ಜಾಗತೀಕರಣ, ಉದಾರೀಕರಣದಿಂದ ಜನಪದ ಕುಂಠಿತ: ನಾರಾಯಣ ಕಳವಳ
ಗುಲ್ಬರ್ಗ: ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದಿಂದ ಹೊರಹೊಮ್ಮುತ್ತಿರುವ ಒತ್ತಡ ಸನ್ನಿವೇಶಗಳ ನಡುವೆ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ಬಹಳಷ್ಟು ಕಷ್ಟಕರ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಪಕ ಡಾ. ತೀ.ನಂ. ಶಂಕರನಾರಾಯಣ ಕಳವಳ ವ್ಯಕ್ತಪಡಿಸಿದರು.
ಕನ್ನಡ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಜನಪದ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಪದ ಪ್ರಸ್ತುತ ಸವಾಲುಗಳು ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಬಹಳಷ್ಟು ಇನ್ನೂ ಕೆಲಸಮಾಡಬೇಕಾಗಿದೆ ಎಂದರು.
ಪ್ರೋತ್ಸಾಹ ನೀಡಿ: ವಿದ್ಯಾರ್ಥಿಗಳಿಗೆ ಜನಪದ ಕಲೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿಯೊಂದು ಶಾಲಾ ಕಾಲೇಜು ಮತ್ತು ವಿವಿ.ಗಳಲ್ಲಿ ಜನಪದ ಕಲೆ ಮತ್ತು ಪ್ರದರ್ಶನಗಳ ಒಂದು ಕಲಿಕಾ ಕೇಂದ್ರವನ್ನು ಸ್ಥಾಪಿಸಿ ಮತ್ತು ಕಲೆಗಾರರಿಗೆ ಪ್ರೋತ್ಸಾಹ ನೀಡಬೇಕು, ಬಡ ಕಲಾವಿದರಿಗೆ ಪ್ರೋತ್ಸಾಹಧನ ಹಾಗೂ ವೃದ್ಧ ಕಲಾವಿದರಿಗೆ ಪಿಂಚಣಿಯನ್ನು ಕೋಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ವಾತಾವರಣಕ್ಕೆ ತಕ್ಕಂತೆ: ಜನಪದ ವಿದ್ವಾಂಸ ಡಾ. ಮ.ಗು. ಬಿರಾದಾರ ಮಾತನಾಡಿ, ಜನಪದ ಕಲೆ ಒಂದು ಅನುಭವ, ಅದು ಬದುಕನ್ನು ಜನರ ಮುಂದೆ ತೆರೆದಿಡುವಂತಹ ಕೆಲಸ ಮಾಡುತ್ತದೆ. ಜನಪದ ಸಂಸ್ಕೃತಿಯು ಆಯಾ ಭಾಷೆ, ಪ್ರದೇಶ ಮತ್ತು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬೇರೆ ಬೇರೆ ಇರುತ್ತದೆ ಎಂದರು.
ಕರ್ನಾಟಕದಲ್ಲಿ ಮಾತ್ರ ಜನಪದ ಕಲೆಯನ್ನು ಒಂದು ವಿಶ್ವವಿದ್ಯಾಲಯ ಮಟ್ಟದಲ್ಲಿ ಗುರುತಿಸಿರುವುದು ತುಂಬಾ ಶ್ಲಾಘನೀಯ. ಇಂದು ಜನಪದ ವಿದ್ವಾಂಸರು ವಿಧ್ವಂಸರಾಗಿ ಕೆಲಸ ಮಾಡುತ್ತಿದ್ದಾರೆ. ಜನಪದವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಕರ್ನಾಟಕ ಜನಪದ ಅಕಾಡೆಮಿ ರಿಜಿಸ್ಟಾರ್ ಬಿ.ಎನ್. ರೆಡ್ಡಿ, ಡಾ. ನಾಗಪ್ಪ ಟಿ.ಗೋಗಿ, ಸಿ.ಎಸ್. ಮಾಲಿಪಾಟೀಲ, ಎಸ್.ಕೆ. ಬಿರಾದಾರ, ಪ್ರೊ. ಸುಗಯ್ಯ ಹಿರೇಮಠ, ಎಲ್.ಬಿ.ಕೆ. ಅಲ್ದಾಳ, ಪ್ರಮೀಳಾ ಜಾನಪ್ಪಗೌಡ, ಕಾಶಿನಾಥ ಅಂಬಲಗಿ, ಶಂಕರ ಬಿರಾದಾರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

