ಹೀಗೆ ಬಂದು ಹಾಗೇ ಹೋದ ನಾಡ ದೊರೆ
ಗುರುಮಠಕಲ್: ಮುಖ್ಯಮಂತ್ರಿಯಾದ ನಂತರ ಚೊಚ್ಚಲ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಯಾದಗಿರಿ ಜಿಲ್ಲೆಗೆ ಹತ್ತು ಹಲವು ಯೋಜನೆಗಳನ್ನು ಘೋಷಣೆ ಮಾಡುತ್ತಾರೆಂಬ ಜನರ ನಿರೀಕ್ಷೆ ಹುಸಿಯಾಯಿತು. ಅಲ್ಲದೆ, ತರಾತುರಿಯಲ್ಲಿ ಹೀಗೆ ಬಂದು ಹಾಗೆ ಹೋದದ್ದು ಜನರ ಅಸಮಾಧಾನಕ್ಕೂ ಕಾರಣವಾಯಿತು. ನಾಡಿನ ದೊರೆ ಗುರುಮಠಕಲ್ ಕ್ಷೇತ್ರಕ್ಕೆ ಬರುತ್ತಾರೆಂದು ಯಾದಗಿರಿ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ್ ಅವರು ಮಹತ್ವದ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ ಕಾಮಗಾರಿ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು. ಈ ಭಾಗಕ್ಕೆ ಇನ್ನೂ ಹತ್ತು ಹಲವು ಯೋಜನೆಗಳನ್ನು ಕೊಡುಗೆಯಾಗಿ ನೀಡುತ್ತಾರೆ ಎಂಬ ಮಹಾದಾಸೆ ಸಹ ಹೊಂದಿದ್ದರು.
ಪ್ರಗತಿ ಪರಿಶೀಲನೆ ಸಭೆಗೆ ಕೊಕ್: ಆದರೆ, ಬುಧವಾರ ಬೆ.11 ಗಂಟೆಗೆ ಬರಬೇಕಾಗಿದ್ದ ಸಿಎಂ ಮ.1ಕ್ಕೆ ಆಗಮಿಸಿ ತರಾತುರಿಯಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನಡೆಸಬೇಕಾಗಿದ್ದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ಮೊಟಕುಗೊಳಿಸಿದರು. ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯಂತೂ ರದ್ದಾಗಿದೆ. ಹೋಗಲಿ ಸಿಎಂಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳೋಣ ಎಂದು ಪತ್ರಕರ್ತರು ದುಂಬಾಲು ಬಿದ್ದು ಸುದ್ದಿಗೋಷ್ಠಿ ನಡೆಸಲು ಒತ್ತಾಯಿಸಿದರು. ಆದರೆ, ಮುಖ್ಯಮಂತ್ರಿಗಳು ಮಾತ್ರ ಒಲ್ಲದ ಮನಸ್ಸಿನಿಂದ ಬಂದು ಒಂದೆರೆಡು ಪ್ರಶ್ನೆಗಳಿಗೆ ಬೇಸರದಿಂದ ಉತ್ತರಿಸಿ ಅಲ್ಲಿಂದ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ಹೊರಟೇ ಬಿಟ್ಟರು.
ಗುಳೆ ತಡೆಯಲು ಜವಳಿ ಪಾರ್ಕ್ ನಿರ್ಮಾಣ: ಸಿಎಂ
ಗುರುಮಠಕಲ್: ಯಾದಗಿರಿ ಜಿಲ್ಲೆಯ ತಾಂಡಾ ಮತ್ತು ಗ್ರಾಮಾಂತರ ಬಡ ಜನತೆ ಹೊಟ್ಟೆಪಾಡಿಗಾಗಿ ಗುಳೆ ಹೋಗದಂತೆ ತಡೆಯಲು ಶೀಘ್ರದಲ್ಲೇ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇತ್ತೀಚೆಗೆ ಹೊಟ್ಟೆಪಾಡಿಗಾಗಿ ಗುಳೆ ಹೊರಟ ಸುರಪುರ ತಾಲೂಕಿನ ಟೆಂಪೋವೊಂದು ಅಪಘಾತಕ್ಕೀಡಾಗಿ 22 ಜನ ಮೃತಪಟ್ಟಿದ್ದು, ಜಿಲ್ಲೆಯ ಜನತೆ ಗುಳೆ ಹೋಗದಂತೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಈಗಾಗಲೇ ಮೃತ ಕುಟುಂಬಕ್ಕೆ ತಲಾ 1 ಲಕ್ಷ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ನೀಡಲು ನಿರ್ದೇಶನ ನೀಡಲಾಗಿದೆ. ಬರುವ ದಿನಗಳಲ್ಲಿ ಈ ಜಿಲ್ಲೆಯ ಜನತೆ ಗುಳೆ ಹೋಗದಂತೆ ತಡೆಯಲು ಜವಳಿ ಪಾರ್ಕ್ ಸ್ಥಾಪಿಸಿ ಅವರಿಗೆ ಕೆಲಸ ಒದಗಿಸಲಾಗುವುದು ಎಂದು ಹೇಳಿದರು.
