ಬಾಯಾರಿಕೆ ತಣಿಸಲು ಭೀಮೆಗೆ ಮೊರೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.30
ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗುವ ಆತಂಕದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬರುವ ದಿನಗಳಲ್ಲಿ ಭೀಮಾ ನದಿಯಿಂದ ನೀರು ಪೂರೈಸುವ ಯೋಜನೆ ರೂಪಿಸುವ ಅಗತ್ಯತೆ ವಿಚಾರ ವಿವಿಯ ನೂತನ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ನಡೆಯಿತು.
ಪೂರ್ಣ ಪ್ರಮಾಣದ ಕ್ಯಾಂಪಸ್ ಕಾರ್ಯಾರಂಭವಾದರೆ ಸುಮಾರು 1,500 ವಿದ್ಯಾರ್ಥಿಗಳು, ಅಷ್ಟೇ ಸಂಖ್ಯೆಯ ಸಿಬ್ಬಂದಿ ವರ್ಗ, ದೇಶ- ವಿದೇಶಗಳಿಂದ ಬರುವ ಅತಿಥಿ ಉಪನ್ಯಾಸಕರು, ಸಂಶೋಧಕರು ಸೇರಿದಂತೆ ಕ್ಯಾಂಪಸ್ನಲ್ಲಿರುವ ಸಾವಿರಾರು ಮಂದಿಗೆ ಅಗತ್ಯ ನೀರು ಪೂರೈಸುವುದು ಬಹುದೊಡ್ಡ ಸವಾಲಾಗಲಿದೆ ಎಂದು ಕುಲಪತಿ ಡಾ. ಶ್ರೀನಿವಾಸಮೂರ್ತಿ ತಮ್ಮ ಉದ್ಘಾಟನಾ ಮಾತುಗಳಲ್ಲಿ ಪ್ರಸ್ತಾಪಿಸುತ್ತ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಆದಿಯಾಗಿ ಸರ್ವರ ಗಮನ ಸೆಳೆದರು.
ಅಮರ್ಜಾಕ್ಕಿಂತ ಭೀಮಾ ವಾಸಿ: ಅಮರ್ಜಾ ಅಣೆಕಟ್ಟೆಯಿಂದ ಸದ್ಯಕ್ಕೆ ನೀರು ಪೂರೈಕೆಯಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಜಲ ನಿರ್ಮಲ ಯೋಜನೆಯಲ್ಲಿ 18 ಕೋಟಿ ವೆಚ್ಚವಾಗಿದೆ. ಭವಿಷ್ಯದಲ್ಲಿ ಈ ನೀರು ಸಾಕಾಗದು. ಭೀಮಾ ನದಿಯನ್ನು ಅವಲಂಬಿಸದೆ ಅನ್ಯ ಮಾರ್ಗವಿಲ್ಲ ಎಂದ ಆಳಂದ ಶಾಸಕ ಬಿ.ಆರ್. ಪಾಟೀಲ್, ಸಿಎಂ ಮನಸ್ಸು ಮಾಡಿ ಕೇಂದ್ರೀಯ ವಿವಿಗೆ ಕಾಯಂ ನೀರಿನ ಮೂಲ ಹುಡುಕಿಕೊಡಬೇಕು ಎಂದರು.
ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರದ ಹೆಮ್ಮೆಯ ಸಂಸ್ಥೆ ಇದಾಗಿದೆ. ಇದನ್ನು ಪೋಷಿಸಬೇಕು, ಅದಕ್ಕಾಗಿ ಕುಡಿವ ನೀರಿಗೆ ಆದ್ಯತೆ ಕೊಡಲೇಬೇಕೆಂಬ ನೀತಿಯಡಿಯಲ್ಲಿ ಅಮರ್ಜಾ, ಭೀಮಾನದಿಯಿಂದ ನೀರನ್ನು ಇಲ್ಲಿಗೆ ತರಬೇಕಿದ್ದು, ಸಿಎಂ ಸಿದ್ದರಾಮಯ್ಯ ಮುತುವರ್ಜಿಯಿಂದ ಯೋಜನೆ ರೂಪಿಸಿ ತಕ್ಷಣ ಜಾರಿಗೆ ತರುವ ಕೆಲಸ ಮಾಡಬೇಕೆಂದು ಹೇಳಿದರು.
ಸರ್ಕಾರದ ಗಮನದಲ್ಲಿದೆ: ಸಾಕಷ್ಟು ನೀರಿದ್ದರೆ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಅದರಲ್ಲಿಯೂ ಕೇಂದ್ರೀಯ ವಿವಿಯಂತಹ ಶಿಕ್ಷಣ ಸಂಸ್ಥೆಗೆ ನೀರಿನ ಪಕ್ಕಾ ಮೂಲ ಬೇಕೇ ಬೇಕು. ಈ ದಿಶೆಯಲ್ಲಿ ಅಧ್ಯಯನ ನಡೆಸಿ ಯಾವುದು ಸರಿ ಎಂಬುದನ್ನು ನಿರ್ಧರಿಸಿ ಯೋಜನೆ ರೂಪಿಸಲಾಗುತ್ತದೆ. ಈ ವಿಚಾರ ಸರ್ಕಾರದ ಗಮನದಲ್ಲಿದೆ ಎಂದರು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ.
