ಕೋಲ್ಡ್ ಸ್ಟೋರೇಜ್ ಅಕ್ರಮ ಬಹಿರಂಗ
ಕ.ಪ್ರ. ವಾರ್ತೆ, ಗುಲ್ಬರ್ಗ, ಫೆ.26
ಮಹ್ಮದ್ ಇಲಿಯಾಸ್ ಎಂಬುವವರು ಒಂದೂವರೆ ದಶಕದ ಹಿಂದೆಯೇ ಸರ್ಕಾರದ ವಿವಿಧ ಸಂಸ್ಥಗಳನ್ನು ಯಾಮಾರಿಸಿ ಮಾಡಿರುವ ಅಕ್ರಮಗಳಿವು. ಆದರೆ ವಿಚಿತ್ರವೆಂದರೆ ಇಂದಿಗೂ ಅವರ ವಿರುದ್ಧ ಯಾವ ಹಂತದಲ್ಲಿಯೂ ಕ್ರಮಗಳು ಜರುಗಿಲ್ಲ. ಇವರು ಸುಳ್ಳು ದಾಖಲೆ ಸೃಷ್ಟಿಸಿ ಹುಟ್ಟುಹಾಕಿರುವ ಕೋಲ್ಡ್ ಸ್ಟೋರೇಜ್ನಿಂದ 2013ರ ಡಿ.12ರಂದು ಅಮೋನಿಯಂ ನೈಟ್ರೇಟ್ ದ್ರಾವಣ ಸೋರಿಕೆಯಾಗಿ ತೊಂದರೆ ಸಂಭವಿಸಿದರೂ ಯಾರೂ ಕ್ಯಾರೆ ಎಂದಿಲ್ಲ ಎಂದು ಹೋರಾಟಗಾರ, ಮಾಜಿ ಸಚಿವ ಎಸ್.ಕೆ. ಕಾಂತಾ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಮೇತ ಕೋಲ್ಡ್ ಸ್ಟೋರೇಜ್ನ ಬಿಸಿ ಬಿಸಿ ಅಕ್ರಮಗಳನ್ನು ಬಯಲಿಗೆಳೆದ ಅವರು, 'ನಾನು ಕೋಲ್ಡ್ ಸ್ಟೋರೇಜ್ ಸುತ್ತಮುತ್ತಲಿನ ಹತ್ತುಹಲವು ಸ್ವರೂಪದ ಅಕ್ರಮಗಳ ಕುರಿತು 2000 ಪುಟಗಳ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಸೋರಿಕೆಯಾಗಿದೆ. ಜೊತೆಗೇ ಕಾನೂನು ಕಟ್ಟಳೆಗಳನ್ನೇ ಉಲ್ಲಂಘನೆ ಮಾಡಲಾಗಿದೆ' ಎಂದು ದೂರಿದರು.
ಜೌಣ ಮೆನವೇಕೆ?: ಸ್ಥಳೀಯ ಮಹಾನಗರ ಪಾಲಿಕೆ, ಜೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಹೆಸರು ಬಳಸಿಕೊಂಡು ಕೋಲ್ಡ್ ಸ್ಟೋರೇಜ್ ಮಾಲೀಕರು ಅಕ್ರಮ ನಡೆಸಿದ್ದರೂ ಸರ್ಕಾರದ ಇವೆಲ್ಲ ಸಂಸ್ಥೆಗಳು ಜಾಣ ಮೌನ ವಹಿಸಿದ್ದು ದುರಂತವಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದರು.
ಡಿ.26ರಂದು ಕಾಂತಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕೋಲ್ಡ್ ಸ್ಟೋರೇಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಮತ್ತೀಗ ದಾಖಲೆಗಳ ಸಮೇತ ನಕಲಿ ಪ್ರಮಾಣ ಪತ್ರಗಳ ವಿಚಾರ ಬಹಿರಂಗಪಡಿಸುವ ಮೂಲಕ ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಎಚ್ಚರಿಸುವ ಯತ್ನ ಮಾಡಿದ್ದಾರೆ. ವಾರದೊಳಗೆ ಶೈತ್ಯಾಗಾರ ಬಂದ್ ಮಾಡಿ ಕಾನೂನು ಕ್ರಮ ಜರುಗಿಸದಿದ್ದರೆ ಧರಣಿ ಕೂಡುವುದಾಗಿ ಕಾಂತಾ ಎಚ್ಚರಿಸಿದರು.
