ರೈತರಿಗೆ ಕೃಷಿ ಮಾರಾಟ ನೀತಿ ವರಮಾನ
ಕನ್ನಡಪ್ರಭ ವಾರ್ತೆ ಯಾದಗಿರಿ ಏ.25
ಕೃಷಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಣಮಟ್ಟದ ಬೆಳೆ ಬೆಳೆಯಲು ಮತ್ತು ಆರ್ಥಿಕವಾಗಿ ಹೆಚ್ಚು ಲಾಭ ತರುವ ಬೆಳೆಗಳಿಗೆ ಪ್ರೋತ್ಸಾಹ ನೀಡಲು ನೂತನ ಕೃಷಿ ನೀತಿಯಲ್ಲಿ ನೀಡಲಾಗಿದೆ ಎಂದು ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಪಿ.ಎಸ್. ವಸ್ತ್ರದ್ ಹೇಳಿದರು.
ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಯಾದಗಿರಿ ಇವರ ಸಹಯೋಗದಲ್ಲಿ ಕೃಷಿ ಮಾರಾಟ ನೀತಿ-2013ರ ಅನುಷ್ಠಾನ ಕುರಿತು ಮಾರುಕಟ್ಟೆ ಭಾಗಿದಾರರ ಸಭೆಯನ್ನು ಉದ್ಘಾಟಿಸಿ, ಕೃಷಿ ಮಾರಾಟ ನೀತಿಯು ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸುವ್ಯವಸ್ಥೆ ಕಾಪಾಡಿ ಅನುಕೂಲವನ್ನು ಕಲ್ಪಿಸುವ ಮುಖೇನ ವರ್ತಕರು, ರೈತರಿಗೆ ಹಾಗೂ ಕಮಿಷನ್ ಏಜೆಂಟರಿಗೆ ನೆರವಾಗಲಿದೆ ಎಂದರು.
ನೇರ ಮಾರಾಟ: ಕೃಷಿ ಮಾರುಕಟ್ಟೆ ನೀತಿಯಿಂದ ಉಗ್ರಾಣ ಆಧಾರಿತ ಮಾರುಕಟ್ಟೆಯನ್ನು ಉತ್ತೇಜಿಸಲಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುವ ಮೊದಲು ಮಾರುಕಟ್ಟೆಗಳಲ್ಲಿ ಪ್ರಚಲಿತ ಬೆಲೆಯ ವಿವರ, ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ. ಗ್ರಾಮೀಣ ಹಂತದಲ್ಲಿ ಉತ್ಪನ್ನಗಳನ್ನು ಒಟ್ಟುಗೂಡಿಸಿ ಗ್ರಾಹಕರು, ಸಂಸ್ಕರಣಾಗಾರರು, ರಫ್ತುದಾರರಿಗೆ ನೇರವಾಗಿ ಮಾರಾಟ ಮಾಡುವ ಹಂತಗಳನ್ನು ಸುಧಾರಿಸಲಾಗುತ್ತದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆಗಳ ಜೋಡಣೆ, ಉತ್ಪನ್ನಗಳ ಗುಣ ನಿರ್ಧಾರ, ಸಾಮರ್ಥ್ಯ ವೃದ್ಧಿ, ಹಣಕಾಸು ಸೌಲಭ್ಯ, ಹೊಂದಾಣಿಕೆಗೆ ನೆರವು ನೀಡಲಾಗುತ್ತದೆ. ರೈತರು ಹಾಗೂ ಮಾರಾಟಗಾರರಿಗೆ ತಮ್ಮ ದಾಸ್ತಾನು ಅನುಸಾರ ಸಾಲ ಸೌಲಭ್ಯ ದೊರಕಿಸಲು ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ರೈತರಿಗೆ ಆನ್ಲೈನ್ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ ಎಂದರು.
ಪಾರದರ್ಶಕತೆ: ಕೃಷಿ ಮಾರಾಟ ಸುಧಾರಣಾ ಸಮಿತಿ ಅಧ್ಯಕ್ಷ ಆರ್. ಮನೋಜ್ ಮಾತನಾಡಿ, ಕೃಷಿ ಮಾರಾಟ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಎಲ್ಲಾ ಮಾರಾಟ ಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ, ಹಾಗೂ ಸರಳೀಕರಣವನ್ನು ತರಲು ಸಾಧ್ಯವಾಗುತ್ತದೆ. ವರ್ತಕರಿಗೆ ಏಕೀಕೃತ ಲೈಸನ್ಸ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿ, ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ. ಆನ್ಲೈನ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗುತ್ತದೆ ಎಂದರು.
ಉಗ್ರಾಣ ಆಧಾರಿತ ಮಾರಾಟ ವ್ಯವಸ್ಥೆಯಿಂದ ರೈತರು ಹತ್ತಿರದಲ್ಲೇ ಉತ್ಪನ್ನಗಳನ್ನು ಅನ್ಲೈನ್ ಮಾರುಕಟ್ಟೆ ವ್ಯವಸ್ಥೆ ಮೂಲಕ ಮಾರಾಟ ಮಾಡಲು ಸಾಧ್ಯವಾಗುತ್ತದೆ. ದಲ್ಲಾಳಿಗಳು ಹಾಗೂ ಖರೀದಿದಾರರು ಸಹ ಹೆಚ್ಚಿನ ಮಾರಾಟ ಚಟುವಟಿಕೆಯಿಂದಾಗಿ ಹೆಚ್ಚಿನ ಆದಾಯ ಲಭ್ಯವಾಗುತ್ತದೆ. ಏಕೀಕೃತ ಮಾರುಕಟ್ಟೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಲಿ. ಎನ್ನುವ ರಾಜ್ಯ ಸರ್ಕಾರ ಸ್ಥಾಪಿಸಲಾಗಿದೆ. ಮೇ ತಿಂಗಳಗಳಲ್ಲೇ ಯಾದಗಿರಿಯಲ್ಲೂ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎನ್ನುವ ವಿಷಯವನ್ನು ತಿಳಿಸಿದರು.
ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಎಂ. ಶ್ರೀನಿವಾಸ ಸ್ವಾಗತಿಸಿದರು. ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ವಿ. ಮಹಾಬಲಗಿರಿ ಭಟ್ ವಂದಿಸಿದರು. ಸಭೆಯಲ್ಲಿ ಮಾರುಕಟ್ಟೆ ಸಮಿತಿಯ ಸದಸ್ಯರು ಹಾಗೂ ರೈತರು, ವರ್ತಕರು, ದಲ್ಲಾಲರು ಇನ್ನಿತರೆ ಮಾರಾಟ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಬ್ಯಾಂಕುಗಳ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಾರುಕಟ್ಟೆ ಭಾಗೀದಾರರು ಮಾರುಕಟ್ಟೆ ಸುಧಾರಣಾ ವ್ಯವಸ್ಥೆಯನ್ನು ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಸಮಂಜಸವಾದ ಉತ್ತರವನ್ನು ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

