ಎಕ್ಸ್ಪ್ರೆಸ್ ರೈಲು ನಿಲುಗಡೆ
ಗುರುಮಠಕಲ್: ಯಾದಗಿರಿಯಲ್ಲಿ ಬೆಂಗಳೂರು-ನವದೆಹಲಿ ರೈಲು ನಿಲುಗಡೆ ಮಾಡಲು ಸಮ್ಮತಿ ಸೂಚಿಸಿರುವ ರೈಲ್ವೆ ಇಲಾಖೆಯ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮುಖಂಡ ರಾಘವೇಂದ್ರ ಮಾನಸಗಲ್ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಸಿಹಿ ಹಂಚಲಾಯಿತು.
ಯಾದಗಿರಿ ಜಿಲ್ಲಾ ಕೇಂದ್ರವಾಗಿ ನಾಲ್ಕು ವರ್ಷಗಳು ಉರುಳಿದರೂ ಇಲ್ಲಿ ಪ್ರಮುಖ ರೈಲುಗಳ ನಿಲುಗಡೆ ಮಾತ್ರ ಅಗದೆ ಜನತೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಬಗ್ಗೆ ಗಮನ ಹರಿಸಿದ ಶಾಸಕರಾದ ಡಾ.ಎ.ಬಿ ಮಾಲಕರಡ್ಡಿ ಅವರು ಇದೇ ಭಾಗದವರಾದ ರೈಲ್ವೆ ಸಚಿವ ಮಲ್ಲಿಕಾರ್ರುನ ಖರ್ಗೆ ಅವರ ಮೇಲೆ ಒತ್ತಡ ತಂದು ಬಹು ದಿನಗಳ ಈ ಬೇಡಿಕೆಯನ್ನು ಈಡೇರಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಮುಖರಾದ ರಾಹುಲಗೌಡ ಅರಿಕೇರ, ಶಶಿಧರ ರಡ್ಡಿ, ಹೊಸಳ್ಳಿ, ಸೋಮಶೇಖರ ಮಸ್ಕನಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.
ಸಹಾಯಧನ: ರೈತರ ಖಾತೆಗೆ ನೇರ ಜಮಾ
ಯಾದಗಿರಿ: ಕೃಷಿ ಇಲಾಖೆಯಿಂದ ಜಾರಿ ಮಾಡಲಾಗುತ್ತಿರುವ ಕೃಷಿ ಯಾಂತ್ರಿಕರಣ ಕಾರ್ಯಕ್ರಮದಡಿ, ಉಳುಮೆಯಿಂದ ಕೊಯ್ಲಿನವರೆಗೆ ಬೇಕಾಗುವ ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಮತ್ತು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಅಭಿಯಾನ ಯೋಜನೆಯಡಿ ವಿತರಿಸುವ ತುಂತುರು ಮತ್ತು ಹನಿ ನೀರಾವರಿ ಘಟಕಗಳಿಗೆ 5000 ಮತ್ತು ಅದಕ್ಕಿಂತ ಮೇಲ್ಪಟ್ಟು ಒದಗಿಸುವ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರವು ಆದೇಶಿಸಿದೆ.
ರೈತರು ನೇರವಾಗಿ ಸಹಾಯ ಧನ ಪಡೆಯಲು ಬ್ಯಾಂಕಿನಲ್ಲಿ ಕಡ್ಡಾಯವಾಗಿ ಖಾತೆ ಹೊಂದಿರಬೇಕು. ರೈತರು ಸವಲತ್ತನ್ನು ಪಡೆಯಲು ನಿಗದಿತ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ರೈತರು ತಮ್ಮ ಭಾಗದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿ ರಶೀದಿ ಸಲ್ಲಿಸಬೇಕು. ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ತಮ್ಮ ಖಾತೆಯಲ್ಲಿ ಜಮಾ ಆಗುವ ರೈತರ ವಂತಿಕೆಯ ಹಣ ಮತ್ತು ಸರ್ಕಾರದ ಸಹಾಯಧನವನ್ನು ಸರಬರಾಜು ಸಂಸ್ಥೆಗೆ ಪಾವತಿಸಲು ಮುಚ್ಚಳಿಕೆ ಪತ್ರ ನೀಡಬೇಕು.
