ಗುಲ್ಬರ್ಗ ರೇಲ್ವೆ ಮೂಲ ಸೌಕರ್ಯಕ್ಕೆ ಹೊಸ ಗರಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.16
ಹೊಸ ರೈಲುಗಳ ಆರಂಭಕ್ಕೆ ಅಗತ್ಯವಾಗಿರುವ 6 ಕೋಟಿ ವೆಚ್ಚದ ಪಿಟ್ಲೈನ್ ಯೋಜನೆ ಗುಲ್ಬರ್ಗಕ್ಕೆ ಮಂಜೂರಾಗಿದ್ದು, ಕಾಮಗಾರಿಗೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶನಿವಾರ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಇದು ವೇಗವಾಗಿ ಬೆಳೆಯುತ್ತಿರುವ ಗುಲ್ಬರ್ಗ ಮಹಾನಗರದ ರೈಲು ಸೌಕರ್ಯಕ್ಕೆ ಮತ್ತೊಂದು ಗರಿಯಾಗಿದೆ.
ಗುಲ್ಬರ್ಗ ಮತ್ತು ಬಬಲಾದ ಮಧ್ಯದಲ್ಲಿ 24 ರೇಲ್ವೆ ಬೋಗಿಗಳನ್ನು ಒಂದೇ ಬಾರಿಗೆ ಸ್ವಚ್ಛ ಹಾಗೂ ದುರಸ್ತಿಗೊಳಿಸುವ 8 ಕೋಟಿ ವೆಚ್ಚದ ನೂತನ ಪಿಟ್ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯು 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗುಲ್ಬರ್ಗದಿಂದಲೇ ನೂತನ ರೈಲುಗಳನ್ನು ಪ್ರಾರಂಭಿಸಲು ಇದು ಸಾಧ್ಯವಾಗುತ್ತದೆ ಎಂದು ಕಾಮಗಾರಿಗೆ ಹಸಿರು ನಿಶಾನೆ ನೀಡುತ್ತ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
28 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ: ಇದೇ ವೇಳೆ ಅಫಜಲ್ಪುರ ರಸ್ತೆಗೆ ಬಿದ್ದಾಪುರ ಬಳಿ 4 ಪಥಗಳ ರೇಲ್ವೆ ಮೇಲ್ಸೇತುವೆಯ 28 ಕೋಟಿ ವೆಚ್ಚದ ಕಾಮಗಾರಿಗೂ ಅಡಿಗಲ್ಲು ಇಡಲಾಯ್ತು. ಇದರಿಂದಾಗಿ ಗುಲ್ಬರ್ಗ ಮತ್ತು ಸೊಲ್ಲಾಪುರ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಖರ್ಗೆ ನುಡಿದರು.
ಗುಲ್ಬರ್ಗದಿಂದ ಅಫಜಲ್ಪುರ, ಕರ್ಜಗಿ, ಮಣ್ಣೂರ, ಹೊಸೂರ್, ಅಕ್ಕಲಕೋಟ್ ಮಾರ್ರ್ಗವಾಗಿ ಸೊಲ್ಲಾಪುರ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದಲ್ಲಿ ರೇಲ್ವೆ ಮೇಲ್ಸೇತುವೆ ಉಪಯುಕ್ತವಾಗಲಿದೆ. ಇದನ್ನು ಮನಗಂಡು ಆಧುನಿಕ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರು ಹಾಗೂ ಭೂಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಖರ್ಗೆ ಹೇಳಿದರು.
ಗುಲ್ಬರ್ಗ- ಸೊಲ್ಲಾಪುರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮುಂದಿನ ಬಜೆಟ್ನಲ್ಲಿ ಘೋಷಿಸಲಾಗುವುದು, ಇದಕ್ಕೆ ಅನುದಾನವನ್ನು ನೀಡಲಾಗುವುದು. ರಾಜ್ಯದಲ್ಲಿ ನೆನೆಗುದಿಗೆಗೆ ಬಿದ್ದಿದ್ದ ಗದ್ವಾಲ್- ರಾಯಚೂರು, ಕೋಲಾರ- ಚಿಕ್ಕಬಳ್ಳಾಪುರ ಹಾಗೂ ಇತರೇ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಯಲ್ಲಿರುವ ಅಡೆತಡೆಗಳನ್ನು ಪೂರ್ಣಗೊಳಿಸಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದರು.
