ಡಾ. ಮೊಹಂತಿಗೆ ವೈದ್ಯಶ್ರೀ, ಡಾ. ವಸುಂಧರಾ ಶ್ರೇಷ್ಠ ವೈದ್ಯ ಸಾಹಿತಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜ.1
ಇಲ್ಲಿನ ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನವು ಸ್ವಾಸ್ಥ್ಯ ಸಂಪದ ಹಾಗೂ ವೈದ್ಯ ಸಾಹಿತಿಗಳಿಗೆ ಪುರಸ್ಕಾರ ನೀಡುವುದರೊಂದಿಗೆ 2014ರ ಮೊದಲ ದಿನವಾದ ಬುಧವಾರ ತನ್ನ 14ನೇ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಪ್ರತಿಷ್ಠಾನದ 2013ನೇ ಸಾಲಿಗೆ ನೀಡಿರುವ ವೈದ್ಯಶ್ರೀ ಪ್ರಶಸ್ತಿಯನ್ನು ಮುಂಬೈನ ಕೆ.ಜಿ. ಸೋಮಯ್ಯ ಮೆಡಿಕಲ್ ಕಾಲೇಜಿನ ಟಿಬಿ ಹಾಗೂ ಚೆಸ್ಟ್ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಕೆ.ಸಿ. ಮೊಹಂತಿ ಅವರಿಗೆ ಹಾಗೂ 2012ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞೆ ವೈದ್ಯ ಲೇಖಕಿ ಡಾ. ವಸುಂಧರಾ ಭೂಪತಿ ಅವರಿಗೆ ನೀಡಿ ಗೌರವಿಸಿದರು. ವೈದ್ಯಶ್ರೀ ಹಾಗೂ ವೈದ್ಯ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ವೈದ್ಯ ವಿದ್ಯಾರ್ಥಿ ವೇತನ: ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ 2013- 14ನೇ ಸಾಲಿನ ವೈದ್ಯ ವಿದ್ಯಾರ್ಥಿ ವೇತನದ ಫಲಾನುಭವಿಗಳಾಗಿ ಬೀದರ್ ಸರ್ಕಾರಿ ಮೆಡಿಕಲ್ ಕಾಲೇಜಿನ ಸುಕನ್ಯಾ ಬಿರಾದಾರ, ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾ ಎಂ.ಎಲ್. ಹಾಗೂ ಹುಬ್ಬಳ್ಳಿಯ ಕಿಮ್ಸ್ ವಿದ್ಯಾರ್ಥಿ ಶಂಕರ ಗೆಜ್ಜಿ ಅವರಿಗೂ ಇದೇ ಸಮಾರಂಭದಲ್ಲಿ ಮೊದಲ ತಿಂಗಳ ವಿದ್ಯಾರ್ಥಿ ವೇತನ ಹಣವನ್ನು ನೀಡಿ ಶುಭ ಕೋರಲಾಯ್ತು. ಗ್ರಾಮೀಣ ಭಾಗದ, ಬಡ ರೈತಾಪಿ ಕುಟುಂಬದ ಹಾಗೂ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಈ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2013 ಅಕ್ಟೋಬರ್ನಿಂದಲೇ ಪ್ರತಿ ತಿಂಗಳು ತಲಾ 1 ಸಾವಿರ ವೈದ್ಯ ವಿದ್ಯಾರ್ಥಿ ವೇತನವನ್ನು ಅವರ ಎಂಬಿಬಿಎಸ್ ಅಧ್ಯಯನದ ನಾಲ್ಕೂವರೆ ವರ್ಷದ ಅವಧಿಯವರೆಗೆ ನೀಡಲಾಗುವುದು.
ಆರೋಗ್ಯ, ಸಂಸ್ಕೃತಿ ರಕ್ಷಣೆ ಜಾಗೃತಿ: ಪಂಡಿತ ರಂಗಮಂದಿರದಲ್ಲಿ ಜ.1ರ ಇಡೀ ದಿನ ಆರೋಗ್ಯ ಕಾಳಜಿ, ಸಂಸ್ಕೃತಿ ರಕ್ಷಣೆ ಸಮಾರಂಭಗಳೇ ನಡೆದವು. ಪ್ರತಿಷ್ಠಾನದಿಂದ ಆಯೋಜಿಸಿದ್ದ ಬೆಳಗಿನ ಸ್ವಾಸ್ಥ್ಯ ಸಂಪದದಲ್ಲಿ ಡಾ. ಮೋಹಂತಿ ಅವರು ಶ್ವಾಸಕೋಶ ಸಂಬಂಧಿ ರೋಗಗಳ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು.
ಬದಲಾಗುತ್ತಿರುವ ಬದುಕಿನ ಶೈಲಿ- ಆಹಾರ ಪದ್ಧತಿ ವಿಷಯವಾಗಿ ಡಾ. ವಸುಂಧರಾ ಉಪನ್ಯಾಸ ನೀಡಿ ಗುಲ್ಬರ್ಗ ಜನರನ್ನು ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಲು ಕರೆ ನೀಡಿದರು. ಪ್ರತಿಷ್ಠಾನದ ಡಾ. ಶಂಕರ್, ಅಂಬಿಕಾ ಶಂಕರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಸ್.ಎಸ್. ಹಿರೇಮಠ ನಿರೂಪಿಸಿದರು. ಸದಾನಂದ ಮಹಾಗಾಂವ್ಕರ್ ಸೇರಿದಂತೆ ಅನೇಕ ಆಸಕ್ತರು ಸೇರಿದ್ದರು.
ಪಂಡಿತ ರಂಗಮಂದಿರದಲ್ಲಿ ಶುಭಾಂಗಿ ಅವರ ತಂಡದ ಗೀತ ನೃತ್ಯ ಸಭಿಕರ ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

