಧೋರಣೆಯಲ್ಲದೇ ಮತ್ತೇನು ಎಂದು ಜನ ಪ್ರಶ್ನಿಸುವಂತಾಗಿದೆ.
ಇನ್ನು ಗುಲ್ಬರ್ಗ ಹಾಗೂ ಯಾದಗಿರಿಯ ಉಸ್ತುವಾರಿ ಸಚಿವರಾಗಿರುವ ಖಮರುಲ್ ಇಸ್ಲಾಂ, ಬಾಬುರಾವ ಚಿಂಚನ್ಸೂರ್ ಅವರಂತೂ ಮಂತ್ರಿಗಳಾಗಿ 3 ವಾರ ಕಳೆದರೂ ಇಂದಿಗೂ ಬತ್ತಿದ ಭೀಮೆ, ನದಿ ತೀರದಲ್ಲಿನ ಜನ- ಜಾನುವಾರುಗಳ ನೋವು- ಯಾತನೆಯ ಬಗ್ಗೆ ಮಾತೇ ಆಡಿಲ್ಲ.
ಸಚಿವರ ನಿರಾಸಕ್ತಿ: ಭೀಮಾ ನದಿ ಹರಿದು ಹೋಗುವ ಬಿಜಾಪುರ ಜಿಲ್ಲೆಯ ಇಂಡಿ, ಸಿಂದಗಿ ಶಾಸಕರು, ಗುಲ್ಬರ್ಗದ ಅಫಜಲ್ಪುರ(ಮಾಲೀಕಯ್ಯ ಗುತ್ತೇದಾರ್), ಗುಲ್ಬರ್ಗ ದಕ್ಷಿಣೋತ್ತರ(ದತ್ತಾತ್ರೇಯ, ಖಮರುಲ್), ಚಿತ್ತಾಪುರ(ಪ್ರಿಯಾಂಕ್), ಜೇವರ್ಗಿ(ಡಾ. ಅಜಯ್‌ಸಿಂಗ್), ಗುಲ್ಬರ್ಗ ಗ್ರಾಮೀಣ(ರಾಮಕೃಷ್ಣ ಜಿ) ಶಾಸಕರು, ಯಾದಗಿರಿಯ ಉಸ್ತುವಾರಿ ಬಾಬೂರಾವ ಚಿಂಚನ್ಸೂರ್ ಹಾಗೂ ಅಲ್ಲಿನ ಶಹಾಪುರದ ಗುರು ಪಾಟೀಲ್, ಯಾದಗಿರಿಯ ಡಾ. ಮಾಲಕರೆಡ್ಡಿ ಮೊದಲಾದವರು ಇಂದಿಗೂ ಈ ಬೆಳವಣಿಗೆ ಜೀವ ಜಗತ್ತಿಗೇ ಮಾರಕವಾದದ್ದು ಎಂದು ಕಳವಳ ಹೊರಹಾಕಿಲ್ಲ.
ಭೀಮಾ ನದಿಗೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿದು ಬರುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಣಲಾಗಲಿ, ಜಲಸಂಪನ್ಮೂಲ ಸಚಿವಾಲಯದ ಗಮನ ಸೆಳೆಯಲಾಗಲಿ ನಿಯೋಗದಲ್ಲಿ ಹೋಗುವ ಕಸರತ್ತೂ ಮಾಡಿಲ್ಲ.
ಜಿಲ್ಲಾಡಳಿತಗಳೂ ಗಪ್‌ಚುಪ್: ಭೀಮೆ ಬತ್ತಿದ್ದರಿಂದಲೇ ಬಿಜಾಪುರ, ಯಾದಗಿರಿ, ಗುಲ್ಬರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ಈ ಜಿಲ್ಲೆಗಳ ಆಡಳಿತ ಹೊಣೆ ಹೊತ್ತಿರುವ ಅಧಿಕಾರಿಗಳೂ ಸರ್ಕಾರದ ಗಮನ ಸೆಳೆದಿಲ್ಲ.
ಎಲ್ಲ ಹಂತಗಳಲ್ಲಿಯೂ 'ಚಲ್ತೆ ಕಾ ನಾಮ್...' ನೀತಿಯೇ ಪ್ರಧಾನವಾಗಿದ್ದರಿಂದ ಭೀಮಾ ಒಣಗಿ ಹೋದರೇನು ಅಲ್ಲಿನ ಜನ- ಜಾನುವಾರುಗಳು, ಜಲಚರಗಳು ಯಾತನೆ ಅನುಭವಿಸಿದರೇನು ಎಂಬಂತಾಗಿದೆ.
ಭೀಮಾ ನದಿ ಪಾತ್ರಕ್ಕೆ ಹೆಚ್ಚಿನ ನೀರು ಬೇಸಿಗೆಯಲ್ಲಿ ಹರಿದು ಬರುವಂತೆ ಮಾಡುವುದು ಒತ್ತಟ್ಟಿಗಿರಲಿ, ಇರುವ ನೀರನ್ನು ಬಳಸಬೇಡಿ ಎಂಬ ಫರ್ಮಾನು ಬೇರೆ ಜಿಲ್ಲಾಡಳಿತಗಳು ಹೊರಡಿಸುತ್ತಿವೆಯಂತೆ. ಇದರಿಂದಾಗಿ ಭೀಮಾ ನದಿಯನ್ನೇ ನಂಬಿರುವ ರೈತರು, ಜನತೆ ಕಂಗಾಲಾಗಿದ್ದಾರೆ.
