'ಪಂಪ್ಸೆಟ್ಗೆ ಸೋಲಾರ್ ತಂತ್ರ ಅಳವಡಿಸಿ ಸ್ವಾವಲಂಬನೆ ಸಾಧಿಸಿ'
ಗುಲ್ಬರ್ಗ: ರಾಜ್ಯದಲ್ಲಿ ಸೋಲಾರ್ ತಂತ್ರಜ್ಞಾನ ಸಮರ್ಪಕವಾಗಿ ಅಭಿವೃದ್ಧಿಯಾಗಿದೆ. ರೈತರು ತಮ್ಮ ಹೊಲಗಳಿಗೆ ಉಪಯೋಗಿಸುವ ಪಂಪಸೆಟ್ಗಳಿಗೆ ಈ ತಂತ್ರಜ್ಞಾನವನ್ನು ಬಳಿಸಿ ಸ್ವಾವಲಂಬಿಗಳಾಗಬೇಕು. ಸೋಲಾರ್ ತಂತ್ರಜ್ಞಾನಕ್ಕೆ ಸರ್ಕಾರವು ಸಹಾಯಧನ ನೀಡುತ್ತಿದೆ. ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.
ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿ ಉತ್ಸವ-2013ನ್ನು ಉದ್ಘಾಟಿಸಿ ಮಾತನಾಡಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ. ಪಾಟೀಲ್ ಮಾತನಾಡಿ, ಶಿಕ್ಷಣದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ. ಗುಲ್ಬರ್ಗದ ಕೃಷಿ ಮಹಾವಿದ್ಯಾಲಯದಲ್ಲಿ ಪ್ರಸ್ತುತ ವರ್ಷದಿಂದ 60 ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಕ್ರಮ ಜರುಗಿಸಲಾಗಿದೆ ಎಂದರು.
ಈಗಾಗಲೇ ಸುಮಾರು ಶೇ.63ರಷ್ಟು ಪ್ರವೇಶಗಳನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. 371 (ಜೆ) ಕಲಂ ಜಾರಿ ಆಗುವುದರಿಂದ ಇನ್ನೂ ಶೇ.7ರಷ್ಟು ಪ್ರವೇಶ ಅವಕಾಶ ಈ ಭಾಗದ ವಿದ್ಯಾರ್ಥಿಗಳಿಗೆ ದೊರೆಯುವುದು. ಈ ಪೈಕಿ ಸುಮಾರು 32 ಪ್ರತಿಶತ ವಿದ್ಯಾರ್ಥಿನಿಯರು ಕೃಷಿ ಕುರಿತು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಭಾಗದ ವಿದ್ಯಾರ್ಥಿಗಳು ಕೃಷಿಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಬೀದರಿನ ಜನವಾಡಾ ಫಾರ್ಮ್, ಹಗರಿ, ರಾಯಚೂರಿನಲ್ಲಿ ಕೃಷಿ ಎಂಜಿನಿಯರಿಂಗ್, ಭೀಮರಾಯನ ಗುಡಿಯಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಎಸ್ಎಸ್ಎಲ್ಸಿ ಓದಿದ ವಿದ್ಯಾರ್ಥಿಗಳಿಗಾಗಿ ನೀರು ನಿರ್ವಹಣೆ, ಬೀಜೋತ್ಪಾದನೆ, ಸವಳು-ಜವಳು ಭೂಮಿ ನಿರ್ವಹಣೆ, ಸಾವಯವ ಪರಿಕರಗಳ ಉತ್ಪಾದನೆ, ಸಮಗ್ರ ಕೃಷಿ ಪದ್ಧತಿ, ಟ್ರ್ಯಾಕ್ಟರ್ ಮತ್ತು ಡೀಸೆಲ್ ಎಂಜಿನ್ಗಳ ದುರಸ್ತಿ ಕುರಿತು ಸರ್ಟಿಫಿಕೇಟ್ ಕೋಸ್ಗಳನ್ನು ಪ್ರಾರಂಭಿಸಲಾಗಿದೆ. ಇವರಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಬಿಎಸ್ಸಿ ಕೃಷಿ ಓದಲು ಇಚ್ಛೆಪಟ್ಟಲ್ಲಿ ಎಲ್ಲ ಕೃಷಿ ಕಾಲೇಜುಗಳಲ್ಲಿ ಶೇ.5ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಕೀಟನಾಶಕ ಅಂಗಡಿಗಳನ್ನು ನಿರ್ವಹಿಸುವವರಿಗೆ ಅಧಿಕೃತ ಪ್ರಮಾಣಪತ್ರ ಹೊಂದಲು ಕನಿಷ್ಠ ಜ್ಞಾನ ಕಲ್ಪಿಸಲು ಸಹ ತರಬೇತಿ ನೀಡಲಾಗಿದೆ ಎಂದರು.
ಕೃಷಿ ವಿವಿದಿಂದ 2011ರಲ್ಲಿ ಈ ಭಾಗದ ಮಧ್ಯಮ ಕಪ್ಪು ಮಣ್ಣಿಗೆ ಹೊಂದಾಣಿಕೆ ಆಗುವ ಟಿಎಸ್ಆರ್-3 ತಳಿಯ ತೊಗರಿ ಬೀಜವನ್ನು ಸುಮಾರು 3 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಬೆಳೆಯುತ್ತಿದ್ದಾರೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಕಚೇರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಶಾಸಕ ಜಿ.ರಾಮಕೃಷ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಕೆ.ಧರ್ಮರಾಜನ್, ನವದೆಹಲಿ ಐಸಿಎಆರ್ ವಲಯ ಯೋಜನಾ ನಿರ್ದೇಶಕ ಡಾ.ಎಸ್.ಪ್ರಭುಕುಮಾರ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಶಂಕರಶೆಟ್ಟಿ ಪಾಟೀಲ್, ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಡಿ.ಪಿ. ಬಿರಾದಾರ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಚ್.ಎಸ್.ಎಸ್. ಖಾನ್, ಪ್ರವೀಣ ನಾಯಕ, ವಿಸ್ತರಣಾಧಿಕಾರಿ ಡಾ. ಕೆ.ಪಿ. ವಿಶ್ವನಾಥ, ಜಂಟಿ ಕೃಷಿ ನಿರ್ದೇಶಕ ಡಾ. ಜೆ.ಎಚ್. ಮೋಕಾಶಿ, ಕಾರ್ಯಕ್ರಮ ಸಂಯೋಜಕ ಡಾ.ರಾಜು ತೆಗ್ಗೆಳ್ಳಿ, ಜಿಲ್ಲಾ ಜಲಾನಯನ ಅಧಿಕಾರಿ ಜಿಯಾವುಲ್ಲಾ, ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ ಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಶ, ಡಾ. ಶಿವಶರಣಪ್ಪ ಪಾಟೀಲ್, ರೈತ ಮುಖಂಡರು ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