ಎನ್ಎ ಆದೇಶ ರದ್ದು ಮಾಡ್ಲಿ: ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಸದರಿ ಭೂಮಿಯ ಎನ್ಎ ಆದೇಶ ರದ್ದುಮಾಡಬೇಕು. ಕಾನೂನೇ ದುರ್ಬಳಕೆಯಾದರೂ ಯಾಕೆ ಸುಮ್ಮನಿದ್ದಾರೆ. ಹಲವಾರು ರಸಾಯನಿಕಗಳನ್ನು ಉಪಯೋಗಿಸುವ ಕೋಲ್ಡ್ ಸ್ಟೋರೇಜ್ ವಸತಿ ಉದ್ದೇಶಕ್ಕಾಗಿರುವ ಜಮೀನಿನಲ್ಲಿ ಸ್ಥಾಪನೆಯಾಗಿದೆ. ಇದು ಕ್ರಿಮಿನಲ್ ಅಪರಾಧ. ಇದಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕ್ರಿಮಿನಲ್ ದಾವೆ ಹೂಡಿ, ಸದರಿ ಬೆಳವಣಿಗೆಯ ತನಿಖೆಗೆ ಮುಂದಾಗಬೇಕು ಎಂದರು.
ದೊಡ್ಡ ಶೈತ್ಯಾಗಾರ: ಮೊಹ್ಮದ್ ಇಲಿಯಾಸ್ ಎಂಬುವವರು ಬೆಂಗಳೂರಿನ ಕೃಷಿ ಮಾರುಕಟ್ಟೆ ಮಂಡಳಿಯಿಂದ ಪರವಾನಗಿ ಪಡೆದದ್ದು 17,080 ಘನ ಮೀಟರ್ ಸಾಮರ್ಥ್ಯದ ಶೈತ್ಯಾಗಾರ ನಿರ್ಮಾಣಕ್ಕೆ. ಜೆಸ್ಕಾಂಗೂ ಈ ಮಾಹಿತಿ ನೀಡಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶೈತ್ಯಾಗಾರ ನಿರ್ಮಾಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿಯೇ ಅನುಮತಿ ನೀಡಬೇಕು. ಆದರಿಲ್ಲಿ ಮಂಡಳಿ ತಮ್ಮ ಪಾತ್ರ ನಿಭಾಯಿಸಿಲ್ಲ.
ಕಾರದಪುಡಿ ಯಂತ್ರಕ್ಕಾಗಿ ಅನುಮತಿ ಪಡೆದು ನಂತರ, 10 ಸಾವಿರ ಚದರ ಅಡಿಯಲ್ಲಿ ತರಕಾರಿ ಇಡಲು ಶೈತ್ಯಾಗಾರ ನಿರ್ಮಿಸಲಾಗಿದೆ. ಇದಾದ ನಂತರ ದೊಡ್ಡ ಪ್ರಮಾಣದಲ್ಲಿ ಮಾಂಸ ಸಂಸ್ಕರಣೆ ಹಾಗೂ ಶೈತ್ಯಾಗರ ಸ್ಥಾಪಿಸಲಾಗಿದೆ ಎಂದು ಕಾಂತಾ ಹೇಳಿದರು.
ಈ ಕೋಲ್ಡ್ ಸ್ಟೋರೇಜ್ನಿಂದ ಅಮೋನಿಯಂ ದ್ರಾವಣ ಸೋರಿಕೆಯಾಗಿ ಆತಂಕ ಉಂಟಾಗಿತ್ತು. ಆಗ ಪರಿಶೀಲನೆ ನಡೆಸಿರುವ ಕೈಗಾರಿಕೆಗಳ ಸಹಾಯಕ ನಿರ್ದೇಶಕರು ಸಹ ಅನೇಕ ದೋಷಗಳನ್ನು ಇಲ್ಲಿ ಪಟ್ಟಿ ಮಾಡಿದ್ದಾರೆಯೇ ಹೊರತು, ಕ್ರಮ ಜರುಗಿಲ್ಲ. ಕ್ರಮಕ್ಕೆ ಆಗ್ರಹಿಸಿದ ನಂತರ ಅನೇಕ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅದ್ಯಾಕೆ ಮೌನವಾಗಿದ್ದಾರೋ ಎಂದು ಕಾಂತಾ ಅಚ್ಚರಿ ಪಟ್ಟರು.
