ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮ
ಶಹಾಪುರ: ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಗೆ ರಾಷ್ಟ್ರಪತಿಗಳ ಶೌರ್ಯ ಪದಕ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಈ ರಾಜ್ಯದ ಕೇಂದ್ರ ಮಂತ್ರಿಗಳು, ಜನಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸುವ ಮೂಲಕ ಒತ್ತಾಯಿಸಬೇಕೆಂದು ಇತ್ತೀಚೆಗೆ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಂಡೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಸಗರ ಗ್ರಾಮಸ್ಥರಿಂದ ಒಕ್ಕೂರಲ ನಿರ್ಣಯ ಕೈಗೊಳ್ಳಲಾಯಿತು. ಸಂತಾಪ ಸೂಚಿಸಿ ಮಾತನಾಡಿದ ಊರಿನ ಹಿರಿಯರಾದ ಶಿವಲಿಂಗಪ್ಪಗೌಡರ ಹಾಗೂ ಗ್ರಾಪಂ ಅಧ್ಯಕ್ಷರು ಸಿದ್ದಮ್ಮ ಶೇಖರಪ್ಪ ಸೂಗುರು, ಬಂಡೆಯವರ ತ್ಯಾಗ ಇಂದಿನ ಯುವಕರಿಗೆ ಮಾದರಿಯಾಗಲಿ ಎಂದರು.
ತತ್ವದರ್ಶ ಅವಶ್ಯಕ: ಸಂಶೋಧಕ ಡಾ. ಎಂ.ಎಸ್. ಸಿರವಾಳ ಗುರು ಪಡಶೆಟ್ಟಿ, ಪ್ರಸ್ತುತ ದಿನಮಾನಗಳಲ್ಲಿ ಇಡೀ ಜಗತ್ತೇ ಎದುರಿಸುತ್ತಿರುವ ಉಗ್ರವಾದ ಕೊನೆಗಾಣಬೇಕಾದರೆ ಬಂಡೆಯಂತ ದಕ್ಷ ಮತ್ತು ಸಾಹಸಿ ಅಧಿಕಾರಗಳ ತತ್ವದರ್ಶನಗಳು ಅವಶ್ಯಕ ಎಂದು ಅಭಿಪ್ರಾಯಪಟ್ಟರು. ರೈತ ಮುಖಂಡ ಮೈಲಾರಪ್ಪ ಊರಕಾಯಿ ಮಾತನಾಡಿದರು. ನಿವೃತ್ತ ಶಿಕ್ಷಕ ಶೇಖರಪ್ಪ ಅರಕೇರಿ, ಬಂಡೆಯವರ ಕುಂಟುಂಬಕ್ಕೆ ಈ ನಾಡಿನ ಜನರ ಸಹಕಾರ ಸಹಾನುಭೂತಿ ಸದಾಕಾಲ ಇರಲಿ ಎಂದರು.
ಸರ್ಕಾರದ ನಿರ್ಲಕ್ಷ್ಯ: ಸಂತಾಪ ಸಭೆ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಉಪಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡಿದರು. ಈ ಸಂತಾಪ ಸಭೆಯಲ್ಲಿ ಊರಿನ ಗಣ್ಯರಾದ ವೀರಭದ್ರಯ್ಯಸ್ವಾಮಿ ದೇಸಾಯಿವ್ಮಠ, ಮಾಹಾಂತಗೌಡ ಸುಭೇದಾರ, ಗುರುಲಿಂಗಪ್ಪಗೌಡ ಪೋಲಿಸಪಾಟೀಲ, ರಾಜಶೇಖರಗೌಡ ಸುಭೇದಾರ, ಶರಣಗೌಡ ಸುಭೇದಾರ,  ಬಸವರಾಜ ಕನಗುಂಡ, ಶಂಕರ ಪಡಶೆಟ್ಟಿ, ಗುರುರಾಜ ಪತ್ತಾರ, ಮಂಜು ಬಿರಾದಾರ, ಸುಧೀರ ಬಳಗಾರ, ಮತ್ತು ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಗರ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಂಡೆ ಅವರಿಗೆ ಕರವೇ ಶ್ರದ್ಧಾಂಜಲಿ
ಶಹಾಬಾದ್: ಶೂಟೌಟ್‌ನಲ್ಲಿ ವೀರಮರಣ ಹೊಂದಿದ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರಿಗೆ ಕರವೇ ವತಿಯಿಂದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಜಯನಗರ ವಾರ್ಡ್ ಸದಸ್ಯ ಮಲ್ಲಿಕಾರ್ಜುನ ಸೈದಾಪೂರ, ಅರ್ಜುನ ಎಚ್. ಕಟ್ಟಿಮನಿ, ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಬಂಡೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಶ್ರೀನಿವಾಸ ವಗ್ಗರ, ನಜೀರ ಪಟೇಲ, ಸಂತೋಷ ಪೂಜಾರಿ ಇದ್ದರು.
