ಗುಲ್ಬರ್ಗಾ

ತೊಗರಿ ಮಾರಾಟಕ್ಕೆ 4,000 ರೈತರ ನೋಂದಣಿ: ಖರೀದಿಯಲ್ಲಿ ವಿಳಂಬ

Published On :

ಆಳಂದ: ರಾಜ್ಯ ಸರ್ಕಾರ ಎನ್‌ಎಸ್‌ಡಿಇಎಕ್ಸ್  ಸ್ಪಾಟ್ ಏಜೆನ್ಸಿ ಸಂಸ್ಥೆಯ ಮೂಲಕ ಪಟ್ಟಣದಲ್ಲಿ ಆರಂಭಿಸಲಾದ ತೊಗರಿ ಖರೀದಿ ಪ್ರಕ್ರಿಯೆ ತೀರಾ ಆಮೆಗತಿಯಲ್ಲಿ ಸಾಗಿರುವುದು ಬಡ. ರೈತಾಪಿಗಳು ತಮ್ಮ ತೊಗರಿ ಮಾರಾಟಕ್ಕೆ ನಿತ್ಯ ಪರದಾಡುತ್ತಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ ತೊಗರಿಗೆ ಕೇವಲ 4000 ರೂಪಾಯಿ ಕ್ವಿಂಟಾಲ್ ಖರೀದಿಸಿದರೆ, ಸರ್ಕಾರದ ಖರೀದಿ ಕೇಂದ್ರದಿಂದ 5 ಸಾವಿರ ರೂಪಾಯಿ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಅನೇಕ ರೈತರು ಸರ್ಕಾರ ನೀಡುತ್ತಿರುವ ದರ ಪಡೆಯಲು ಮುಂದಾದರೆ, ಖರೀದಿಯಲ್ಲಾಗುತ್ತಿರುವ ವಿಳಂಬ ಪ್ರಕ್ರಿಯೆಯಿಂದ ಮಾರಾಟಕ್ಕಾಗಿ ಹೆಸರು ನೋಂದಾಯಿಸಿದವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೆ, ತಾವು ಬೆಳೆದ ತೊಗರಿ ಮಾರಾಟ ಸಾಧ್ಯವಾಗದು ಎಂಬ ಅನುಮಾನಸಕ್ತರಾಗಿ ಬೇಸರಗೊಂಡು ಅಗ್ಗದ ದರದಲ್ಲೇ ಮಾರಾಟಕ್ಕೆ ಮುಂದಾಗುವ ಪರಸ್ಥಿತಿ ಎದುರಾಗಿದೆ.
ದೊಡ್ಡ ತಾಲೂಕು ಮೇಲಾಗಿ ಅತಿ ಹೆಚ್ಚು ತೊಗರಿ ಬೆಳೆಯುವ ಪ್ರದೇಶ ಇದಾಗಿದೆ. ಕೇವಲ ಪಟ್ಟಣದಲ್ಲೇ ಒಂದೇ ಖರೀದಿ ಕೇಂದ್ರ ಆರಂಭಿಸಿದ್ದು, ಇದರಿಂದ ರೈತರ ತೊಗರಿ ಖರೀದಿ ಪ್ರಸಕ್ತ ಹಂಗಾಮಿನಲ್ಲಿ ಮುಗಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ನಮ್ಮ ತೊಗರಿ ಮಾರಾಟಗೊಳ್ಳುತ್ತದೋ ಇಲ್ಲವೋ ಎಂಬ ಅನುಮಾನ ತೊಗರಿ ರೈತರಲ್ಲಿ ಕಾಡತೊಡಗಿದೆ.
ಕಳೆದ ಜನವರಿ 2ರಿಂದ ಖರೀದಿ ಆರಂಭಿಸಲಾಗಿದೆ: ದಿನಕ್ಕೆ 20ರಿಂದ 25 ಮಂದಿಯ ತೊಗರಿ ಮಾತ್ರ ಖರೀದಿ, ಅಂದರೆ ದಿನಕ್ಕೆ ಕೇವಲ 250ರಿಂದ 300 ಕ್ವಿಂಟಾಲ್ ಮಾತ್ರ ಖರೀದಿಯಾಗುತ್ತಿದೆ. ಒಬ್ಬ ರೈತರಿಂದ 20 ಕ್ವಿಂಟಾಲ್ ಮಾತ್ರ ಖರೀದಿಗೆ ಅವಕಾಶವಿದೆ. 4 ಸಾವಿರ ರೈತರ ತೊಗರಿ ಮಾರಾಟ ಮಾಡುವುದಕ್ಕಾಗಿ ತಮ್ಮ ಹೆಸರು ನೋಂದಣಿ ಮಾಡಿದ್ದಾರೆ. ಓರ್ವ ರೈತರಿಂದ 20 ಕ್ವಿಂಟಾಲ್ ಖರೀದಿ ಮಾಡಿದರೆ ಒಟ್ಟು ನಾಲ್ಕು ಸಾವಿರ ರೈತರ ಅಂದಾಜು 79, 240 ಕ್ವಿಂಟಾಲ್ ಖರೀದಿ ಮಾಡಬೇಕಾದ ಖರೀದಿ ಕೇಂದ್ರದಲ್ಲಿ ಬರೀ 8, 084 ಕ್ವಿಂಟಲ್ ಮಾತ್ರ ಖರೀದಿಸಲಾಗಿದೆ.
