ಸ್ವಾರ್ಥ ಸಾಧನೆಗೆ ಸಂಘಟನೆಗಳ ತೆಗಳಿಕೆ: ಐಜಿಪಿ
ಗುಲ್ಬರ್ಗ: ಪಾತಕಿ ಮುನ್ನಾ ಹಾಗೂ ಪೊಲೀಸ್ ಗುಂಡಿನ ಚಕಮಕಿ ಪ್ರಸಂಗದಲ್ಲಿ ಪೊಲೀಸರ ಶೌರ್ಯ, ಧೈರ್ಯ ಮೆಚ್ಚಿ ಪ್ರೋತ್ಸಾಹಿಸುವ ಬದಲು ಕೆಲವು ಸಂಘಟನೆಗಳು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರದಲ್ಲಿವೆ ಎಂದು ಆಕ್ಷೇಪಿಸಿರುವ ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಮೊಹ್ಮದ್ ವಜೀರ್ ಅಹ್ಮದ್, ಸಂಘಟನೆಗಳ ಆರೋಪಗಳಿಗೆ ಕಿವಿಗೊಡದೆ ರೌಡಿಗಳ ನಿಗ್ರಹದ ವಿಷಯದಲ್ಲಿನ ಪೊಲೀಸರ ಕಾರ್ಯಗಳಿಗೆ ಎಂದಿನಂತೆ ಸಹಕರಿಸಿ ಎಂದು ಗುಲ್ಬರ್ಗ ನಗರ ಹಾಗೂ ಜಿಲ್ಲೆಯ ಜನತೆ ಮನವಿ ಮಾಡಿದ್ದಾರೆ.
ಜ.8ರ ರೌಡಿ- ಪೊಲೀಸ್ ಗುಂಡಿನ ಕಾಳಗದ ನಂತರ ಮಾಧ್ಯಮಗಳೊಂದಿಗೆ ಅಂತರ ಕಾಯ್ದುಕೊಂಡಿದ್ದ ಐಜಿಪಿ ವಜೀರ್ ಅಹ್ಮದ್ ಶನಿವಾರ 2 ಪುಟಗಳ ವಿಸ್ತೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯಲ್ಲಿ ಹತನಾಗಿರುವ ಪಾತಕಿ ಮುನ್ನಾ ಬಯೋಡೇಟಾ ನೀಡಿದ್ದಲ್ಲದೆ, ತಮ್ಮತ್ತ ವಿನಾಕಾರಣ ಬೆರಳು ಮಾಡುತ್ತಿರುವ ಸಂಘಟನೆಗಳಿಗೂ ಹೇಳಿಕೆ ಮೂಲಕವೇ ತಿವಿಯುವ ಯತ್ನ ಮಾಡಿದ್ದಾರೆ.
ಐಜಿಪಿ ವಜೀರ್ ಅಹ್ಮದ್ ನೀಡಿರುವ ಪತ್ರಿಕಾ ಹೇಳಿಕೆಯ ಮಹತ್ವದ ಅಂಶಗಳು ಈ ರೀತಿಯಾಗಿವೆ.
1. ಎನ್ಕೌಂಟರ್ ನಡೆದ ದಿನ ಗುಲ್ಬರ್ಗ ಎಸ್ಪಿ ಜೇವರ್ಗಿಯಲ್ಲಿದ್ದರು. ಕಚೇರಿಯಲ್ಲಿದ್ದ ತಮಗೆ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ್ದಾಗಿ ಹೇಳಿದ್ದಲ್ಲದೆ ಗುಂಡೇಟಿನಿಂದ ಗಾಯಗೊಂಡ ಅಧಿಕಾರಿಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಲ್ಲದೆ ಘಟನೆ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಇರುವಂತೆ ನೋಡಿಕೊಂಡಿರುವೆ.
2. ರೌಡಿ ಜೊತೆಗಿನ ಕಾಳಗದಲ್ಲಿ ಪೊಲೀಸರ ಧೈರ್ಯ- ಸಾಹಸ ಶ್ಲಾಘಿಸುವ ಬದಲು ಕೆಲವು ಸಂಘಟನೆಗಳವರು ಅಪಶೃತಿ ಹಾಡುತ್ತಿದ್ದಾರೆ. ಯಾಕೆ ಘಟನೆಗೆ ತಮಗೆ ತೋಚಿದಂತೆ ಬಣ್ಣ ಬಳಿಯುತ್ತ ಅದನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ಹುನ್ನಾರಕ್ಕಿಳಿದಿದ್ದು ಯಾಕೆ?
