ಗುಲ್ಬರ್ಗಾ

ದಶಕದಿಂದ ಕಂಡಿಲ್ಲ ಪೋಲಿಯೊ ಬಾಧೆ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.19
ಇಲ್ಲಿನ ತಾಜ ನಗರದಲ್ಲಿ ಮಗುವಿಗೆ 2 ಹನಿ ಲಸಿಕೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಜನಗರ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಪೋಲಿಯೋ ಲಸಿಕೆ ಹಾಕಿ ಮಾತನಾಡಿ, ಇಸ್ಲಾಂ ದೇಶದಲ್ಲಿ ಕಳೆದ ಮೂರು ವರ್ಷಗಳಿಂದ, ರಾಜ್ಯದಲ್ಲಿ ಕಳೆದ 6 ವರ್ಷಗಳಿಂದ ಹಾಗೂ ಗುಲ್ಬರ್ಗದಲ್ಲಿ ಕಳೆದ 11 ವರ್ಷಗಳಿಂದ ಯಾವುದೇ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ನಮ್ಮ ದೇಶದ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಯಂದಿರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಎರಡು ಹನಿ ಪೋಲಿಯೊ ಲಸಿಕೆಯನ್ನು ಹಾಕಿಸುವಂತೆ ತಿಳಿಸಿದರು.
ಲಸಿಕೆ ಗುರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಜಿಲ್ಲೆಯ ಐದು ವರ್ಷದೊಳಗಿನ ಒಟ್ಟು 4. 02 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಪ್ರಥಮ ದಿನದಂದು 1, 436 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಳಿದ ಮೂರು ದಿನಗಳ ಕಾಲ 1436 ತಂಡಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿವೆ.
ನಿರ್ಮೂಲನೆ: ಒಟ್ಟು 131 ಟ್ರಾಂಜಿಟ್ ಲಸಿಕಾ ತಂಡಗಳು, 26 ಸಂಚಾರಿ ತಂಡಗಳು ಕಾರ್ಯಮಗ್ನವಾಗಿವೆ. 312 ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿದೆ. ನಿರಂತರ ಲಸಿಕಾಕರಣದಿಂದ ಈಗಾಗಲೇ ದೇಶದಿಂದ ನಾರು ರೋಗ ಹಾಗೂ ಸ್ಮಾಲ್‌ಪಾಕ್ಸ್ ರೋಗಗಳನ್ನು ನಿರ್ಮೂಲನೆಗೊಳಿಸಲಾಗಿದೆ. ಅದೇ ರೀತಿ ಪೋಲಿಯೋ ರೋಗವನ್ನು ಸಹ ನಿರ್ಮೂಲನ ಮಾಡಲಾಗುವುದು. ಈಗಾಗಲೇ ಕೇಂದ್ರ ಆರೋಗ್ಯ ಸಚಿವರು 2013ರ ಜನವರಿಯಿಂದ ದೇಶವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿರುವುದಾಗಿ ತಿಳಿಸಿದರು.
ಜಿಪಂ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸಿಇಓ ಟಿ.ಎಚ್.ಎಂ. ಕುಮಾರ, ಮಹಾನಗರ ಪಾಲಿಕೆ ಆಯುಕ್ತ ಕಟ್ಟಿಮನಿ, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಆಸಿಫ್ ಅಲಿ, ಪೋಲಿಯೋ ನೂಡಲ್ ಅಧಿಕಾರಿ ಡಾ. ಶ್ರೀಧರ, ಮಹಾನಗರ ಪಾಲಿಕೆ ಸದಸ್ಯ ರೆಹಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕ ರಾಧಾಕೃಷ್ಣ, ಆರ್‌ಸಿಎಚ್ ಅಧಿಕಾರಿ ಡಾ. ದಿಲೀಪ ರಾಠೋಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.