ಮಳೆಯ ಏರುಪೇರು ಹಾಗೂ ಹುಳದ ಕಾಟ ಸಾಹೂಕಾರಿ ಮತ್ತು ಬ್ಯಾಂಕ್ ಸಾಲ ಪಡೆದು ದುಬಾರಿ ಖರ್ಚು ಮಾಡಿ ಬೆಳೆದು ತಂದ ತೊಗರಿ ಮಾರಾಟವಾಗಿ ಕೈಗೆ ಹಣಬಂದರೆ ಮದುವೆ, ಸಾಲ ಮತ್ತಿತರ ಕಾರ್ಯಗಳು ಅನುಕೂಲ ಮಾಡಿಕೊಳ್ಳಲು ಮುಂದಾದವರಿಗೆ ಖರೀದಿ ವಿಳಂಬದಿಂದ ಯಾತನೆ ಅನುಭವಿಸುವಂತೆ ಮಾಡಿದೆ.
ತ್ವರಿತಗತಿಯಲ್ಲಿ ಖರೀದಿಸಿ: ಹೆಸರು ನೋಂದಾಯಿಸಿ ಒಂದುವರೆ ತಿಂಗಳಾಗುತ್ತಾ ಬಂದರು ಇನ್ನೂ ಸಾವಿರಾರು ನೋಂದಾಯಿತ ರೈತರ ತೊಗರಿಯೇ ಖರೀದಿಯಾಗಿಲ್ಲ. ತಡವಾಗಿ ನೋಂದಾಯಿತರ ತೊಗರಿ ಖರೀದಿ ಮಾಡಿಕೊಳ್ಳುತ್ತಾರೋ ಇಲ್ಲೋ ಎಂಬ ಗೊಂದಲವಾಗಿದೆ. ಕೂಡಲೇ ಸರ್ಕಾರ ಖರೀದಿ ಕೇಂದ್ರದಲ್ಲಿ ತೂಕ ಮತ್ತು ಕಾರ್ಮಿಕರು, ಸಿಬ್ಬಂದಿಯನ್ನು ಹೆಚ್ಚಿಸಿ ಖರೀದಿ ಪ್ರಕ್ರಿಯೆ ಚುರುಕುಗೊಳಿಸಿ ಸಕಾಲಕ್ಕೆ ರೈತರಿಗೆ ಹಣ ಕೈ ಸೇರುವಂತೆ ಮಾಡಬೇಕೆಂದು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ ರೈತ ಡಾ. ಎಸ್.ಎ. ಕೋಗನೂರ, ಸರಸಂಬಾ, ಶಾಂತಮಲ್ಲಪ್ಪಾ ನೆಲ್ಲೂರ, ಕಲ್ಯಾಣಿ ಜಮಾದಾರ ಭೂಸನೂರ ಮತ್ತಿತರು ಒತ್ತಾಯಿಸಿದ್ದಾರೆ.
ಸರ್ಕಾರ ಪುಣ್ಯಕಟ್ಟಿಕೊಂಡಿದೆ: ಸರ್ಕಾರವೇ 5ಸಾವಿರ ದರದಲ್ಲಿ ತೊಗರಿ ಖರೀದಿಸುತ್ತಿರುವುದು ರೈತರಿಗೆ ಅನುಕೂಲವಾಗಿದೆ. ಮಾರಾಟ ವೇಳೆ ಹಮಾಲಿ ಖರ್ಚು ಅಥವಾ ಧಾನ್ಯ ಕಡಿತಗೊಳ್ಳುವ ಮಾತೇ ಇಲ್ಲ. ತೂಕದಷ್ಟು ಹಣ ಬರುತ್ತಿದೆ. ಆದರೆ ಖರೀದಿಯಲ್ಲಿ ವಿಳಂಬ ಹೋಗಲಾಡಿಸಲು ಹೋಬಳಿ ಮಟ್ಟದಲ್ಲಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ಕಾರಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರುದ್ರವಾಡಿ ಗ್ರಾಮದ ರೈತ  ರವಿಕುಮಾರ ಚಂದ್ರಶೇಖರ ಪಾಟೀಲ ಆಗ್ರಹಿಸಿದರು.
ದಾಸ್ತಾನು ಸಮಸ್ಯೆ: 1 ಚನ್ನಿ ಮತ್ತು 1 ತೂಕ ಹೆಚ್ಚಿಸಲಾಗಿದೆ. ಇನ್ನೂ ಹೆಚ್ಚಿಸಲು ಕಾರ್ಮಿಕರ ಬೇಕಾಗುತ್ತದೆ. ಅಲ್ಲದೆ, ಸಂಗ್ರಹ ಸಮಸ್ಯೆಯಾಗುತ್ತದೆ. ಸದ್ಯ ಸರದಿಯಂತೆ ರೈತರ ತೊಗರಿ ಖರೀದಿ ಮಾಡಲಾಗುತ್ತಿದೆ ಎಂದು ಎನ್‌ಎಸ್‌ಡಿಇಎಕ್ಸ್ ಸ್ಪಾಟ್ ಏಜೆನ್ಸಿ ಸಹಾಯಕ ಅಧಿಕಾರಿ ಗಿರೀಶ ಕುಲಕರ್ಣಿ ಹೇಳಿಕೊಂಡಿದ್ದಾರೆ. 'ಕನ್ನಡಪ್ರಭ' ಜೊತೆ ಮಾತನಾಡಿದ ಅವರು ತೊಗರಿ ಖರೀದಿ ಸಾಗಿದೆ. ನಿಧಾನವಾಗುತ್ತಿದೆ, ಕಾರ್ಮಿಕರ ಕೊರತೆ ಬರುವ ದಿನಗಳಲ್ಲಿ ನೀಗಿಸುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.