ಗುಲ್ಬರ್ಗಾ

ಸರಗಳ್ಳರ ವಿರುದ್ಧ 'ಗೂಂಡಾ'ಸ್ತ್ರ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ನ. 12
ಹೆಣ್ಮಕ್ಕಳ ಸುರಕ್ಷತೆಗಾಗಿ ಈಗಾಗಲೇ ಬಲಾತ್ಕಾರ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸುತ್ತಿರುವ ಸರ್ಕಾರ ಇದೀಗ ಹೆಚ್ಚುತ್ತಿರುವ ಸರಗಳ್ಳರ ಉಪಟಳಕ್ಕೆ ಬ್ರೆಕ್ ಹಾಕಲೂ ಈ ಕಾಯ್ದೆ ಮೊರೆ ಹೋಗಲು ಮುಂದಾಗಿದೆ.
ಪದೆ ಪದೇ ಸರಗಳ್ಳತನ ಮಾಡುವವರು (ಹ್ಯಾಬಿಚುವಲ್ ಅಫೇಂಡರ್ಸ್) ಇಂಥ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿರುತ್ತಾರೆ. ಆದರೂ ಮತ್ತೆ ಈ ದಂಧೆಗೇ ಕೈ ಹಾಕುವವರು ಸೇರಿದಂತೆ ಇಡೀ ರಾಜ್ಯದ 30 ಜಿಲ್ಲೆಗಳ ಸರಗಳ್ಳತನದ ಸಂಪೂರ್ಣ ಮಾಹಿತಿ ಕಲೆ ಹಾಕಿ, ವಿಶ್ಲೇಷಣೆ ಶುರುವಾಗಿದೆ.
ಸರಗಳ್ಳತನ ದಂಧೆಯನ್ನೇ ಚಟವಾಗಿಸಿಕೊಂಡವರ ಪ್ರತ್ಯೇಕ ಪಟ್ಟಿ ರಾಜ್ಯಾದ್ಯಂತ ಆಯಾ ಪ್ರಾಂತವಾರು ಸಿದ್ಧವಾಗುತ್ತಿದ್ದು ಈಗಾಗಲೇ ಗೃಹ ಸಚಿವಾಲದ ಈ ಕೆಲಸಕ್ಕೆ ಅಗತ್ಯವಿರುವ ನಿರ್ದೇಶನಗಳನ್ನು ಆಯಾ ಜಿಲ್ಲೆಯ ಎಸ್ಪಿ, ಎಎಸ್ಪಿಗಳು ಹಾಗೂ ಉಪ ವಿಭಾಗೀಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದೆ.
ಕಾನೂನು ಸಮರಕ್ಕೆ ವೇದಿಕೆ: ಈ ಬೆಳವಣಿಗೆಯಿಂದ ಪದೇಪದೇ ಸರಗಳ್ಳತನದಂಥ ಕುಕೃತ್ಯ ಮಾಡುತ್ತ ಸಮಾಜದಲ್ಲಿ ತಲ್ಲಣ ಮೂಡಿಸುವವರ ವಿರುದ್ಧ ಗೂಂಡಾ ಕಾಯ್ದೆ ಅನ್ವಯಿಸಲು ಅಗತ್ಯವಿರುವ ಕಾನೂನು ಸಮರಕ್ಕೆ ಪೊಲೀಸ್ ಇಲಾಖೆ ವೇದಿಕೆ ಸಿದ್ಧಪಡಿಸುತ್ತಿದೆ. ಸರಗಳ್ಳತನದಂಥ ಅಪರಾಧಗಳನ್ನು ನಿಯಂತ್ರಿಸಲಾಗದೆ ಸದಾಕಾಲ ಜನರ ಟೀಕಿಗೆ ಗುರಿಯಾಗುತ್ತಿರುವ ಪೊಲೀಸ್ ಇದೀಗ ಲಭ್ಯವಿರುವ ಗೂಂಡಾ ಕಾಯ್ದೆಯನ್ನೇ  ಬಳಸಲು ಮುಂದಾಗಿದೆ.
ಗೃಹ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೂ ಸರಗಳ್ಳತನದ ಪಿಡುಗು ತನ್ನ ಬಾಹುಗಳನ್ನು ಚಾಚುತ್ತಿರುವ ಸಂಗತಿ ಬಗ್ಗೆ ಚರ್ಚೆಯಾಗಿತ್ತು. ಈ ಸಭೆಯ ಫಲಶೃತಿ ಎಂಬಂತೆ ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ ಬಳಸಲು ನಿರ್ಧರಿಸಲಾಗಿದೆ.
ಜಾಗೃತಿ ಕಾರ್ಯಾಗಾರ: ಈಗಾಗಲೇ ಕಾನೂನು ಇಲಾಖೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ, ಆಯಾ ಜಿಲ್ಲಾಡಳಿತಗಳ ಸಹಕಾರದೊಂದಿಗೆ ಗೂಂಡಾ ಕಾಯ್ದೆ ಅನುಷ್ಠಾನದಲ್ಲಿ ಅನುಸರಿಸಬೇಕಾದ ರೀತಿ-ನೀತಿಗಳ ಕುರಿತು ಪೊಲೀಸರಿಂದ ಹಿಡಿದು ಎಲ್ಲ ಹಂತಗಳಲ್ಲಿಯೂ ಸಂಬಂಧಿಸಿದ ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಾಗಾರಗಳು ನಡೆಸಲಾಗುತ್ತಿದೆ.
ರಾಜ್ಯದಲ್ಲಿರುವ ರೇಂಜ್ ಪೊಲೀಸ್ ಕಚೇರಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಇಂಥ ಜಾಗೃತಿ ಕಾರ್ಯಾಗರಗಳನ್ನು ನಡೆಸಲಾಗಿದೆ. ಬರುವ ದಿನಗಳಲ್ಲಿ ಈ ಜಾಗೃತಿ ಆಂದೋಲನದ ಫಲ, ಸರಗಳ್ಳತನ ಉಪಟಳದ ತೀವ್ರತೆ ಅದ್ಯಾವ ಸ್ವರೂಪದ್ದಾಗಿರಲಿದೆ ಎಂಬುದನ್ನು ಪೊಲೀಸ್ ಇಲಾಖೆ ಕಾದು ನೋಡುತ್ತಿದೆ.



