'ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಬೆಳ್ಳಿ ಪದಕ'
ಗುಲ್ಬರ್ಗ: ಇಲ್ಲಿನ ಸರ್ವಜ್ಞ ಪಪೂ ಕಾಲೇಜಿನಲ್ಲಿ ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಸರೆಯಲ್ಲಿ ಕನ್ನಡ ಸಂವರ್ಧನೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಿದ್ದ ಕಾಲೇಜು ಪಪೂ ದ್ವಿತೀಯ ವರ್ಷದ ಮಕ್ಕಳು ಉಪನ್ಯಾಸಕ ಡಾ. ಗುರುರಾಜ ಅಗ್ನಿಹೋತ್ರಿ ಅವರು ಡಿ.ಆರ್. ನಾಗರಾಜ್ ಕನ್ನಡ ಸಂವರ್ಧನೆ ಕಾಳಜಿ, ಕಳಕಳಿಗಳನ್ನು ಎಳೆಎಳೆಯಾಗಿ ಹೇಳಿದ್ದನ್ನು ವಿದ್ಯಾರ್ಥಿಗಳು ಆಲಿಸಿದರು. ಅನೇಕ ಮಕ್ಕಳು ಪ್ರಶ್ನೆಗಳನ್ನು ಕೇಳುತ್ತ ಕನ್ನಡ ಸಂವರ್ಧನೆಯ ಹತ್ತು ಹಲವು ಆಯಾಮಗಳನ್ನು ಗ್ರಹಿಸುವ ಪ್ರಯತ್ನ ಮಾಡಿದ್ದು ಗಮನಾರ್ಹವಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಗುಲ್ಬರ್ಗ ತಾಲೂಕು ಘಟಕದ ಅಧ್ಯಕ್ಷ ಜಿಎಸ್ ಮಾಲೀಪಾಟೀಲ್ ಅವರು ಸರ್ವಜ್ಞ ಕಾಲೇಜಿನಲ್ಲಿ ಇರುವ ಕನ್ನಡ ಪರ ಕಾಳಜಿಯ ಪರಿಸರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರಲ್ಲದೆ ಇಲ್ಲಿನ ಪಪೂ ಮಕ್ಕಳ ಪೈಕಿ (2 ವರ್ಷ) ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕ ಪಡೆದ ಜಾಣರಿಗೆ ಬೆಳ್ಳಿ ಪದಕ ನೀಡುವ ಘೋಷಣೆ ಮಾಡಿದರು. ವಿಜ್ಞಾನದ ಮಕ್ಕಳು ಕನ್ನಡದ ಬಗ್ಗೆ ಅಸಡ್ಡೆ ಮಾಡದೆ ಚೆನ್ನಾಗಿ ಓದಬೇಕು. ಭಾಷೆಯ ಪ್ರತಿ ಕಾಳಜಿ ಹೆಚ್ಚುವಂತಾಗಬೇಕು ಎಂದು ಮಾಲೀಪಾಟೀಲ್ ಕರೆ ನೀಡಿದರು.
ಸರ್ವಜ್ಞ ಕಾಲೇಜು ರೂವಾರಿ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿರುವ ಗಟ್ಟಿತನದ ಬಗ್ಗೆ ಸಾರಿದರು. ಕನ್ನಡಿಗ ಸಿಎನ್ನಾರ್ ರಾವ್ ಸಾಧನೆಯೇ ಇಂದು ಕನ್ನಡಿಗರೆಲ್ಲರಿಗೂ ಮಾದರಿ ಎಂದರು.ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಕನ್ನಡ ನೆಲೆ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಕಸಾಪ ಇಂತಹ ಕನ್ನಡಪರ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸುತ್ತ ಹೊರಟಿದ್ದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.
ಕನ್ನಡ ಸಂವರ್ಧನೆ ಪಪೂ ತರಗತಿಯ ಪಠ್ಯ. ಹೀಗಾಗಿ, ಮಕ್ಕಳು ಉಪನ್ಯಾಸವನ್ನು ಲಕ್ಷ ಕೊಟ್ಟು ಆಲಿಸಿದರಲ್ಲದೆ, ಇದೇ ಸಂದರ್ಭದಲ್ಲಿ ಸಂಘಟಕರು ನಡೆಸಿದ್ದ ಕನ್ನಡ ಕುರಿತಾದ ರಸಪ್ರಶ್ನೆಯಲ್ಲಿಯೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಲವಲವಿಕೆಯಿಂದ ಭಾಗಹಿಸಿ ಉತ್ತರ ಹೇಳಿ ಬಹುಮಾನಗಳನ್ನು ಪಡೆದರು. ಸರ್ವಜ್ಞ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಗಂಗಾಧರ ಬಡಿಗೇರ್ ಸ್ವಾಗತಿಸಿ, ಶಹಾಬಾದ್ ಪ್ರೌಢಶಾಲೆ ಕನ್ನಡ ಶಿಕ್ಷಕ ಜೆ.ಜೆ. ವಣಕ್ಯಾಳ ನಿರೂಪಿಸಿದರು. ಆಳಂದ ಪಪೂ ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಮುಳೆಗಾಂವ್, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹಣಮಂತರಾವ ದೊಡ್ಮನಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸರ್ವಜ್ಞ ಕಾಲೇಜಿನ ಬಾಲಕಿಯರು “ÔÚ^æ`ÞÈÚâ ಕನ್ನಡದ ¦Þ®Ú...’ ಗೀತೆಯನ್ನು ಹಾಡುವ ಮೂಲಕ ಸಮಾರಂಭಕ್ಕೆ ಕಳೆ ತಂದುಕೊಟ್ಟರು. ಪತ್ರಕರ್ತರು, ಚಿಂತಕರು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗ ಸಮಾರಂಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