ಡಾನ್ ಬೋಸ್ಕೋ ಹಬ್ಬ; ಕ್ರಿಕೆಟ್
ಗುರುಮಠಕಲ್: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಸೋತ ಕ್ರೀಡಾಪಟುಗಳು ಧೃತಿಗೆಡದೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ದಂಡಪ್ಪಗೌಡ ಉಳ್ಳೆಸೂಗುರ್ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಾನ್ ಬೋಸ್ಕೋ ಸಮಾಜ ಸೇವಾ ಕೇಂದ್ರದ ವತಿಯಿಂದ ಡಾನ್ ಬೋಸ್ಕೋ ಹಬ್ಬದ ಪ್ರಯುಕ್ತ 3 ದಿನಗಳ ಟೆನ್ನಿಸ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮತ್ತು ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ತಾಪಂ ಅಧ್ಯಕ್ಷೆ ಸೋಬರಾಣಿ ದೇವೀಂದ್ರ ಕಲಾಲ ಮಾತನಾಡಿದರು. ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಸುಗಪ್ಪ ಪಾಟೀಲ್, ವಾರ್ತಾಇಲಾಖೆ ಅಧಿಕಾರಿ ಸುಲೇಮಾನ್, ಸಂಸ್ಥೆಯ ಆಡಳಿತಾಧಿಕಾರಿ ಪಾಧರ್ ದೇವಾಸಿ, ಸಂಸ್ಥೆಯ ನಿರ್ದೇಶಕ ಸಜ್ಜಿ, ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾ. ರೆಜ್ಜಿ ಜೆಕಾಬ್, ಡಿ.ಇಡಿ. ಪ್ರಾಂಶುಪಾಲ ಜೋಷಿ ಪುತ್ತೂರ್, ಫಾ. ಯೇಸುದಾಸ್, ಶರಣಪ್ಪ ಸಿ, ಸಿಸ್ಟರ್ ರೋಸಲಿನ್, ದೆವೀಂದ್ರ ಹಳಿಗೇರಿ. ಶರಣಪ್ಪ ಕೆ, ಮಲ್ಲಪ್ಪ ಆಶನಾಳ ಸೇರಿದಂತೆ ಮತ್ತಿತರರು ಇದ್ದರು. ಒಟ್ಟು 29 ತಂಡಗಳು ಭಾಗವಹಿಸಿ, ಇವರಲ್ಲಿ ಪೈನಲ್‌ಗೆ ತಲುಪಿದ ತಂಡ ವಿಷ್ಣು ದೂರ ಶಿಕ್ಷಣ ಸಂಸ್ಥೆ ಮತ್ತು ಯುವರಾಜ ಸಿಂಗ್ ಆಶನಾಳ ತಂಡ. ಪಂದ್ಯದಲ್ಲಿ ವಿಷ್ಣು ದೂರ ಶಿಕ್ಷಣ ಸಂಸ್ಥೆ ವಿಜಯಿಯಾಗಿ ಟೂರ್ನಮೆಂಟ್ ತನ್ನದಾಗಿಸಿಕೊಂಡಿತ್ತು.