ಏನಿದು ಗೂಂಡಾ ಕಾಯ್ದೆ?


ವೇಶ್ಯಾವಾಟಿಕೆ, ಮಾದಕ ದ್ರವ್ಯ ಕಳ್ಳಸಾಗಾಣಿಕೆ, ಜೂಜಾಟದಂಥ ಅಕ್ರಮಗಳಲ್ಲಿ ತೊಡಗಿದವರು, ಕೊಳಗೇರಿಗಳ ಅತಿಕ್ರಮಣ ಮಾಡುವವರು, ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವ ಕಾಯ್ದೆ- 1985. ಇದು ಗೂಂಡಾ ಕಾಯ್ದೆ ಎಂದೇ ಜನಪ್ರಿಯ. ಈ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾದರೆ ಆಪರಾಧಿಗೆ ಯಾವುದೇ ಜಾಮೀನು ಇಲ್ಲದಂತೆ 1 ವರ್ಷದವರೆಗೂ ಬಂಧನದಲ್ಲಿಡಬಹುದು. ಜತಗೆ ಗಡಿಪಾರು ಮಾಡುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಅಪರಾಧಿಯ ವಿರುದ್ಧ ಜರುಗಸಿಲು ಈ ಕಾಯ್ದೆಯಡಿ ಅವಕಾಶವಿದೆ. ಒಮ್ಮೆ ಈ ಕಾಯ್ದೆಯಡಿಯಲ್ಲಿ ಗುರುತಿಸಿಕೊಂಡಲ್ಲಿ ಕಠಿಣ ಶಿಕ್ಷೆಯೊಂದಿಗೆ ಹಲವು ಸಂಕಷ್ಟಗಳ ಸರಣಿಯೇ ಶುರುವಾಗುತ್ತದೆ.

 ಶೇಷಮೂರ್ತಿ ಅವಧಾನಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.