ಕುಲಪತಿ ಡಾ. ಶ್ರೀನಿವಾಸಮೂರ್ತಿ ಅವರಂತೂ ತಮ್ಮ ಮಾತುಗಳಲ್ಲಿ ಕೇಂದ್ರೀಯ ವಿವಿ ಬಾಯಾರಿಕೆ ತೀರಿಸಲು ಯಾರಾದರೂ ಭಗೀರಥನಿಗಾಗಿ ಕಾಯುತ್ತಿದ್ದೇವೆ. ಆ ಕೆಲಸ ಆರಂಭದಲ್ಲಿ ಆಳಂದ ಶಾಸಕ ಬಿಆರ್ ಪಾಟೀಲ್ ಮಾಡಿದ್ದಾರೆ. ಬರುವ ದಿನಗಳಲ್ಲಿ ನೀರಿನ ಕಾಯಂ ಮೂಲ ಹುಡುಕುವ ಭಗೀರಥ ಯತ್ನ ನಡೆಯಬೇಕಿದೆ ಎಂದರು.
ಕೇಂದ್ರೀಯ ವಿವಿ- ಗುಲ್ಬರ್ಗದ ಹೆಮ್ಮೆ: ಗುಲ್ಬರ್ಗದಿಂದ 28 ಕಿಮೀ ಅಂತರದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಬಿಸಿಲೂರಿನ ಹೆಮ್ಮೆಯ ಸಂಸ್ಥೆ. ನೂತನ ಕ್ಯಾಂಪಸ್ ಅತ್ಯಾಧುನಿಕ ಸೌಲಭ್ಯ, ಕಟ್ಟಡಗಳನ್ನು ಮೊದಲ ಹಂತದಲ್ಲಿ ಹೊಂದಿದೆ. ಇನ್ನೊಂದು ಹಂತದಲ್ಲಿ ವಿವಿ ಸಂಪೂರ್ಣ ಅಭಿವೃದ್ಧಿಗೆ ನೀಲನಕಾಶೆ ಸಿದ್ಧವಾಗಿದೆ.
2009ರಲ್ಲಿ ಸಂಸತ್ ಕಾಯ್ದೆ ಪ್ರಕಾರ ದೇಶಾದ್ಯಂತ 16 ಕೇಂದ್ರೀಯ ವಿವಿಗಳನ್ನು ಆರಂಭಿಸಲಾಗಿದ್ದು, ಈ ಪೈಕಿ ಇದೂ ಒಂದು. ವಿವಿಯಲ್ಲಿ ಸದ್ಯ 16 ವಿವಿಧ ಕೋರ್ಸುಗಳಲ್ಲಿ 823 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 60 ಪ್ರಾಧ್ಯಾಪಕರಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಐಐಟಿ, ಎನ್ಟಿಐ, ಐಐಐಟಿ, ಐಐಎಂ, ಏಮ್ಸ್, ಸಿಎಸ್ಆರ್ಐ, ಇಸ್ರೋ, ಡಿಆರ್ಡಿಒನಂತಹ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದುವ ಪ್ರಯತ್ನ ನಡೆದಿದೆ.
2009ರಿಂದ ಗುವಿವಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಆಡಳಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲವನ್ನೂ ಕಡಗಂಚಿ ವಿವಿ ಕ್ಯಾಂಪಸ್ಗೆ ಸ್ಥಳಾಂತರಿಸಲಾಗಿದೆ. ಡಿ.15ರಿಂದ ಇಡೀ ವಿವಿ ನೂತನ ಕ್ಯಾಂಪಸ್ಗೆ ಸ್ಥಳಾಂತರಗೊಳ್ಳಲಿವೆ.
ಆರ್ಎಫ್ಐಡಿ ತಂತ್ರಜ್ಞಾನ ಬಳಕೆ: ಗ್ರಂಥಾಲಯದಲ್ಲಿ ಆರ್ಎಫ್ಐಡಿ (ಖಛಜ್ಝ್ಟ ಜ್ಠಿಜಠ್ಡಿಜಟ್ಛಿಣ ್ಝಜಜಟಿಡ್ಝಿಜ್ಝ್ಛಿಛಡ್ಝ್ಟಿಟಿ) ತಂತ್ರಜ್ಞಾನ ಅಳವಡಿಸಿಕೊಂಡ ಖ್ಯಾತಿ(ರಾಜ್ಯದಲ್ಲಿ ಏಕೈಕ) ಈ ವಿವಿಯದ್ದು. ಪುಸ್ತಕಗಳಿಗೆ ಆರ್ಎಫ್ಐಡಿ ಟ್ಯಾಗ್ ಅಳವಡಿಸಲಾಗಿದೆ. ವಿದ್ಯಾರ್ಥಿಗಳೇ ಪುಸ್ತಕವನ್ನು ಎರವಲು ಪಡೆಯಬಹುದು. ಪುಸ್ತಕವನ್ನು ವಾಪಸು ಮಾಡಬಹುದು. ಒಂದು ವೇಳೆ ಕಂಪ್ಯೂಟರ್ನಲ್ಲಿ ದಾಖಲು ಮಾಡದೇ ಪುಸ್ತಕವನ್ನು ತೆಗೆದುಕೊಂಡು ಹೋದಲ್ಲಿ ಅಲಾರಂ ಮೊಳಗುತ್ತದೆ. ಈ ತಂತ್ರಜ್ಞಾನದ ಇನ್ನೊಂದು ವಿಶೇಷವೆಂದರೆ ವಿದ್ಯಾರ್ಥಿಗಳು ತಾವು ಎರವಲು ಪಡೆದಿರುವ ಪುಸ್ತಕವನ್ನು ಯಾವುದೇ ರ್ಯಾಕ್ನಲ್ಲಿ ಇಟ್ಟರೂ ತಕ್ಷಣವೇ ಪತ್ತೆ ಹಚ್ಚಬಹುದು. ಎಟಿಎಂ ಮೆಷಿನ್ ಮಾದರಿಯಲ್ಲಿ ಇದು ಕೆಲಸ ನಿರ್ವಹಿಸುತ್ತದೆ. ಇದಕ್ಕಾಗಿ ವಿವಿ 15 ಲಕ್ಷ ವೆಚ್ಚ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

