ಅಂಗವಿಕಲರಿಗೆ ಅಲ್ಲಂಪ್ರಭು ತ್ರಿಚಕ್ರ ವಾಹನ ಗಿಫ್ಟ್
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.4
ಪ್ರಕರಣ-1: ಬಾಬಾ ಪಟೇಲ್ ಕೋಬಾಳ್ ಅಂಗವಿಕಲ, ಸ್ಥಳೀಯ ಕೋಳಕೂರ ಗ್ರಾಮದಲ್ಲಿ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕ. ನಿತ್ಯ ಕೋಬಾಳದಿಂದ ಕೋಳಕೂರಿಗೆ 6 ಕಿ.ಮೀ. ಅಡ್ಡಾಡಬೇಕು. ಸ್ವಂತ ವಾಹನವಿಲ್ಲ, ಬಸ್ ಹತ್ತಿ ಬದುಕು ಕಟ್ಟಬೇಕು. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿನ ಶೇ.10 ಅನುದಾನದಲ್ಲಿ ನೀಡಿದ್ದ ತ್ರಿಚಕ್ರ ವಾಹನ ಇವರ ಪಾಲಿಗೆ ವರವಾಯಿತು. ನಿತ್ಯ ಓಡಾಡಲು ಅನುಕೂಲ ಆಗ್ತದರಿ, ನಾವು ಎಲ್ರಿಗೂ ಥ್ಯಾಂಕ್ಸ್ ಹೇಳಬೇಕು.... ಎನ್ನುತ್ತಾರೆ ಬಾಬು ಪಟೇಲ್.
ಪ್ರಕರಣ-2: ರಾಜೇಶ್ವರಿ ಅಂಗವಿಕಲೆ, ಪಿಯುಸಿ ಓದಿರುವ ಇವಳು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಾಳೆ. ನಿತ್ಯ ಬಸ್ಸು ಹತ್ತಿಯೋ, ಅವರಿವರ ನೆರವು ಪಡೆದೋ ಅಡ್ಡಾಡುವುದಕ್ಕೆ ತುಂಬಾ ಬೇಸರಪಡುತ್ತಿದ್ದ ರಾಜೇಶ್ವರಿಗೆ ತ್ರಿಚಕ್ರ ವಾಹನ ಗಿಫ್ಟ್ ಸಿಕ್ಕಿದೆ. ನನಗೆ ಇನ್ನೂ ಓದಲು, ತರಬೇತಿ ಪಡೆಯಲು ಈ ವಾಹನ ಹುಮ್ಮಸ್ಸು ತುಂಬಿದೆ... ಎನ್ನುತ್ತಾರೆ ರಾಜೇಶ್ವರಿ.
ಪ್ರಕರಣ-3: ಬಳೂಂಡಗಿ ಗ್ರಾಮದ ಸಿದ್ರಾಮಯ್ಯ ಸ್ವಾಮಿ ಅವರಿಗಂತೂ ಪುರಾಣ ಹೇಳಲು ಊರಿಂದೂರಿಗೆ ಹೋಗುವ ಅನಿವಾರ್ಯತೆ. ಕಾಲಿಲ್ಲ, ಆದರೂ ನಿತ್ಯ ಲೋಕಸಂಚಾರಿ. ಹೀಗಾಗಿ ಇವರಿಗಂತೂ ತ್ರಿಚಕ್ರ ವಾಹನ ಬದುಕಿಗೆ ಇಂಬು ನೀಡಿದೆ. ನನಗಂತೂ ಈ ವಾಹನ ರಥದ ರೂಪದಲ್ಲಿ ಸಿಕ್ಕಿದೆ. ಇದನ್ನು ಸಮರ್ಥವಾಗಿ, ಸದ್ವಿನಿಯೋಗ ಮಾಡಿಕೊಳ್ಳುವೆ... ಎಂದವರು ಸಿದ್ರಾಮಯ್ಯ.