ಖರ್ಗೆ ಘರ್ಜನೆಗೆ ಚಿಂಚನಸೂರ ಮೌನ...
ಗುರುಮಠಕಲ್ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಹೈ-ಕ ಅಭಿವೃದ್ಧಿಯನ್ನು ಉದ್ದೇಶಿಸಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದರು. ಆಗ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರು ಸಿಎಂ ಸಿದ್ದರಾಮಯ್ಯ ಕಿವಿಯಲ್ಲಿ ಏನೋ ಹೇಳತೊಡಗಿದರು. ಇದನ್ನು ಗಮನಿಸಿದ ಖರ್ಗೆ, 'ಏ ಬಾಬುರಾವ ಏನು ಕಿವಿಯಲ್ಲಿ ಹೇಳುತ್ತಿ, ಏನೇ ಕಿವಿಯಲ್ಲಿ ಹೇಳುವುದಿದ್ದರೆ ಬೆಂಗಳೂರಿನಲ್ಲಿ ಹೋಗಿ ಹೇಳು, ಇಲ್ಲಿ ನಾನು ಮಾತನಾಡುವುದನ್ನು ಗಮನವಿಟ್ಟು ಕೇಳು' ಎಂದು ಹೇಳಿದಾಗ ಚಿಂಚನಸೂರ ಮುಖ್ಯಮಂತ್ರಿ ಜತೆ ಮಾತಿಗಿಳಿಯದೆ ಮೌನಕ್ಕೆ ಶರಣಾದರು. ಈ ಬೆಳವಣಿಗೆಯನ್ನು ಗಮಿಸಿದ ಸಭಿಕರು ನಗೆಗಡಲಲ್ಲಿ ತೇಲಾಡಿದರು.
ಅಸಮರ್ಪಕ ಪಾಸ್ ವಿತರಣೆಯಿಂದ ಅವಮಾನ
ಗುರುಮಠಕಲ್: ಇಂದು ಗುರುಮಠಕಲ್ ಪಟ್ಟಣ ಸೇರಿದಂತೆ 27 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಅವಮಾನವೆಸಗಿದ ಘಟನೆ ಹೆಲಿಪ್ಯಾಡ್ನಲ್ಲಿ ನಡೆಯಿತು. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರು ಮುಂಜಾಗ್ರತಾ ಕ್ರಮವಾಗಿ ಬಂದೋ ಬಸ್ತಿಗಾಗಿ ವಿತರಣೆ ಮಾಡಿದರು. ರಾಜಕಿಯ ನಾಯಕರಿಗೆ ನಿಡಬೇಕಾದ ಪಾಸ್ಗಳನ್ನು ಸ್ಥಳಿಯ ನಾಯಕರಿಗೆ ಮೊದಲೇ ನೀಡಲಾಗಿದ್ದರೂ, ಸಮರ್ಪಕ ರೀತಿಯಲ್ಲಿ ಗಣ್ಯರಿಗೆ ನೀಡಬೇಕಾದ ಪಾಸ್ಗಳು ವಿತರಣೆ ಆಗದಿದ್ದರಿಂದ ಗೊಂದಲ ಉಂಟಾಯಿತು. ಇದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರಿಗೆ ಅವಮಾನವಾದ ಘಟನೆ ನಡೆದು ಕೆಲ ಕಾಲ ರಾಜಕೀಯ ನಾಯಕರು ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ನಡುವೆ ಕೆಲ ಕಾಲ ಗೊಂದಲ ಉಂಟಾಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