3. ಸಂಘಟನೆಯೊಂದು ರೌಡಿ ಶೀಟರ್ಗಳ ಪರಿಷ್ಕರಣೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿರುವ ರೌಡಿಗಳ ದಾವೆ ಕೈಬಿಡಲಾಗಿದೆ ಎಂದು ಆರೋಪಿಸಿದ್ದು ಹುರುಳಿಲ್ಲದ ವಿಚಾರ, ರೌಡಿ ಶೀಟ್ ಹಾಕುವ, ಕೈಬಿಡುವುದು ಜಿಲ್ಲಾ ಎಸ್ಪಿ ಪರಮಾಧಿಕಾರ. ಇಲ್ಲಿ ಐಜಿಪಿ ಯಾವುದೇ ಪಾತ್ರ ಹೊಂದಿರುವುದಿಲ್ಲ.
4. ಕೆಲವು ಸಂಘಟನೆಗಳಂತೂ ಮನಸೋ ಇಚ್ಛೆ ಹೇಳಿಕೆ ನೀಡುತ್ತ, ಪ್ರತಿಭಟನೆ ಮಾಡುತ್ತ ಬಾಯಿಗೆ ಬಂದಂತೆ ಮಾತನಾಡುತ್ತ ಪ್ರಕರಣದ ದುರ್ಲಾಭ ಪಡೆಯಲು ಯತ್ನಿಸುತ್ತಿವೆ, ಗುಲ್ಬರ್ಗದ ಶಾಂತ ವಾತಾವರಣ ಕದಡುವ ಹುನ್ನಾರವೂ ಇಲ್ಲಿ ಸಾಗಿದೆ ಯಾಕೆ?
5. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಸಂಪೂರ್ಣ ನಿಯಂತ್ರಣದಲ್ಲಿವೆ. ಗುಂಡಿನ ಕಾಳಗಕ್ಕೂ ಅಪರಾಧ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲವಾದರೂ ಕೆಲವು ಸಂಘಟನೆಗಲು ಅದ್ಯಾಕೆ ಇವೆರಡಕ್ಕೂ ತಾಳೆ ಹಾಕಿ ಹೇಳಿಕೆ ನೀಡುತ್ತಿವೆಯೋ ಗೊತ್ತಿಲ್ಲ.
6. ಕಾಳಗದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಅಧಿಕಾರಿಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ. ರೌಡಿಗಳ ನಿಗ್ರಹದಲ್ಲಿ ಜನರ ಸಹಕಾರ ಪೊಲೀಸರಿಗೆ ಬೇಕೆಬೇಕು. ಗುಲ್ಬರ್ಗ ಜನತೆ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ.
7. ಗುಂಡಿನ ಕಾಳಗದಲ್ಲಿ ಅಧಿಕಾರಿಗಳಿಗೆ ಚಿಕಿತ್ಸೆ ದೊರಕಿಸುವಲ್ಲಿ ತಲ್ಲೀನರಾಗಿದ್ದ ಐಜಿಪಿ, ಎಸ್ಪಿಗಳ ವಿರುದ್ಧವೇ ಕೆಲವು ಸಂಘಟನೆಗಳು ಆಸ್ಪತ್ರೆ ಹೊರಗಡೆ ಪ್ರತಿಭಟನೆಗೆ ಇಳಿದಿದ್ದು ಅಚ್ಚರಿ ಮೂಡಿಸಿದೆ. ಘಟನೆಯ ಹಿನ್ನೆಲೆಯನ್ನೇ ಪಕ್ಕಾ ತಿಳಿಯುವ ಪ್ರಯತ್ನ ಸಾಗಿದ್ದಾಗಲೇ ವಿನಾಕಾರಣ ಹಿರಿಯ ಅಧಿಕಾರಿಗಳತ್ತ ಆರೋಪಿಸುವ ಸಂಘಟನೆಗಳ ಪ್ರವೃತ್ತಿಗೆ ಏನೆನ್ನಬೇಕು?
ಜಿಲ್ಲೆಯಲ್ಲಿ ಕೊಲೆ- ಸುಲಿಗೆ ಪ್ರಕರಣ ಇಳಿಮುಖ
ಕೆಲವು ಸಂಘಟನೆಗಳು ಜಿಲ್ಲೆಯಲ್ಲಿ ಅಪರಾಧ ನಕಾಶೆ ಏರಿಕೆ ಕಾಣುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಐಜಿಪಿಯವರು ಅದಕ್ಕೂ ಅಂಕಿ- ಸಂಖ್ಯೆ ಸಾಕ್ಷಿ ನೀಡಿದ್ದಾರೆ. ಹಿಂದಿನ ಮೂರ್ನಾಲ್ಕು ವರ್ಷಗಳ ಸಂದರ್ಭಕ್ಕೆ ಹೋಲಿಸಿದರೆ 2013 ಗುಲ್ಬರ್ಗ ಪಾಲಿಗೆ ಪರವಾಗಿಲ್ಲ ಎಂದು ಹೇಳಬಹುದಾದಂತಹ ವರ್ಷ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