ಎಸ್ಟಿಗೆ ಕೋಲಿ ಸಮಾಜ; ಸಂಪುಟ ಅಸ್ತು
ಶಹಾಪುರ: ಶೋಷಿತ ಜನಾಂಗವಾದ ಕಬ್ಬಲಿಗ, ಬೆಸ,್ತ ಗಂಗಾಮತ ಇನ್ನಿತರ 39 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸಬೇಕೆಂದು ಫೆ. 24ರಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಮತ್ತು ಸಮಾಜವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸುವುದಕ್ಕಾಗಿ ಹಗಲಿರುಳು ಶ್ರಮಿಸಿದ ಸಚಿವ ಬಾಬುರಾವ ಚಿಂಚನಸೂರು ಅವರಿಗೆ ತಾಲೂಕಾ ಕೋಲಿ ಸಮಾಜದ ಗೌರಾವಾಧ್ಯಕ್ಷ ರಾಮಣ್ಣನಾಯ್ಕೋಡಿ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಪುರಸಭೆ ಆವರಣದಲ್ಲಿ ಸಮಾಜದ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. ಈ ಸಂಬಂಧ ನಿರ್ಣಯ ಕೈಗೊಂಡಿದ್ದು ಶೋಷಿತ ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗಿದೆ ಎಂದು ಜಿಲ್ಲಾ ಕೋಲಿ ಸಮಾಜದ ಸಂಚಾಲಕರು ಹಾಗೂ ಯುವ ನ್ಯಾಯವಾದಿ ಶಿವಪ್ಪ ರಸ್ತಾಪುರ ಸರ್ಕಾರದ ಕ್ರಮವನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಪಾಂಡುರಂಗ ಮಾಸ್ತರ ಕೋನೇರ, ಭೀಮರಾಯ ಮಮದಾಪುರ, ಮರೆಪ್ಪ ಹೈಯಾಳಕರ, ರಾಮಾಂಜನೇಯ ಕೋನೇರ ಹಾಗೂ ಸಮಾಜದ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು
ಕೋತಿಯ ಕಾಯಿಲೆಗೆ ಮಾನವೀಯತೆ ಮೆರೆದ ಯುವಕರು
ಶಹಾಪುರ: ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ದಯವಿಲ್ಲದ ಧರ್ಮವಾವುದಯ್ಯ... ಎಂಬ ಬಸವಣ್ಣನವರ ದಯಾಪರ ನುಡಿಗೆ ಅನುಗುಣವಾಗಿ ಶಹಾಪೂರದ ಯುವಕರು ಪಾಲಿಸಿದ್ದಾರೆ.
ಕಲ್ಯಾಣಗೌಡ ಪಾಟೀಲ ಮಲ್ಲಾಬಾದ, ಸಂಗಣ್ಣ.ಬಿ.ಮುತ್ತಕೋಡ, ಮಲ್ಲು ಚೀಗರಿ, ಹಣಮಂತ್ರಾಯ ಮೇಟಿ ಮತ್ತು ಅಬ್ಬಾಸಲಿ ಕೆಲ್ಲುರರವರು ಇತ್ತೀಚೆಗೆ ಹೋತಪೇಟದ ಕೈಲಾಸ ಆಶ್ರಮದಲ್ಲಿ ಬಹಳ ದಿನಗಳಿಂದ ಗಾಯಗೊಂಡು ನೋವಿನಿಂದ ಯಮ ಯಾತನೆಯನ್ನು ಅನುಭವಿಸುತ್ತಿದ್ದ ಕೋತಿಯೊಂದನ್ನು ಮಾನವೀಯತೆಯಿಂದ ತಂದು ಶಹಾಪುರದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಣ್ಣು ಹಂಪಲು ನೀಡಿ, ಪುನಃ ಅದನ್ನು ಕೈಲಾಸ ಆಶ್ರಮಕ್ಕೆ ಬಿಟ್ಟು ಬಂದಿದ್ದಾರೆ. ಮನೆಯವರ ಕಾಯಿಲೆಗಳಿಗೆ ಸ್ಪಂದಿಸದೇ ಇರುವ ಇಂದಿನ ದಿನಗಳಲ್ಲಿ ಶಹಾಪುರದ ಈ ಯುವಕರ ಕಾಯಕ ಅನುಕರಣೀಯವಾದುದು ಎಂದು ಕೋತಿಗೆ ಚಿಕಿತ್ಸೆ ನೀಡಿದ ಡಾ. ಶೋಭಾ ಅವರು ಹೇಳಿದ್ದಾರೆ.
