ಗುಲ್ಬರ್ಗಾ

ರೈತನ ಕಪ್ಪು ಬಾವುಟದ ಬಿಸಿಗೆ ಸಿಎಂ ಸಿದ್ದು ಕಸಿವಿಸಿ

Published On :

ಕ.ಪ್ರ. ವಾರ್ತೆ  ಕಡಗಂಚಿ(ಗುಲ್ಬರ್ಗ)  ನ.30
ಬೆಳಗಾವಿ ಜಿಲ್ಲೆ ಕಂಕಣವಾಡಿ ಕಬ್ಬು ರೈತ ವಿಠಲ್ ಅರಬಾವಿ ಆತ್ಮಹತ್ಯೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಸಿಎಂ ಸಿದ್ದರಾಮಯ್ಯ, ಮತ್ತವರ ಸರ್ಕಾರ ಗುಲ್ಬರ್ಗದಲ್ಲಿ ಶನಿವಾರ ರೈತನೊಬ್ಬನ ಮಿಂಚಿನ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರದ ಘೋಷಣೆಗಳಿಗೆ ಸಾಕ್ಷಿಯಾಯ್ತು.
  ಆಳಂದ ತಾಲೂಕಿನ ಕಂಡಗಂಚಿಯಲ್ಲಿ ಕೇಂದ್ರೀಯ ವಿವಿ ನೂತನ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಇನ್ನೇನು ಸಭಿಕರನ್ನುದ್ದೇಶಿಸಿ ಮಾತನಾಡಲು ಹೊರಡುವಾಗಲೇ ಜನರ ಮಧ್ಯದಿಂದ ದಿಢೀರ್ ಪ್ರತ್ಯಕ್ಷನಾದ ರೈತ ತನ್ನೆರಡೂ ಕೈಯಲ್ಲಿ ಕಪ್ಪು ಬಾವುಟ ಹಿಡಿದು ರೈತ ವಿರೋಧಿ ಸಿದ್ದರಾಮಯ್ಯ ಸರ್ಕಾರ, ರೈತ ವಿರೋಧಿ ನೀತಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ.
  ಘೋಷಣೆಗಳು ಕೇಳಿಬರುತ್ತಿದ್ದಂತೆಯೇ ಪೊಲೀಸರು ತಕ್ಷಣ ರೈತನ ಬಾಯಿ ಮುಚ್ಚಿಸಿ ಅಲ್ಲಿಂದ ಎತ್ತಿಕೊಂಡು ಹೋದರಾದರೂ ಎರಡು ಮೂರು ನಿಮಿಷಗಳ ಮಿಂಚಿನ ಪ್ರತಿಭಟನೆ ಶಾಂತ ಕೊಳದಲ್ಲಿ ಕಲ್ಲೆಸೆದಂತೆ, ಶಾಂತವಾಗಿದ್ದ ಸಮಾರಂಭದಲ್ಲಿ ಅಲ್ಲೋಲ- ಕಲ್ಲೋಲ ಹುಟ್ಟುಹಾಕಿತ್ತು. ಜೊತೆಗೇ ವೇದಿಕೆಯಲ್ಲಿದ್ದವರ  ಗಮನ ಸೆಳೆಯಿತು.
ವಿಚಲಿತರಾದ ಸಿಎಂ: ಪೊಲೀಸ್ ಸರ್ಪಗಾವಲು, ಬಿಗಿಭದ್ರತೆ, ಕಿಕ್ಕಿರಿದು ಸೇರಿದ್ದ ಸಭಿಕರ ಮಧ್ಯದಲ್ಲಿ ಕಂಡ ಕಪ್ಪು ಬಾವುಟ, ಪ್ರತಿಧ್ವನಿಸಿದ ರೈತ ವಿರೋಧಿ ಸರ್ಕಾರ ಎಂಬ ಘೋಷಣೆಗೆ, ಇನ್ನೇನು ಮಾತನಾಡಲು ಮುಂದಾಗಬೇಕೆಂದು ಮೈಕ್ ಮುಂದೆ ಬಂದಿದ್ದ ಸಿದ್ದರಾಮಯ್ಯ ಕ್ಷಣಕಾಲ ವಿಚಲಿತರಾದಂತೆ ಕಂಡು ಬಂದರು. ಆದಾಗ್ಯೂ ಅದಾವುದನ್ನು ತೋರದೆ ಕೆಲ ಕಾಲ ಆಸೀನರಾದರು.
ರೈತರ ಸರ್ಕಾರ: ನಂತರ ಮಾತಿಗೆ ಮುಂದಾದ ಸಿಎಂ, ತಮ್ಮದು ರೈತರಪರ ಸರ್ಕಾರ ಎನ್ನುತ್ತ ರೈತರಿಗಾಗಿ ಕೈಗೊಂಡ ನಿರ್ಣಯಗಳನ್ನು ಪಟ್ಟಿ ಮಾಡಿದರು. ಅದ್ಯಾಕೆ ಸ್ನೇಹಿತರೊಬ್ಬರು ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದರೋ ಅರ್ಥವಾಗಲಿಲ್ಲ, ರೈತರು ಯಾಕೆ ಸರ್ಕಾರದ ಕಾಳಜಿ ಅರಿಯುತ್ತಿಲ್ಲವೋ ಎಂದು ಕಳವಳಗೊಂಡರು.
  ಟನ್ ಕಬ್ಬಿಗೆ ಹೆಚ್ಚುವರಿ 250 ಬೆಂಬಲ ಬೆಲೆ ಘೋಷಿಸಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಈ ಕೆಲಸ ಮಾಡಿಲ್ಲ, 3 ಸಕ್ಕರೆ ಕಾರ್ಖಾನೆಗಳವರು ಉಳಿಸಿಕೊಂಡಿದ್ದ ರೈತರ 34 ಕೋಟಿ ಬಾಕಿ ಪಾವತಿಗೂ ಕ್ರಮ ಜರುಗಿಸಿದ್ದೇವೆ. ಸರ್ಕಾರ ನಿರ್ಧರಿಸಿದ ದರದಲ್ಲೇ ಕಬ್ಬು ಖರೀದಿಸುವಂತೆ ಕಾರ್ಖಾನೆಗಳವರಿಗೆ ತಾಕೀತು ಮಾಡಿದ್ದೇವೆ. ಬತ್ತ, ರಾಗಿ, ಜೋಳ, ಮೆಕ್ಕೆಜೋಳಕ್ಕೆಲ್ಲ ಬೆಂಬಲ ಬೆಲೆ ಘೋಷಿಸಿದ್ದು, ಇನ್ನೇನು ತೊಗರಿಗೂ ರೈತರ ಬೇಡಿಕೆಯಂತೆ ಬೆಂಬಲ ಬೆಲೆಯನ್ನು ನಿಗದಿ ಮಾಡುತ್ತೇವೆ. ಇಷ್ಟೆಲ್ಲ ರೈತರಪರ ಕೆಲಸಗಳು ನಡೆದರೂ ಯಾಕೆ ಇಂತಹ ಹೋರಾಟವೆಂದು ರೈತ ಸಮೂಹಕ್ಕೆ ಪ್ರಶ್ನಿಸಿದರು.


-ಶೇಷಮೂರ್ತಿ ಅವಧಾನಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.