ನ.19ರಂದು ಚಿಕ್ಕಮಗಳೂರು- ಕಡೂರು ನೂತನ ಮಾರ್ಗದಲ್ಲಿ ರೈಲನ್ನು ಪ್ರಾರಂಭಿಸಲಾಗುವುದು. ಈ ಮಾರ್ಗವನ್ನು ರೇಲ್ವೆ ಸುರಕ್ಷಾ ಮಂಡಳಿಯ ನಿರ್ದೇಶಕರು ಪರೀಕ್ಷಿಸಿ ಒಪ್ಪಿಗೆ ನೀಡಿದ್ದಾರೆ. ಪಂಜಾಬ್ನಲ್ಲಿ ನೂತನ ರೈಲು ನಿಲ್ದಾಣ, ರೇಲ್ವೆ ವಿದ್ಯುತ್ ಮಾರ್ಗ ಹಾಗೂ ನೂತನ ರೈಲುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಗುಲ್ಬರ್ಗ- ಬೀದರ್ ಮಾರ್ಗಕ್ಕೆ ಹೆಚ್ಚಿನ ಹಣ: ಗುಲ್ಬರ್ಗ- ಬೀದರ್ ನೂತನ ರೈಲು ಮಾರ್ಗ ಕಾಮಗಾರಿಗೆ ಬಜೆಟ್ನಲ್ಲಿ 10 ಕೋಟಿ ನೀಡಲಾಗಿತ್ತು. ಅದನ್ನು ಪರಿಷ್ಕರಿಸಿ 120 ಕೋಟಿ ನೀಡಲಾಗಿದೆ. ಮುಂದಿನ ವರ್ಷವೂ 120 ಕೋಟಿ ನೀಡಿದರೆ 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಮರಗುತ್ತಿ ಸುರಂಗ ಮಾರ್ಗ ಹಾಗೂ ಮಹಾಗಾಂವ ಹತ್ತಿರ ಸೇತುವೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ದೇಶಾದ್ಯಂತ ರೇಲ್ವೆ ಮಾರ್ಗಕ್ಕೆ ಅಡ್ಡಲಾಗಿ ನಿರ್ಮಿಸುವ ರಸ್ತೆ ಮೇಲ್ಸೇತುವೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಿರ್ಮಿಸುವ ನಿಯಮ ಪಾಲಿಸಲಾಗುತ್ತಿದೆ. ಇಂತಹ ಕಾಮಗಾರಿಗಳಿಗೆ ತಗುಲುವ ವೆಚ್ಚದ ಅರ್ಧ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದರು.
ಸಿಎಂ ಗಮನಕ್ಕೆ ತನ್ನಿ: ಗುಲ್ಬರ್ಗದ ಮದರ್ ತೆರೇಸಾ ಶಾಲೆ ಬಳಿ ರಸ್ತೆ ಮೇಲ್ಸೇತುವೆಗೆ 8 ಕೋಟಿ ಹಾಗೂ ಅಫಜಲ್ಪುರ ರಸ್ತೆಯ ಮೇಲ್ಸೆತುವೆಗೆ 14 ಕೋಟಿಯನ್ನು ರಾಜ್ಯ ಸರ್ಕಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ವಿಭಾಗೀಯ ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸರ್ಕಾರ ಕ್ರಮ ಜರುಗಿಸಿದೆ. ಹೈ.ಕ. ವಿದ್ಯಾರ್ಥಿಗಳಿಗೆ ಕಲಂ 371(ಜೆ) ಅನ್ವಯ ಶೇ.70 ಪ್ರವೇಶಾತಿ ಸಿಗಲಿದೆ. ನಿಯಮಾವಳಿಯಂತೆ ನೇಮಕಾತಿ ನಡೆಸಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ರೇಲ್ವೆ ಸಚಿವರು ನೂತನ ಪಿಟ್ ಲೈನ್ ಮತ್ತು ಅಫಜಲ್ಪುರ ರಸ್ತೆ ಮೇಲು ಸೇತುವೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಧರ್ಮಸಿಂಗ್, ಶಾಸಕರಾದ ದತ್ತಾತ್ರೆಯ, ಮಾಲಿಕಯ್ಯ ಗುತ್ತೇದಾರ, ಜಿ.ರಾಮಕೃಷ್ಣ, ಬಿ.ಆರ್. ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಉಮೇಶ ಜಾಧವ, ವಿಧಾನ ಪರಿಷತ್ಸದಸ್ಯ ಅಲ್ಲಂಪ್ರಭು ಪಾಟೀಲ್, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಬಿ.ಜಿ. ಜವಳಿ, ಭಾಗನಗೌಡ ಪಾಟೀಲ್, ಅಲ್ಲಂ ಖಾನ್, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ, ಜಿಲ್ಲಾ ಪಂಚಾಯಿತಿ ಸಿಇಒ ಟಿಎಚ್ಎಂ ಕುಮಾರ್, ರೇಲ್ವೆ ಕಾಮಗಾರಿ ನಿರ್ಮಾಣ ವಿಭಾಗದ ಮುಖ್ಯಸ್ಥ ಎಂ.ಕೆ. ಗುಪ್ತಾ, ವಿಭಾಗೀಯ ರೇಲ್ವೆ ಪ್ರಬಂಧಕ ಜಾನ್ ಥೋಮಸ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