ಶ್ರೀಮದ್ಭಾಗವತ ಸ್ಮರಣೆಯಿಂದ ದುಃಖ ನಿವಾರಣೆ
ಶಹಾಪುರ: ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಮಣ್ಣೂರಿನಿಂದ ಮಂತ್ರಾಲಯದವರೆಗೆ ಪಾದಯಾತ್ರೆ ನಡೆದಿದೆ.
ಈ ಸಂದರ್ಭದಲ್ಲಿ ವೇದೇಶ ತೀರ್ಥ ವಿದ್ಯಾಪೀಠದ ಕುಲಪತಿಗಳಾದ ಪಂಡಿತ ಅನಂತಾಚಾರ್ಯ ಅಕಮಂಚಿ ಅವರು ಭಾಗವತದ ಅನೇಕ ತತ್ತ್ವಗಳನ್ನು ಮತ್ತು ಭಗವದ್ಭಕ್ತರ ಮಹಿಮೆಗಳನ್ನು, ಪರಮಾತ್ಮನ ಅಚಿಂತ್ಯವಾದ ಮಹಿಮೆಯನ್ನು, ವೈರಾಗ್ಯದ ವಿವರಣೆಯನ್ನು ನೀಡುತ್ತಾ ಪಾದಯಾತ್ರೆಯ ಮಹಿಮೆಯನ್ನು, ಗುರುಗಳ ಕಾರುಣ್ಯವನ್ನು ವಿವರಿಸಿದರು. ಮಾರ್ಗಮಧ್ಯದಲ್ಲಿ ಬರುವ ಶಹಾಪುರದ ಹಳೆಪೇಟೆಯಲ್ಲಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ಉಪನ್ಯಾಸ ನೀಡಿದರು.
ಅನೇಕ ಭಗವದ್ಭಕ್ತರು ಮತ್ತು ವೇದೇಶ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಜರಿದ್ದರು.
ಯಮನೂರ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಮನೂರ ಗ್ರಾಮದಲ್ಲಿ ಫೆ. 4ರಿಂದ 26ರವರೆಗೆ ಜಾತ್ರೆಯ ನಡೆಯುತ್ತಿದ್ದು ಈ ಸಮಯದಲ್ಲಿ ಪ್ರಾಣಿಬಲಿ ಹಾಗೂ ಮಾಂಸ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ್ ಆದೇಶಿಸಿದ್ದಾರೆ. ಫೆ. 24ರಿಂದ 26ರವರೆಗೆ ಮಧ್ಯರಾತ್ರಿವರೆಗೆ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿ ಸೂಕ್ತ ಬಂದೊಬಸ್ತ್ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಆಯುಕ್ತರು ಯಾದಗಿರಿ, ಉಪನಿರ್ದೇಶಕರು, ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು ಇಲಾಖೆ ಯಾದಗಿರಿ ಹಾಗೂ ತಹಶೀಲ್ದಾರರು ಸುರಪುರ ಇವರಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ನಾಳೆ ಮಾದಕ ವಸ್ತು
ವಿಚಾರ ಸಂಕಿರಣ
ಯಾದಗಿರಿ: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಸರ್ಕಾರಿ ಪದವಿ ಕಾಲೇಜು ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ “ÈÚߥÚÀ ಹಾಗೂ ಮಾದಕ ವಸ್ತುಗಳ ¥ÚßÎÚ°ÂzÛÈÚßVÚ×Úß’ ಕುರಿತು ಫೆ.26 ರಂದು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಉದ್ಫಾಟಿಸುವರು. ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಪ್ರಹ್ಲಾದ.ಬಿ. ಜೋಶಿ ಭಾಗವಹಿಸುವರು. ಅಶೋಕ ವಾಟ್ಕರ್, ಮಲ್ಲಾರೆಡ್ಡಿ ಪಾಟೀಲ ಭಾಗವಹಿಸುವರು.
ಶಿಕ್ಷಕ ಪ್ರಶಸ್ತಿ ಪ್ರದಾನ
ಗುರುಮಠಕಲ್:ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ (ರಿ), ಗುರುಮಠಕಲ್ ವತಿಯಿಂದ 2013-14ನೇ ಸಾಲಿನ ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು. ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಒಟ್ಟು 25 ಜನ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

