ಗುಲ್ಬರ್ಗಾ

ಚತುಷ್ಪಥ ರಸ್ತೆ ಅವ್ಯವಸ್ಥೆ; ದೂರು

Published On :

ರಾಯಚೂರು: ನಗರದ ಚತುಷ್ಪಥ ರಸ್ತೆಯಲ್ಲಿ ರಸ್ತೆ ವಿಭಜಕಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಅದೇ ರೀತಿ ನಗರಸಭೆಯಿಂದ ಈ ರಸ್ತೆಯಲ್ಲಿಯೇ ನೀರಿನ ಪೈಪ್‌ಲೈನ್ ನಿರ್ವಹಣೆಯಿಂದಾಗುತ್ತಿರುವ ಲೋಪದಿಂದ ರಸ್ತೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್‌ಗೆ ಜನಸಂಗ್ರಾಮ ಪರಿಷತ್ ದೂರು ಸಲ್ಲಿಸಿದೆ.
ಈ ಕುರಿತು ನಗರದಲ್ಲಿ ಸಚಿವರಿಗೆ ದೂರು ಸಲ್ಲಿಸಿರುವ ಪರಿಷತ್ತಿನ ಪ್ರಮುಖರು, ನಗರದಲ್ಲಿ ಎಸ್.ಪಿ. ಕಚೇರಿಯಿಂದ ಆರ್ಟಿಒ ವೃತ್ತದವರೆಗೆ ನಿರ್ಮಿಸುತ್ತಿರುವ ಚತುಷ್ಪಥ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕವನ್ನು ಪ್ರತಿಷ್ಟಿತ ಹೋಟೆಲ್ ಮತ್ತು ಪೆಟ್ರೋಲ್ ಬಂಕ್‌ಗಳ ಬಳಿ ಮಾತ್ರ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.
ಸಂಚಾರಕ್ಕೆ ತೊಂದರೆ: ಆಡಳಿತದ ಈ ರೀತಿಯ ಕಾರ್ಯವೈಖರಿಯಿಂದ ದಿನವೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನಿಗದಿತ ಸ್ಥಳದಲ್ಲಿ ಮಾತ್ರ ರಸ್ತೆ ವಿಭಜಕಗಳನ್ನು ಕಡಿತಗೊಳಿಸಲು ಆದೇಶಿಸಬೇಕೆಂದು ಒತ್ತಾಯಿಸಿದರು.
ಕಳೆದ ಮೂರು ವರ್ಷದಿಂದ ಸದರಿ ರಸ್ತೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದರೂ ನಗರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳ ಅಸಹಕಾರದಿಂದ ಇಲ್ಲಿಯವರೆಗೂ ಪೂರ್ಮಗೊಳಿಸಿ ಸಾರ್ವಜನಿಕರಿಗೆ ರಸ್ತೆಯನ್ನು ಬಿಟ್ಟುಕೊಟ್ಟಿಲ್ಲ. ಸದರಿ ರಸ್ತೆಯಲ್ಲಿರುವ ಕುಡಿವ ನೀರಿನ ಪೈಪ್‌ಲೈನ್ ನಿರ್ವಹಣೆಯಲ್ಲಿ ಆಗಿರುವ ಲೋಪದಿಂದ ಚತುಷ್ಪತ ರಸ್ತೆಯ ಹಲವಾರು ಕಡೆ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಿದರು.
ಪೈಪ್‌ಲೈನ್ ನಿರ್ವಹಣೆಗೆ ಆದೇಶ: ರಸ್ತೆಯ ಪಕ್ಕದಲ್ಲೇ ಹಲವಾರು ಕಡೆ ವಿದ್ಯುತ್ ಟಿ.ಸಿ.ಗಳು ಇದ್ದು ನಾಗರಿಕರು ಅಂತಹ ಸ್ಥಳದಲ್ಲಿ ಸಾಗುವುದು ಅಪಾಯಕಾರಿ. ಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ವಿಭಜಕಗಳನ್ನು ಅವಶ್ಯವೆನಿಸಿದ್ದಲ್ಲಿ ಮಾತ್ರ ಕಡಿತಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು ಹಾಗೂ ನಗರಸಭೆಯವರಿಗೆ ನೀರಿನ ಪೈಪ್‌ಲೈನ್‌ನನ್ನು ಸರಿಯಾಗಿ ನಿರ್ವಹಣೆ ಮಾಡಲು ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಡಾ. ರಝಾಕ್ ಉಸ್ತಾದ್, ವೆಂಕಟೇಶ ಯಾದವ್, ಅಕ್ಬರ ಹುಸೇನ್ ನಾಗುಂಡಿ, ಕೆ.ಎಸ್. ಸೈಯದುದ್ದೀನ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.