ಹೀಗೆ ಕೊಡುಗೆ ರೂಪದಲ್ಲಿ ವಾಹನ ಪಡೆದಂತಹ ಎಲ್ಲಾ ಡಜನ್ ಅಂಗವಿಕಲರೆಲ್ಲರೂ ಇದೇ ರೀತಿ ತಮ್ಮ ನಿತ್ಯದ ಬದುಕು ಕಟ್ಟಲು ವಾಹನ ಅದ್ಹೇಗೆ ನೆರವಾಗಲಿದೆ ಎಂಬುದನ್ನು ಹೇಳುತ್ತ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಗುಣಮಟ್ಟದ ಕೊಡುಗೆ ನೀಡಿ ತಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಎಂಎಲ್ಸಿ ಅಲ್ಲಂಪ್ರಭು ಅವರಿಗೆ ಅಭಿನಂದಿಸಿದರು.
ದೀಪಾವಳಿ ಪಾಡ್ಯ (ಬಲಿ ಪಾಡ್ಯಮಿ) ದಿನವಾದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತರಹೇವಾರಿ ಬಣ್ಣಗಳ ಹೋಂಡಾ ಆಕ್ಟಿವಾ ತ್ರಿಚಕ್ರ ವಾಹನಗಳು ಕೊಡುಗೆ ರೂಪದಲ್ಲಿ ಬಂದಾಗ ಅಲ್ಲಿದ್ದ ಜೇವರ್ಗಿ, ಶಹಾಪುರ ಭಾಗದ 12 ಅಂಗವಿಕಲರು ಖುಷ್. ತ್ರಿಚಕ್ರ ವಾಹನ ತುಳಿದೋ, ಕೋಲೂರುತ್ತ ಪರೇಶಾನಿ ಬದುಕು ಕಟ್ಟುತ್ತಿದ್ದ ತಮಗೆ ಜನಪ್ರತಿನಿಧಿಯೋರ್ವರು ಈ ರೀತಿ ತ್ರಿಚಕ್ರ ವಾಹನ ನೀಡುವ ಮೂಲಕ ದೀಪಾವಳಿ ಕೊಡುಗೆ ನೀಡುವರು ಎಂದು ಕನಸು ಮನಸಲ್ಲೂ ಯೋಚಿಸಿರಲಿಕ್ಕಿಲ್ಲ.
ಕ್ಷೇತ್ರಾಭಿವೃದ್ಧಿ ಅನುದಾನ 1 ಕೋಟಿ ನಿಧಿಯಲ್ಲಿ ಶೇ.10ರಷ್ಟು ಅಂಗವಿಕಲರಿಗೆ ವಾಹನ ನೀಡಲು ಬಳಸಬೇಕು ಎಂಬ ನಿಯಮದಡಿ ಎಂಎಲ್ಸಿ (ಸ್ಥಳೀಯ ಸಂಸ್ಥೆಗಳು) ಅಲ್ಲಂಪ್ರಭು ಪಾಟೀಲ್ ನೆಲೋಗಿಯವರು ತಾವೇ ಖುದ್ದು ಫಲಾನುಭವಿಗಳನ್ನು ಆಯ್ಕೆ ಮಾಡಿ ಹೋಂಡಾ ಆಕ್ಟೀವಾ 12 ವಾಹನಗಳನ್ನು ಅವರಿಗೆ ದೀಪಾವಳಿ ಹಬ್ಬದ ದಿನ ಕೊಡುಗೆ ರೂಪದಲ್ಲಿ ವಿತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ವಾಹನಗಳ ಕೀಲಿ ಕೈಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಜಿಪಂ ಅಧ್ಯಕ್ಷ ರಮೇಶ ಮರಗೋಳ್, ಪಾಲಿಕೆ ಆಯುಕ್ತ ಶ್ರೀಮಂತ ಕಟ್ಟೀಮನಿ, ಡಿಸಿಸಿ ಅಧ್ಯಕ್ಷ ಬಾಗಣಗೌಡ ಸಂಕನೂರ್, ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಪಾಟೀಲ್ ಕುರಕುಂದಾ, ಭೀಮರಾವ ತೇಗಲತಿಪ್ಪಿ, ರವಿ ಒಂಟಿ, ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಡಾ.ಪ್ರಸಾದ್ ಸೇರಿದಂತೆ ಅನೇಕರು ಈ ಸಂದರ್ಭ ಹಾಜರಿದ್ದರು.
