ಬಿಪಿಎಲ್ ಕಾರ್ಮಿಕರಿಗೆ ಆರೋಗ್ಯ ಭಾಗ್ಯ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.18
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ನೀಡುವ ಕೇಂದ್ರ- ರಾಜ್ಯ ಸಹಯೋಗದ ರಾಷ್ಟ್ರೀಯ ಗ್ರಾಮೀಣ ಸ್ವಾಸ್ಥ್ಯ ಭೀಮಾ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ಸಾಗಿವೆ.
ಯೋಜನೆಯಡಿಯಲ್ಲಿ ಕಾರ್ಮಿಕರ ಆರೋಗ್ಯ ಕಾಳಜಿಯ ಮಹತ್ವದ ಸಂಗತಿಗಳು ಇರುವುದರಿಂದ ಕಾರ್ಮಿಕರು ಯಾವಕಾರಣಕ್ಕೂ ಫಲಾನುಭವಿಗಳಾಗಿ ನೋಂದಣಿ ಮಾಡಿಸಿಕೊಳ್ಳುವ ಸಂದರ್ಭ ಕೈತಪ್ಪದಂತೆ ಕಾಳಜಿ ವಹಿಸಬೇಕಾಗಿದೆ. ಈಗಾಗಲೇ ಇಲ್ಲಿನ ಕಾರ್ಮಿಕ ಇಲಾಖೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ಬಿಪಿಎಲ್ ಕುಟುಂಬಗಳ ದತ್ತಾಂಶ ಲಭ್ಯವಾಗಿದ್ದು, ಇದರನ್ವಯ ಆರ್ಎಸ್ಬಿವೈ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಯಾರು ಅರ್ಹರು?: ಆರ್ಡಿಪಿಆರ್ ಇಲಾಖೆಯ ಉದ್ಯೋಗ ಖಾತ್ರಿ ನೋಂದಾಯಿತ ಕಾರ್ಮಿಕರು, ಬಿಪಿಎಲ್ ಕುಟುಂಬ ಕಾರ್ಮಿಕರು, ಪರವಾನಗಿ ಪಡೆದ ರೇಲ್ವೆ ಇಲಾಖೆ ವೆಂಡರ್ಗಳು, ಹಾಕರ್ಸ್, ಪೋರ್ಟರ್ಗಳು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಬೀದಿಬದಿ ವರ್ತಕರು, ಮನೆ ಕೆಲಸದವರು. ಫಲಾನುಭವಿಗಳು ನೋಂದಣಿ ಶುಲ್ಕ 30 ರುಪಾಯಿ ಭರಿಸಿ ಯೋಜನೆಯ ಉಪಯೋಗ ಪಡೆಯಬಹುದು.
ವಿಮಾ ವ್ಯಾಪ್ತಿ: ಫಲಾನುಭವಿ ಕುಟುಂಬದ ಮುಖ್ಯಸ್ಥರು, ಪತಿ, ಪತ್ನಿ, ಮಕ್ಕಳು, ಪಾಲಕರು ಸೇರಿದಂತೆ ಒಟ್ಟು 5 ಸದಸ್ಯರಿಗೆ ವಿಮೆ ಅನ್ವಯ. ನೋಂದಣಿ ಸಂದರ್ಭದಲ್ಲಿ 5 ಜನರ ಹೆಸರು ನಮೂದು ಕಡ್ಡಾಯ.
ಯೋಜನೆಯ ವಿಶೇಷತೆಗಳು: ಶಸ್ತ್ರ ಚಿಕಿತ್ಸೆ ಸೇರಿದಂತೆ 1, 085 ವಿವಿಧ ನಮೂನೆ ಚಿಕಿತ್ಸಾ ಕ್ರಮಗಳಿಗೆ ಅವಕಾಶ,ಆಸ್ಪತ್ರೆ ದಾಖಲಾಗುವ ಮುಂಚಿನ 1 ದಿನ, ಬಿಡುಗಡೆ ನಂತರದ 5 ದಿನಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ
ಪ್ರಯಾಣ ವೆಚ್ಚ ಪ್ರತಿ ರೋಗಿಗೆ 100, ಗರಿಷ್ಠ 1000
ಒಂದೇ ಕುಟುಂಬ ಸದಸ್ಯರು ಬೇರೆ ಬೇರೆ ವಾಸವಿದ್ದಲ್ಲಿ ಪ್ರತ್ಯೇಕ ಕಾರ್ಡ್ಗೆ ಅವಕಾಶ
ಯೋಜನೆಯಡಿ ಗುರುತಿಸಲಾಗಿರುವ ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ
ಸ್ಮಾರ್ಟ್ ಕಾರ್ಡ್ ಕೊಟ್ಟು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ
30 ಸಾವಿರ ಗರಿಷ್ಠ ಮಿತಿಯೊಳಗೆ ಚಿಕಿತ್ಸೆ
ಸ್ಮಾರ್ಟ್ ಕಾರ್ಡ್ ಪಡೆಯೋದು ಹೇಗೆ: ಯೋಜನೆಯಡಿಯಲ್ಲಿ ಕಾರ್ಮಿಕರ ನೋಂದಣಿ ಕೌಂಟರ್ ಆರಂಭಿಸಲಾಗುತ್ತದೆ. ಫಲಾನುಭವಿಗಳು ಅಲ್ಲಿಗೆ ಹೋಗಿ ಬೆರಳು ಗುರುತು, ಫೋಟೋ ನೀಡಿ ತಕ್ಷಣ ಸ್ಮಾರ್ಟ್ಕಾರ್ಡ್ ಪಡೆಯಬಹುದು. ಈ ಕಾರ್ಡ್ನಿಂದ ವಾರ್ಷಿಕ 30 ಸಾವಿರ ವರೆಗಿನ ಚಿಕಿತ್ಸಾ ವೆಚ್ಚವನ್ನು ನಿಗದಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿದ್ದವರ ಚಿಕಿತ್ಸಾ ವೆಚ್ಚದ ಪ್ರತಿ ಭರಿಸಲಾಗುತ್ತದೆ.
