ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ: ಖರ್ಗೆ
ಕ.ಪ್ರ. ವಾರ್ತೆ, ಗುರುಮಠಕಲ್, ಜ. 6
ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನನ್ನು ಆಯ್ಕೆ ಮಾಡಿದ ಮತದಾರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲ ಗ್ರಾಮಗಳಿಗೆ ಮೂಲ ಸೌಕರ್ಯ: ನಾನು ಈ ಭಾಗದಲ್ಲಿ ಪ್ರಮುಖವಾಗಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಿದ್ದೇನೆ. ಮೊದಲ ಬಾರಿ ಶಾಸಕನಾದಾಗ ಗುರುಮಠಕಲ್ ಕ್ಷೇತ್ರದಲ್ಲಿ ಐದಾರು ಗ್ರಾಮಗಳಲ್ಲಿ ಮಾತ್ರ ವಿದ್ಯುತ್ ಸೌಕರ್ಯವಿತ್ತು. ಕಳೆದ 35 ವರ್ಷಗಳಲ್ಲಿ ಎಲ್ಲ ಗ್ರಾಮಗಳಿಗೆ ಹಾಗೂ ತಾಂಡಾಗಳಿಗೆ ವಿದ್ಯುತ್, ರಸ್ತೆ, ನೀರು, ಶಾಲೆ, ಆಸ್ಪತ್ರೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಿದ್ದೇನೆ ಎಂದರು.
ಹತ್ತಿಕುಣಿ ಜಲಾಶಯದ ಹಳ್ಳಕ್ಕೆ ಹಲವಾರು ಬ್ಯಾರೇಜ್ಗಳ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಿ ಕುಡಿವ ನೀರು ಹಾಗೂ ರೈತರಿಗೆ ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಿದೆ. ದೇಶದ ಜನರಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಬಡಜನತೆಗೆ 3ಕ್ಕೆ 1 ಕೆಜಿ ಅಕ್ಕಿ ನೀಡಲಾಗುತ್ತಿದೆ. ಅದು ರಾಜ್ಯದಲ್ಲಿ 1ಕ್ಕೆ ಕೆಜಿ ಅಕ್ಕಿ ನೀಡುವ ಮೂಲಕ ಬಡವರ ಹಸಿವು ನೀಗಿಸಲು ಮುಂದಾಗಿದೆ ಎಂದು ಹೇಳಿದರು.
ಸನ್ನತಿ ಏತ ನೀರಾವರಿಗೆ ಕೋಟ್ಯಂತರ ಹಣ ಒದಗಿಸಲಾಗಿದೆ. ಅದರಂತೆ ಹತ್ತಿಕುಣಿ ಜಲಾಶಯದ ಕಾಲುವೆಗಳ ಅಭಿವೃದ್ಧಿಗಾಗಿ 6.50 ಕೋಟಿ ಬಿಡಗುಡೆ, ಕೃಷ್ಣಾ ಮೇಲ್ದಂಡೆ ಯೋಜನೆ ಎಡದಂಡೆ ಕಾಲುವೆ ವಿಸ್ತಾರಕ್ಕಾಗಿ 5,500 ಕೋಟಿ ನೀಡಲಾಗಿದೆ ಎಂದು ತಿಳಿಸಿದರು. ಸರ್ಕಾರದ ಯೋಜನೆಗಳ ಲಾಭವನ್ನು ಜನತೆಗೆ ತಲುಪಿಸಲು ಆಯಾ ಭಾಗದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಜನರಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂದರು.
ಕ್ಷೇತ್ರದಲ್ಲಿ 29 ಭವನ ನಿರ್ಮಾಣ: ಗುರುಮಠಕಲ್ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಒಟ್ಟು 29 ಡಾ. ಅಂಬೇಡ್ಕರ್ ಭವನ, ಡಾ. ಬಾಬು ಜಗಜೀವನರಾಂ ಹಾಗೂ ವಾಲ್ಮೀಕಿ ಭವನಗಳನ್ನು ಅಂದಾಜು 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿ ಚುನಾವಣೆಯಲ್ಲೂ ಪ್ರತಿಪಕ್ಷದವರು ಮತದಾರರ ಮುಂದೆ ವಾಸ್ತವಿಕ ಸ್ಥಿತಿ ಅರಿಯದೇ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಮತದಾರರು ಅದಕ್ಕೆ ಕಿವಿಗೂಡದೆ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು. 6 ಜಿಲ್ಲೆಗಳ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಸಂವಿಧಾನದ 371(ಜೆ)ನೇ ಕಲಂ ತಿದ್ದುಪಡಿ ತರುವ ಮೂಲಕ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಹಲವಾರು ಗ್ರಾಮಗಳಿಂದ ಆಗಮಿಸಿದ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆದ್ಯತೆ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಸದಾ ಅಭಿವೃದ್ಧಿ ಚಿಂತನೆಗಳಲ್ಲಿರುವ ಡಾ. ಖರ್ಗೆ ಅವರನ್ನು ದೇಶಕ್ಕೆ ಪರಿಚಯ ಮಾಡಿಕೊಟ್ಟ ಕೀರ್ತಿ ಗುರುಮಠಕಲ್ ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ. ಬರುವ ದಿನಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಲಾಗುವದು ಎಂದರು.
ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಗುರುಮಠಕಲ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಖರ್ಗೆ ಅವರ ಮಾರ್ಗದರ್ಶನದಲ್ಲಿ ಶ್ರಮಿಸುತ್ತಿದ್ದೇನೆ ಎಂದರು.
ವೇದಿಕೆ ಮೇಲೆ ಮಾಜಿ ಎಂಎಲ್ಸಿ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಮಹಿಪಾಲರಡ್ಡಿ ಪಾಟೀಲ್, ಜಿಪಂ ಅಧ್ಯಕ್ಷೆ ಭೀಮಮ್ಮ ಚಪೆಟ್ಲಾ, ಉಪಾಧ್ಯಕ್ಷೆ ಚನ್ನಬಸ್ಸಮ್ಮ ಸೋಮಣ್ಣೋರ್, ತಾಪಂ ಅಧ್ಯಕ್ಷೆ ಶೋಭಾರಾಣಿ, ಶರಣಮ್ಮ ಕವಾಲ್ದಾರ, ಚಿದಾನಂದಪ್ಪ ಕಾಳೆಬೆಳಗುಂದಿ, ಶ್ರೇಣಿಕಕುಮಾರ ದೋಖಾ, ಜಿ.ನಾರಾಯಣರಾವ್, ಲಕ್ಷ್ಮೀಕಾಂತ ತಮ್ಮನೋರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

