ಗುಲ್ಬರ್ಗಾ

ಗಿಡಕ್ಕೆ ಪಾದರಕ್ಷೆ ಕಟ್ಟಿ ಹರಕೆ

Published On :

ಆಳಂದ:  ತಾಲೂಕಿನ ಗೋಳಾ (ಬಿ) ಗ್ರಾಮದ ಆರಾಧ್ಯ ದೇವತೆ ಲಕ್ಕಮ್ಮ ದೇವಿ ಜಾತ್ರೆಯು ಶುಕ್ರವಾರ ಭಕ್ತರು ಸಡಗರ ಸಂಭ್ರಮದೊಂದಿಗೆ ಆಚರಿಸಿದರು. ಮುಂಜಾನೆ ಗ್ರಾಮದಿಂದ ಕೆಲ ಭಕ್ತರು ಪಾದರಕ್ಷೆಗಳನ್ನು ತಲೆಯ ಮೇಲೆ ಹೊತ್ತು ದೇವಸ್ಥಾನದ ಆವರಣದ ಗಿಡಕ್ಕೆ ಕಟ್ಟಿ ತಮ್ಮ ಹರಕೆ ತೀರಿಸಿದರು.
ಭಕ್ತರು ತಮ್ಮ ಬಂದು ಬಾಂಧವರನ್ನು ಜಾತ್ರೆಗೆ ಕರೆದುಕೊಂಡು ಬಂದು ತಮ್ಮ ಹರಕೆ ತೀರಿಸಲು ಪ್ರಾಣಿಗಳ ಬಲಿ ನಡೆಸಿ ನೈವೆದ್ಯವನ್ನು ದೇವಿಗೆ ಅರ್ಪಿಸಿ ನಂತರ ಸಹ ಭೋಜನಗೈದರು. ಕೆಲ ಭಕ್ತರು 50ಕ್ಕೂ ಹೆಚ್ಚು ಕೋಣಗಳನ್ನು ದೇವರಿಗೆ ಬಿಟ್ಟು ಹರಕೆ ತೀರಿಸಿದರು.
ಗ್ರಾಮದಿಂದ 50ಕ್ಕೂ ಹೆಚ್ಚು ಜನರು ಕಳಸ ಹೊತ್ತು 1ಕಿ.ಮೀ. ನಡೆದು ದೇವಸ್ಥಾನಕ್ಕೆ ತಲುಪಿ ನಂತರ ವಿಶೇಷ ಪೂಜೆ ನೆರವೇರಿಸಿ ಪ್ರದಕ್ಷಿಣೆ ಗೈದರು. ಜಾತ್ರೆಯಲ್ಲಿ ಪೋತರಾಜರ ಕುಣಿತ, ಜೋಗತಿ, ಭೂತೆಯರ ಕುಣಿತವೂ ಎಲ್ಲೆಂದರಲ್ಲಿ ಕಂಡು ಬಂತು.
ವಿಶೇಷವಾಗಿ ಹಲಿಗೆ ಮೇಳ, ಜಾತ್ರೆಗೆ ಹೆಚ್ಚಿನ ಮೆರಗು ತಂದು ಕೊಟ್ಟಿತು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಬಹು ದೂರದ ಪ್ರದೇಶಗಳಿಂದಲೂ ಭಕ್ತರು ಜಾತ್ರೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡು ತಮ್ಮದೆ ಆದ ನೇವೆದ್ಯ, ವಿಶೇಷ ಹರಕೆಗಳನ್ನು ತೀರಿಸಿದರು.
ಎಲ್ಲಿ ನೋಡಿದರಲ್ಲಿ ಜನಜಂಗುಳಿ, ವಾಹನಗಳ ಭರಾಟೆ ಮೀತಿ ಮೀರಿತು. 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದರು. ಗ್ರಾಪಂ ವತಿಯಿಂದ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಾಣಿ ಬಲಿ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ:  ಕಳೆದ ಹಲವಾರು ವರ್ಷಗಳಿಂದಲೂ ಜಾತ್ರೆಯಲ್ಲಿ ದೇವಿಯ ಹೆಸರಿನ ಮೇಲೆ ಕುರಿ, ಕೋಳಿ ಪ್ರಾಣಿಗಳ ಬಲಿ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ತಾಲೂಕಾಡಳಿತ, ಜಿಲ್ಲಾಡಳಿತ ಪ್ರಾಣಿ ಬಲಿ ತಡೆಯುವಲ್ಲಿ ವಿಫಲವಾಗಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಪ್ರಾಣಿಗಳ ಬಲಿ ನಡೆದಿರುವುದು ಪ್ರಜ್ಞಾವಂತ ಜನರ ತಲೆ ತಗ್ಗಿಸುವಂತಾಗಿದೆ.
ರಾಜ್ಯ ಸರ್ಕಾರ ಅನಿಷ್ಟ ಪದ್ಧತಿಗಳ ನಿರ್ಮುಲನೆಗಾಗಿ ಕಾನೂನು ಜಾರಿಗೆ ತರುತ್ತಿರುವುದು ಒಂದೆಡೆಯಾದರೆ, ಯಾರ ಹಂಗು ಇಲ್ಲದೇ ರಾಜಾರೋಷವಾಗಿ ಪ್ರಾಣಿ ಬಲಿ ದೇವರ ಹೆಸರಿನ ಮೇಲೆ ನಡೆಯುತ್ತಿರುವುದು ನೋಡಿದರೆ ರಾಜ್ಯ ಸರ್ಕಾರದ ಮೌಢ್ಯಮುಕ್ತ ಕರ್ನಾಟಕ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿರುವುದು ವಿಪರ್ಯಾಸವೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.