ಅಫಜಲ್ಪುರ ತಾಲೂಕಿನ ಗಾಣಗಾಪುರ, ಇಟಗಾ, ಘತ್ತರ್ಗಾ ಭಾಗದಲ್ಲಂತೂ ಭೀಮಾ ನದಿಗುಂಟ ಇರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನೇ ಕಿತ್ತುಹಾಕುವ ಕೆಲಸ ಜೆಸ್ಕಾಂ ಅಧಿಕಾರಿಗಳು ಆರಂಭಿಸಿದ್ದಾರೆ. ಬತ್ತಿದ ಭೀಮೆಯಲ್ಲಿ ನೀರುಳಿಯುವಂತೆ ಮಾಡಲು ಇದಲ್ಲ ಕ್ರಮ ಎಂದು ರೈತರು ಅದೆಷ್ಟು ಹೇಳಿದರೂ ಜೆಸ್ಕಾಂ ಕಿವುಡಾಗಿದೆ ಎಂದು ರೈತರು ಅಳುತ್ತಿದ್ದಾರೆ.
ಮರಳು ಮಾಫಿಯಾಕ್ಕೆ ಕೇಳೋರಿಲ್ಲ: ಭೀಮಾ ತೀರದಗುಂಟ ಮರಳು ಸಾಗಾಣಿಕೆ ಅವ್ಯಾಹತವಾಗಿ ಸಾಗಿದ್ದರೂ ಯಾರೂ ಕೇಳೋರಿಲ್ಲ. ಅಫಜಲ್ಪುರ ಹಾಗೂ ಜೇವರ್ಗಿಯ ಹಲವಡೆ ಭೀಮಾನದಿಗುಂಟ ಬಾಂದಾರು ನಿರ್ಮಿಸಿ ನೀರನ್ನು ಹಿಡಿದಿಡಲಾಗಿತ್ತು. ಮೊನ್ನೆವರೆಗೂ ಬಾಂದಾರುಗಳು ನೀರಿನಿಂದ ತುಂಬಿದ್ದರೂ ಮರಳು ಮಾಫಿಯಾ ಒತ್ತಡದಿಂದ ಬಾಂದಾರು ಗೇಟ್ ಎತ್ತಿ ನದಿ ಪಾತ್ರದಲ್ಲಿನ ನೀರು ಖಾಲಿ ಮಾಡಲಾಗಿದ್ದು, ಅಲ್ಲೆಲ್ಲಾ ಈಗ ಮರಳು ಸಾಗಾಣಿಕೆ ಎಡೆಬಿಡದೆ ಸಾಗಿದೆ.
ಮೊದಲೇ 2 ವರ್ಷ ಮಳೆ ಸುರಿದಿಲ್ಲ, ಮೇಲೆ ಮರಳು ಮಾಫಿಯಾ ಜೋರು, ಮಹಾರಾಷ್ಟ್ರದ ನೀರು ಕೇಳದ ನಮ್ಮ ನಾಯಕರು, ಹೀಗಿದ್ದಾಗ ಜೀವನದಿ ಭೀಮಾ ಜೀವಂತವಾಗಿರಲು ಸಾಧ್ಯವೇ?

ಸಿಎಂ ಭೀಮೆಯತ್ತ ನೋಡಲಿ
ಕೃಷ್ಣೆಗೆ ನೀರು ಹರಿದು ಬಂದರಾಯ್ತೆ, ಜೀವನದಿ ಭೀಮೆಗೂ ನೀರಿಲ್ಲದೆ ತಿಂಗಳು ಉರುಳಿವೆ. ಯಾರೂ ಕೇಳುತ್ತಿಲ್ಲ. ಸರ್ಕಾರ ಸುಣ್ಣ- ಬೆಣ್ಣೆ ನೀತಿ ಈ ಕೃಷ್ಣೆ- ಭೀಮೆ ನದಿಗಳ ವಿಚಾರದಲ್ಲಿ ಅನುಸರಿಸದೆ ಜನರು- ಜಾನುವಾರು ಹಿತಾಸಕ್ತಿ ಕಾಪಾಡಲು ತಕ್ಷಣ ಮಹಾರಾಷ್ಟ್ರಕ್ಕೆ ಸಂಪರ್ಕಿಸಿ ಭೀಮೆಗೂ ನೀರು ಹರಿದು ಬರುವಂತೆ ಮಾಡಬೇಕು. ಖುದ್ದು ಸಿದ್ದರಾಮಯ್ಯನವರೇ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಆಗ ಮಾತ್ರ ಭೀಮಾ ನದಿ ಪಾತ್ರವೂ ನೀರು ಕಂಡೀತು.
- ಕೇದಾರಲಿಂಗಯ್ಯ ಹಿರೇಮಠ
ರೈತ ಹೋರಾಟಗಾರರು, ಗುಲ್ಬರ್ಗ
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.