'ಯೋಗಯುಕ್ತ ರೋಗಮುಕ'್ತ ಉಚಿತ ಯೋಗ ಶಿಬಿರ
ಗುಲ್ಬರ್ಗ: ಆಧ್ಯಾತ್ಮಿಕ ಪ್ರವಚನ ಸಮಿತಿ ಹಾಗೂ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಜ. 20ರಿಂದ ಶ್ವಾಸಗುರು ವಚನಾನಂದ ಸ್ವಾಮಿ ಅವರಿಂದ 'ಯೋಗಯುಕ್ತ ರೋಗ ಮುಕ್ತ' ಎಂಬ ಉಚಿತ ಯೋಗ ಶಿಬಿರ ನಗರದ ರೋಟರಿ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಮುಂಜಾನೆ 5.30 ಗಂಟೆಯಿಂದ 7 ಗಂಟೆಯವರೆಗೆ ಯೋಗ, ಪ್ರಾಣಯಾಮ, ಆಸನ ನಡೆಯಲಿದೆ. ಸಂಜೆ6 ಗಂಟೆಯಿಂದ 7.30 ವರೆಗೆ ಧ್ಯಾನ, ಭಜನೆ, ಸತ್ಸಂಗ, ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯ ಸಂಬಂಧಿತ ಆರ್ಯುವೇದದ ಔಷಧದ ಸಲಹೆ-ಸೂಚನೆ ನೀಡಲಾಗುವುದು. ಈ ಯೋಗ ಶಿಬಿರದಲ್ಲಿ ಮದ್ಯೆ ಪ್ರತಿ ದಿನನಗರದ ಆಯ್ದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವ್ಯಕ್ತಿತ್ವ ವಿಕಸನ ಸಂಬಂಧ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಮಲ್ಲಿಕಾರ್ಜುನ ಗರೂರ ತಿಳಿಸಿದ್ದಾರೆ. ಕೊನೆಯ ಎರಡು ದಿವಸ ಯೋಗದೊಂದಿಗೆ ವಿಶೇಷ ಶಿವಯೋಗ ಕಾರ್ಯಕ್ರಮ ನಡೆಸಿಕೊಡಲಾಗುವುದು. ಈ ಯೋಗ ಶಿಬಿರದಲ್ಲಿ ತಪ್ಪದೇ ಏಳು ದಿವಸ ಹಾಜರಿರುವವರಿಗೆ ಉಚಿತ ಪ್ರವೇಶ ನೀಡಲಾಗುವುದು. ನಗರದ ಐವಾನ್-ಶಾಹಿ ಬಡಾವಣೆ ವಿಕಾಸ ಅಕಾಡೆಮಿ ಕಾರ್ಯಾಲಯ, ರೋಟರಿ ಕ್ಲಬ್ ಆವರಣದಲ್ಲಿ ಉಚಿತ ಪಾಸ್ ಲಭ್ಯವಿರುತ್ತದೆ.
ಶ್ರೇಷ್ಠ ಸಂತ ಕನಕ
ಶಹಾಪುರ: ಹರಿದಾಸ ಶ್ರೇಷ್ಠರಲ್ಲಿ ಅಗ್ರಗಣ್ಯರಾದ ಕನಕದಾಸರು ಕನ್ನಡದ ಶ್ರೇಷ್ಠ ಸಂತ ಕವಿ, ಅನುಭಾವಿ, ಮಹಾಜ್ಞಾನಿ ವ್ಯಾಸರಾಯರ ಶಿಷ್ಯರಾಗಿ ತನ್ನ ವಿನಯ ಭಗವದ್ಭಕ್ತಿ, ಪಾಂಡಿತ್ಯಗಳಿಂದ ಮಹಿಮರೆನಿಸಿಕೊಂಡರು. ದಾಸಕೂಟದಲ್ಲಿ ಒಬ್ಬರಾದ ಅವರು ಆದಿಕೇಶವನ ಮಹಾಭಕ್ತರಾಗಿದ್ದರು ಎಂದು ಡಾ. ಬಿದರಿ ಚಂದ್ರಭಾಗ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾಕೇಂದ್ರ ಬೆಂಗಳೂರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಮುತ್ತು ಬಂದಿದೆ ಕೇರಿಗೆ ಎಂಬ ಉಪನ್ಯಾಸ ಹಾಗೂ ಗಾಯನ ರಸಗ್ರಹಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಆ್ಯಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ
ಅಫಜಲ್ಪುರ: ತಾಲೂಕಿನ ಬಡದಾಳ ಗ್ರಾಮದಿಂದ ಅಫಜಲಪೂರಕ್ಕೆ ಬರುವಾಗ ಮಾರ್ಗಮಧ್ಯೆಯೇ 108 ಆರೋಗ್ಯ ಕವಚ ಅಂಬುಲೆನ್ಸ್ ವಾಹನದಲ್ಲಿ ಬಡದಾಳ ಗ್ರಾಮದ ಜಯಶ್ರೀ ಪಂಚಯ್ಯ ಹಿರೇಮಠ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಂಬುಲೆನ್ಸ್‌ನಲ್ಲಿದ್ದ ತುರ್ತು ವೈದ್ಯಕೀಯ ತಜ್ಞರಾದ ರಾಜಶೇಖರ ಕುಮಸಗಿ ಅವರು ಪೈಲಟ್ ಶಿವಪುತ್ರಪ್ಪಾ ಖೇಡ ಅವರ ಸಹಕಾರದಿಂದ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿದ್ದಾರೆ. ತಾಯಿ ಮತ್ತು ಮಗು  ಆರೋಗ್ಯವಾಗಿದ್ದು ಅವರನ್ನು ಅಫಜಲ್ಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ: ಅಲ್ಲೂರ
