ಗುಲ್ಬರ್ಗಾ

ಸಮಾನತಾ ತತ್ತ್ವದ ಮೂಲ ಬೇರು ಬಸವಣ್ಣ

Published On :

ಶಹಾಪುರ: ಹನ್ನೆರಡನೆಯ ಶತಮಾನದಲ್ಲಿ ಕಟ್ಟಿದ ಮನುಷ್ಯ ಸರಿಸಮಾನತಾ ತತ್ತ್ವದ ಚಳವಳಿಯ ಬೇರು ಹಾಗೂ ಉಸಿರು ಬಸವಣ್ಣನವರೇ ಆಗಿದ್ದಾರೆ. ಕೆಲವು ಸ್ವಹಿತಾಸಕ್ತ ವ್ಯಕ್ತಿಗಳು ಬಸವಣ್ಣನವರನ್ನು ಮರೆತಿದ್ದಾರೆ. ತಮ್ಮ ತಮ್ಮ ಜಾತಿಗೆ ಶರಣರನ್ನು ಬಳಸಿಕೊಂಡು ಶರಣ ಧರ್ಮಕ್ಕೆ ಪೆಟ್ಟುಕೊಡುತ್ತಿದ್ದಾರೆ. ಕಲ್ಯಾಣದಲ್ಲಿ ಉಂಟಾದ ಸಾಮಾಜಿಕ ಹಾಗೂ ಧಾರ್ಮಿಕ ಬದಲಾವಣೆಗೆ ಮೂಲ ಬಸವಣ್ಣ. ಬಸವಣ್ಣನವರು ಇಲ್ಲದ ಕಲ್ಯಾಣ ಸಮಾಜವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವೆಂದು ಲಿಂಗಸೂಗೂರಿನ ಬಸವ ತತ್ತ್ವ ಅನುಭಾವಿ ತಿಮ್ಮನಗೌಡ ಚಿಲ್ಕಾರಾಗಿ ಅಭಿಪ್ರಾಯಪಟ್ಟರು.
  ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು-28ರ ಸಭೆಯಲ್ಲಿ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಐಶ್ವರ್ಯ, ಅಂತಸ್ತು, ವಿದ್ಯೆಯೇ ಬಹಳ ದೊಡ್ಡದು ಎಂಬ ಭ್ರಮೆಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಮನುಷ್ಯನ ಮನ ಬಹಿರಂಗ ಆಡಂಬರದ ಕಡೆಗೆ ಜಾಸ್ತಿ ಒಲವು ನೀಡುತ್ತ ಅಂತರಂಗದ ಸತ್ಯವನ್ನು ಮರೆತಿದೆ. ಮಾಯಾ ಪ್ರಪಂಚದ ನಿಲುವು ಅರಿಯಬೇಕಾದರೆ ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕಾಗಿದೆ. ವಚನಗಳ ಓದು ಮನುಷ್ಯನ ಅಂತರ್ಮುಖಿ ಜೀವನದ ಚಿಂತನೆಗೆ ಹಚ್ಚುತ್ತದೆ. ಬಹಿರಂಗ ಪ್ರಪಂಚದಲ್ಲಿ ಕಾಣುವ ಸುಖ ಸಂತೋಷಕ್ಕಿಂತ, ಆತ್ಮ ಸಂತೋಷವನ್ನು ಹೆಚ್ಚಿಸುವ, ಮನ, ಬುದ್ಧಿ, ಭಾವಗಳಿಗೆ ಅರಿವನ್ನು ನೀಡುವ ಸದಾ ಆನಂದದಲ್ಲಿರುವಂತೆ ನೋಡಿಕೊಳ್ಳುವ ವಚನಗಳು ನಮಗೆ ದಾರಿ ತೋರಿಸುತ್ತವೆ ಎಂದು ನುಡಿದರು.
  ಯಾವ ನಂಬಿಕೆಗಳು ವಿಚಾರದ ಒರೆಗಲ್ಲಿಗೆ,ವೈಜ್ಞಾನಿಕ ದೃಷ್ಟಿಕೋನಕ್ಕೆ ಹಚ್ಚಿದರೂ ಅವು ಪಾರಾಗುತ್ತವೋ ಅಂಥ ನಂಬಿಕೆಗಳು ಇಂದು ಅವಶ್ಯಕ. ದೇಶದ ಪುರೋಹಿತಶಾಹಿ ಹಬ್ಬಿಸಿದ ಮೌಢ್ಯದ ವೈದಿಕ ವೈರಸ್ಗೆ ಬಲಿಯಾಗಿ ಸಮಾಜಹಲವಾರು ಮಾನಸಿಕ ರೋಗಗಳಿಂದ ಬಳಲುತ್ತಿದೆ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿದರು.
  ಕೆಲವೇ ಜನಗಳ ಸ್ವತ್ತಾದ ಬಸವಣ್ಣ ಯಾರೊಬ್ಬರೂ ಒತ್ತಾಯಿಸದಿದ್ದರೂ ನಮ್ಮೆಲ್ಲರೊಳಗೆ ಅಂತರ್ಗತವಾಗಿ ಬೆರೆತಿದ್ದಾನೆ. ಅವರ ಆಚಾರ-ವಿಚಾರಗಳು ಎಂದಿಗೂ ಮಾನ್ಯವಾದುದಾಗಿವೆ. ಜಾತಿ, ಮತ, ಧರ್ಮವನ್ನು ಮುರಿದ ಬಸವ ಮಾರ್ಗ ಇಂದು ಕೆಲವೇ ಜನಗಳ ಸ್ವತ್ತಾಗಿರುವುದು ವಿಷಾದನೀಯವೆಂದು ಡಾ.ಮರೆಪ್ಪ ನಾಟೇಕಾರ ಹೇಳಿದರು.
  ಯಮನೂರೇಶ ಬಿರಾದಾರ, ರಾಜು ಶೆಟ್ಟಿ, ಡಾ.ಮರೆಪ್ಪ ನಾಟೇಕಾರರನ್ನು ಬಸವ ಮಾರ್ಗ ಪ್ರತಿಷ್ಠಾನದ ವತಿಯಿಂದ ಸತ್ಕರಿಸಲಾಯಿತು. ರಾಜಕೀಯ ಧುರೀಣ ಮಲ್ಲಣ್ಣ ಸಾಹುಮಡ್ಡಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಸಾಲಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.