ಫಲಾನುಭವಿಗಳು
ಬೈಲಪ್ಪಾ ಗಂಗಪ್ಪಾ ದುಮ್ಮದ್ರಿ
ಶೇಖ ಯುನೀಸ್ ಗುಲ್ಬರ್ಗ
ರಾಸಣಗಿ ಮಲ್ಲಣ್ಣ ಶರಣಗೌಡ
ಅಬ್ದುಲ್ ರಜಾಕ್ ಯಡ್ರಾಮಿ
ಬಾಬಾ ಪಟೇಲ್ ಕೋಬಾಳ್
ಅಯ್ಯಣ್ಣ ದೇವೀಂದ್ರಪ್ಪ ಬಿರಾಳ
ಭಳೂಂಡಗಿಯ ಸಿದ್ರಾಮಯ್ಯ ಈರಯ್ಯ
ಜೈಭೀಮ ಜೇರಟಗಿ
ಬಸವರಾಜ ಭಜಂತ್ರಿ ಸೊನ್ನ
ರಾಜೇಶ್ವರಿ ಗುರುಲಿಂಗಪ್ಪ ಹಿರೌಗೋಡ ನೆಲೋಗಿ
ಮಲ್ಲಿಕಾರ್ಜುನ ಶಾರದಳ್ಳಿ, ಶಹಾಪುರ
ಮಹಾದೇವಪ್ಪ ಹರಿಜನ, ಡಿಗ್ಗಿ, ಶಹಾಪುರ
ಉತ್ತಮ ವಾಹನಗಳ ವಿತರಣೆ
ಫಫಲಾನುಭವಿಗಳಿಗೆ ವಾಹನಗಳ ಕೀಲಿ ಕೈ ವಿತರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಪಸಂಖ್ಯಾತ, ವಕ್ಫ್ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು, ಈ ಸೌಲಭ್ಯವನ್ನು ತಾವು ಪ್ರತಿನಿಧಿಸುತ್ತಿರುವ ಇಲಾಖೆಗಳಲ್ಲಿಯೂ ಶೇ.3ರಷ್ಟು ಹಣ ಅಂಗವಿಕಲರಿಗೆ ವಾಹನ ನೀಡಲು ಬಳಸಬೇಕು ಎಂದಿದೆ. ಆ ಹಣದಲ್ಲಿ ಗುಣಮಟ್ಟದ ಹಾಗೂ ಉತ್ತಮ ಕಂಪನಿಯ ತ್ರಿಚಕ್ರ ವಾಹನಗಳನ್ನೇ ಖರೀದಿಸಿ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಜನಹಿತವೇ ನಮ್ಮ ಸಂತೃಪ್ತಿ: ಅಲ್ಲಂಪ್ರಭು
ತಾವು ಎಂ.ಎಲ್ಸಿ. ಆಗಿದ್ದೇ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಹಕಾರದಿಂದ. ಹೀಗಾಗಿ, ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಶೇ.10 ಹಣವನ್ನು ಪ್ರತಿನಿಧಿಸುವ ಕ್ಷೇತ್ರದ ವಿಕಲಾಂಗರ ಬದುಕಿಗೆ ಊರುಗೋಲು ರೂಪದಲ್ಲಿ ನೀಡಬೇಕು ಎಂಬ ನಿಯಮದಡಿ ತಾವು ಗುಣಮಟ್ಟದ ವಾಹನ ಸೌಕರ್ಯ ಆಯ್ದ 12 ಅಂಗವಿಕಲರಿಗೆ ನೀಡಿದ್ದೇನೆ. ಈ ಕೆಲಸ ಮುಂದುವರಿಯುತ್ತದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ನೆರವಾಗಬೇಕೆಂಬುದೇ ಆಶಯವೆಂದು ಎಂ.ಎಲ್ಸಿ. ಅಲ್ಲಂಪ್ರಭು ಪಾಟೀಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