ಚಿತ್ತಾಪುರ: ಯುವಕರು ಜೀವನದಲ್ಲಿ ಸ್ಪರ್ಧೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಅಲ್ಲೂರ ಕೆ. ಕರೆ ನೀಡಿದರು. ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ನಡೆದ ಟೆನ್ನಿಸ್ ಬಾಲ್ ಹಾಗೂ ಕ್ರಿಕೆಟ್ ಟೂರ್ನಮೆಂಟ್ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಿ, ಯುವಕರು ಮದ್ಯಪಾನ, ಧೂಮಪಾನದಂತಹ ಕೆಟ್ಟಚಟಗಳಿಗೆ  ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯ ಸದೃಢಪಡಿಸಿಕೊಳ್ಳಬೇಕು ಎಂದು  ಹೇಳಿದರು. ಹೊಸ ವರ್ಷ ನಿಮಿತ್ತ ನಡೆದ 12 ದಿನಗಳ ಪಂದ್ಯಾಟದಲ್ಲಿ ರಾಮತೀರ್ಥ ಗ್ರಾಮದ ಆರ್‌ಸಿಸಿ ಕ್ರಿಕೆಟ್ ಕ್ಲಬ್ ಭರ್ಜರಿ ಜಯ ಗಳಿಸಿತು. ಜಗಣ್ಣಗೌಡ ಯಂಕಾರಡ್ಡಿ ಕೊಳ್ಳಿ, ಸಂಜೀವ ರಡ್ಡಿ, ಶರಣು ಹೂಗಾರ, ಬಾಬು ರಾಠೋಡ, ಮೌಲಾಲಿ, ಬಸವರಾಜ ಇದ್ದರು. ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜಶೇಖರ ರಡ್ಡಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಸರಣಿ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಳೆ ಅಂಬಿಗರ ಚೌಡಯ್ಯ ದಿನಾಚರಣೆ
ಗುಲ್ಬರ್ಗ: ಅಂಬಿಗರ ಚೌಡಯ್ಯ ರಕ್ಷಣಾ ಸೇನೆ ವತಿಯಿಂದ ಗುಲ್ಬರ್ಗ ತಾಲೂಕಿನ ಮಹಾಗಾಂವ್ ಗ್ರಾಮದಲ್ಲಿ ಜ. 21ರಂದು ಬೆಳಗ್ಗೆ 11 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಜಿಪಂ ಸದಸ್ಯ ಶಿವಪ್ರಭು ಪಾಟೀಲ್ ಮಹಾಗಾಂವ್, ಸಿದ್ದಕಂಠ ತಡಕಲ್, ಅಮರನಾಥ ತಡಕಲ್, ವೈಜನಾಥ ತಡಕಲ್, ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದು ಅಂಬಿಗರ ಚೌಡಯ್ಯ ರಕ್ಷಣಾ ಸೇನೆ ಉಪಾಧ್ಯಕ್ಷರು ತಿಳಿಸಿದ್ದಾರೆ.
ಹುತಾತ್ಮ ಪಿಎಸ್‌ಐಗೆ ಶ್ರದ್ಧಾಂಜಲಿ
ಆಳಂದ: ಪಟ್ಟಣದ ಶರಣ ಏಕಾಂತರಾಮಯ್ಯನ ಮಂದರಿದಲ್ಲಿ ಶ್ರೀ ಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ ತೀರ್ಥ, ಸರಸ್ವತಿ ವಿದ್ಯಾಮಂದಿರ ಮತ್ತು ಆರೋಢ ಜ್ಯೋತಿ ದೂರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಮಲ್ಲಿಕಾರ್ಜುನ ಬಂಡೆಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಧ್ಯಕ್ಷತೆ ಸರ್ಕಾರ, ಇಲಾಖೆಯ ನಿರ್ಲಕ್ಷ್ಯದಿಂದಲೇ ಕಳೆದುಕೊಂಡಂತಾಗಿದೆ. ಜನಪರ ಕೆಲಸ ಮಾಡುವ ಯಾವುದೇ ಅಧಿಕಾರಿಯನ್ನು ಮುಂದಾದರೂ ಉಳಿಸಿಕೊಂಡು, ಪ್ರೋತ್ಸಾಹಿಸಿದರೆ ಜನರಿಗಾಗಿ ದುಡಿಯಲು ಅವರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು. ಟೋಪಣ್ಣಾ ತಡಕಲ ಪ್ರಶಾಂತ ಶರಣ ಮಠ, ಗುಂಡಪ್ಪಾ ಗೋಳೆ, ಅನೀಲಕುಮಾರ ಹಿಪ್ಪರಗಿ, ಸುನಿಲ ದೇಗಿಲ, ಗಣೇಶ ಬೊಸಲೆ, ವಿರಯತ್ತಾ ಸ್ವಾಮಿ, ಸಂಜಯ ನರೋಣೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.