ಫೀಲ್ಡ್ ಕೀ ಆಫೀಸರ್ಗಳ ನೇಮಕ: ಗ್ರಾಮ ಲೆಕ್ಕಿಗರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನು ಯೋಜನೆಯ ಕಾರ್ಮಿಕರ ನೋಂದಣಿಗಾಗಿ ಫೀಲ್ಡ್ ಕೀ ಅಧಿಕಾರಿಗಳೆಂದು ನೇಮಿಸಲಾಗುತ್ತದೆ. ಇವರ ಬಳಿ ಫಲಾನುಭವಿಗಳ ಪಟ್ಟಿ ಲಭ್ಯ. ಅದರಂತೆ ಕಾರ್ಮಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರದ್ದು.
7 ಸರ್ಕಾರಿ, 15 ಖಾಸಗಿ ಆಸ್ಪತ್ರೆಗಳು: ಗುಲ್ಬರ್ಗ ಜಿಲ್ಲೆಯಲ್ಲಿ 7 ಸರ್ಕಾರಿ ಹಾಗೂ 15 ಖಾಸಗಿ ಆಸ್ಪತ್ರೆಗಳನ್ನು ಯೋಜನೆಯಡಿಯಲ್ಲಿ ಗುರುತಿಸಲಾಗಿದೆ. ಈ ಮಾಸಾಂತ್ಯಕ್ಕೆ ಕಾರ್ಮಿಕ ನೋಂದಣಿ ಕಾರ್ಯಕ್ಕೆ ಚಾಲನೆ ದೊರಕಲಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚನೆ, ಸ್ಥಳದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ, ಅದಕ್ಕಾಗಿ ಆಗ ಬಾ, ಹೋಗಿ ಬಾ ಅನ್ನೋ ಸಂದರ್ಭಗಳೇ ಇರೋದಿಲ್ಲ.
ಗ್ರಾಮೀಣ ಗುಲ್ಬರ್ಗದಲ್ಲಿ 4.61 ಲಕ್ಷ ಕಾರ್ಮಿಕರು
ಗುಲ್ಬರ್ಗ ಗ್ರಾಮಾಂತರ ಪ್ರದೇಶದಲ್ಲಿ 2014, ಫೆ.14ರವರೆಗೆ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ 4.61 ಲಕ್ಷ ಬಿಪಿಎಲ್ ಕಾರ್ಮಿಕರಿದ್ದಾರೆ. ಇವರೆಲ್ಲರಿಗೂ ಯೋಜನೆಯಡಿಯಲ್ಲಿ ನೋಂದಣಿಗೆ ಅವಕಾಶವಿದೆ.
1) ಗುಲ್ಬರ್ಗ ಗ್ರಾಮಾಂತರ ಒಟ್ಟು ಫಲಾನುಭವಿಗಳು- 4, 61, 413
2) ಬಿಪಿಎಲ್ ಕುಟುಂಬಗಳು- 3, 95, 704
3) ಉದ್ಯೋಗಖಾತ್ರಿ ಯೋಜನೆಯ ನೋಂದಾಯಿತ ಕಾರ್ಮಿಕರು- 65, 709
ಅ) ಆಳಂದ- 83, 359
ಆ) ಅಫಜಲ್ಪುರ- 51, 296
ಇ) ಗುಲ್ಬರ್ಗ- 68, 669
ಈ) ಚಿಂಚೋಳಿ- 68, 493
ಉ) ಸೇಡಂ- 44, 002
ಊ) ಚಿತ್ತಾಪುರ- 68, 530
ಎ) ಜೇವರ್ಗಿ- 77, 064
ಗುಲ್ಬರ್ಗ ಗ್ರಾಮಾಂತರ ಭಾಗದ 4, 61, 413 ಕಾರ್ಮಿಕ ಕುಟುಂಬಗಳ ದತ್ತಾಂಶ ಮೇಲ್ದರ್ಜೆಗೇರಿಸಲಾಗಿದ್ದು, ಕಾರ್ಮಿಕ ಇಲಾಖೆಯಲ್ಲಿ ಈ ದತ್ತಾಂಶದ ಸಂಪೂರ್ಣ ಮಾಹಿತಿ ಲಭ್ಯ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