ಅಕ್ರಮ- 1
ಹೀರಾಪುರ ಸರ್ವೆ ನಂಬರ್ 3/3 ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ(ಎನ್ಎ) ಮಾಡಿಕೊಂಡು ಮನೆ ಕಟ್ಟದೆ ಶೈತ್ಯಾಗಾರ(ಕೋಲ್ಡ್ ಸ್ಟೋರೇಜ್) ನಿರ್ಮಾಣ ಮಾಡಲಾಗಿದೆ. ಮಹ್ಮದ್ ಇಲಿಯಾಸ್ ಎಂಬುವವರು ಒಂದೂವರೆ ದಶಕದ ಹಿಂದೆಯೇ ವಸತಿ ಉದ್ದೇಶಕ್ಕಾಗಿ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎನ್ಎ ಮಾಡಿಸಿಕೊಂಡಿದ್ದರು. ಹಾಗಾಗಿ ಕರ್ನಾಟಕ ಭೂಕಂದಾಯ ಕಾಯಿದೆ- 1964 ಉಲ್ಲಂಘನೆಯಾಗಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಜಾಣ ಕುರುಡಾಗಿದೆ.
ಅಕ್ರಮ- 2
ಮಂಡಲ ಪಂಚಾಯ್ತಿ ನಂದಿಕೂರಿನಿಂದ ಪಡೆದ ಬಾಕಿ ರಹಿತ ಪ್ರಮಾಣಪತ್ರ, ಕರ ಪಾವತಿ ರಶೀದಿ, ಕಟ್ಟಡ ಪರವಾನಗಿ ಮತ್ತು ರೂಪುರೇಖೆ ನಕಾಶೆ ಇವೆಲ್ಲವೂ ನಾವು ಕೊಟ್ಟಿದ್ದಲ್ಲ, ನಕಲು ದಾಖಲೆಗಳು ಎಂದು ನಂದಿಕೂರ್ ಪಿಡಿಒ 2014ರ ಫೆ.6ರಂದೇ ಲಿಖಿತವಾಗಿ ನೀಡಿದ್ದಾರೆ.
ಅಕ್ರಮ- 3
ಗುಲ್ಬರ್ಗ ಮಹಾನಗರ ಪಾಲಿಕೆಯಿಂದ ಮಟನ್ ಪ್ರೋಸೆಸಿಂಗ್ ಮತ್ತು ತರಕಾರಿ ಕೋಲ್ಡ್ ಸ್ಟೋರೇಜ್ಗಳೆಂದು ಪಡೆದ ಲೈಸನ್ಸ್ಗಳು ನಕಲಿ.. ಇವು ತಮ್ಮ ಸಹಿ ಅಲ್ಲವೆಂದು ಪಾಲಿಕೆಯವರೇ ಲಿಖಿತ ಪತ್ರ ನೀಡಿದ್ದಾರೆ.
ಅಕ್ರಮ- 4
ನಕಲಿ ದಸ್ತಾವೇಜುಗಳನ್ನು ಬಳಸಿಯೇ ಜೆಸ್ಕಾಂನಿಂದ ಕರೆಂಟ್ ಪಡೆದದ್ದು, ಜೊತೆಗೇ ತೋಟಗಾರಿಕೆ ಇಲಾಖೆಯಿಂದ 1.15 ಕೋಟಿ ಸಹಾಯಧನ ಪಡೆಯಲಾಗಿದೆ. ಇದಕ್ಕಾಗಿ ಜೆಸ್ಕಾಂ ನೀಡಿದೆ ಎಂದು ನಕಲಿ ಪತ್ರ ಬಳಸಲಾಗಿದೆ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

