ನರೇಂದ್ರ ಮೋದಿಗೆ ಸೂಕ್ತ ಭದ್ರತೆ
ಗುಲ್ಬರ್ಗ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ, ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ಬೆಂಗಳೂರು ರ್ಯಾಲಿ ಸಂದರ್ಭದಲ್ಲಿ ಕೇಂದ್ರದ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಝಡ್ ಪ್ಲಸ್ ದರ್ಜೆಯ ಭದ್ರತೆ ಒದಗಿಸಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಮಂಗಳವರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ರ್ಯಾಲಿಗೂ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ಭದ್ರತೆ ವಿಚಾರದಲ್ಲಿ ಯಾವುದೇ ಲೋಪಗಳು ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೋದಿ ಬೆಂಗಳೂರು ಕಾರ್ಯಕ್ರಮವನ್ನು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವರು ಗುಲ್ಬರ್ಗ ಸೇರಿದಂತೆ ರಾಜ್ಯದೆಲ್ಲೆಡೆಯಲ್ಲಿಯೂ ಭಯೋತ್ಪಾದನೆ ಸೇರಿದಂತೆ ಕೆಲವು ಮಹತ್ವದ ಹಾಗೂ ಸೂಕ್ಷ್ಮ ಬೆಳವಣಿಗೆಗಳ ಬಗ್ಗೆ ಈಗಾಗಲೇ ಆರಂಭವಾಗಿರುವ ಆಂತರಿಕ ಭದ್ರತಾ ವಿಭಾಗ ಕಾವಲಿಟ್ಟಿದೆ.
ಇಲ್ಲಿಯವರೆಗಿನ ಸೂಚನೆಗಳ ಪ್ರಕಾರ ರಾಜ್ಯದ ಎಲ್ಲಿಯೂ ಭಯೋತ್ಪಾದನೆ ಬಾಲ ಕಂಡುಬಂದಿಲ್ಲ. ಈ ಬಗ್ಗೆ ಆಂತರಿಕ ಭದ್ರತಾ ವ್ಯವಸ್ಥೆಯ ಸಿಬ್ಬಂದಿಗಳೇ ಗಮನ ಹರಿಸುತ್ತಿದ್ದಾರೆ ಎಂದರು.
ಪೊಲೀಸರಿಗೆ ವಸತಿ: ರಾಜ್ಯದಲ್ಲಿ ಶೀಘ್ರವೇ 8,500 ಪೊಲೀಸ್ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇದಲ್ಲದೆ ಪೊಲೀಸರಿಗೆ ಹುಡ್ಕೋ 1,500 ಕೋಟಿ ಸಾಲದಿಂದ 11 ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಗುಲ್ಬರ್ಗದಲ್ಲಿ ಪೊಲೀಸ್ ವಸತಿಗೃಹಗಳ ಶಿಥಿಲ ಸ್ಥಿತಿ ತಲುಪಿರುವ ವಿಚಾರ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಗಿದೆ. ಅಗತ್ಯ ಕಂಡಲ್ಲಿ ಹೆಚ್ಚುವರಿ ಅನುದಾನ ನೀಡಿ ಗುಲ್ಬರ್ಗ ಜಿಲ್ಲೆಯ ಪೊಲೀಸ್ ವಸತಿ ನಿಲಯಗಳ ಸೂಕ್ತ ನಿರ್ವಹಣೆಗೆ ಕ್ರಮ ಜರುಗಸಲಾಗುತ್ತದೆ ಎಂದರು.
ನೈತಿಕ ಪೊಲೀಸಿಂಗ್ ಯಾಕೆ?: ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ನೈತಿಕ ಪೊಲೀಸಿಂಗ್ ಹೆಸರಲ್ಲಿ ಕೆಲವು ಶಕ್ತಿಗಳು ಕಾನೂನನ್ನೇ ಕೈಗೆತ್ತಿಕೊಳ್ಳುವ ಯತ್ನ ಮಾಡುತ್ತಿವೆ.
ಇಂತಹ ಪ್ರಯತ್ನಗಳನ್ನು ಸರ್ಕರ ಯಾವ ಕಾರಣಕ್ಕೂ ಸಹಿಸಿಕೊಳ್ಳೋದಿಲ್ಲ. ನೈತಿಕ ಪೊಲೀಸಿಂಗ್ ಹೆಸರಲ್ಲಿನ ಪಟ್ಟಭದ್ರ ಶಕ್ತಿಗಳ ಕೆಲಸಕಾರ್ಯಗಳನ್ನು ಸಹಿಸಲಾಗದು. ಅಂಥವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ರೌಡಿ ಶೀಟ್ ಆರಂಭಿಸಲಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯಾದ್ಯಂತ ಸರಗಳ್ಳತನ ಪಿಡುಗಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಗೃಹ ಸಚಿವಾಲಯಕ್ಕೆ ಬರುತ್ತಿವೆ. ಹೀಗಾಗಿ ಸರಗಳ್ಳರ ವಿರುದ್ಧ ಯಾವುದೇ ಮುಲಾಜಿಲ್ಲದೆ ಗೂಂಡಾ ಕಾಯ್ದೆ ಅನುಷ್ಠಾನಗೊಳಿಸುತ್ತೇವೆ.
ಕೆ.ಜೆ. ಜಾರ್ಜ್, ಗೃಹ ಸಚಿವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

