ವಸೀ ಕಣ್ತೆರೆದು ನೋಡಿ ಸ್ವಾಮಿ, ಈ ಸಾವು ನ್ಯಾಯವೇ?
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜ.27
ದಿನಸಿ (ಕಿರಾಣಿ) ಅಂಗಡಿಗೆಂದು ಮನೆಯಿಂದ ಹೊರ ಬರುವ ಬಾಲಕ ಮಡುಗಟ್ಟಿದ್ದ ಚರಂಡಿ ನೀರಿನಿಂದ ತಪ್ಪಿಸಿಕೊಳ್ಳಲು ಆರ್ಸಿಸಿ ಬದುಗುಂಟ ಸಾಗುತ್ತ ವಿದ್ಯುತ್ ಕಂಬದ ಬಳಿ ಬಂದವನೇ ಹೆಣವಾಗುತ್ತಾನೆ ಅಂದರೆ ಇದಕ್ಕಿಂತ ಘೋರ ದುರಂತ ಇನ್ನೇನಿರಲು ಸಾಧ್ಯ ಹೇಳಿ..
ಕನಸಲ್ಲೂ ಎಣಿಸದಂತಹ ಘೋರ ದುರಂತ ಗುಲ್ಬರ್ಗ ಮಹಾನಗರದ ಜುಬೇರ್ ಕಾಲೋನಿಯ ಮಸೀದಿ ಬಳಿ ಸಂಭವಿಸಿದೆ. ಜ.24ರ ಸಂಜೆ 6.15ರ ಹೊತ್ತಿಗೆ ಘಟಿಸಿರುವ ದುರಂತದಲ್ಲಿ ಬಂಡಿ ವ್ಯಾಪಾರಿ ಇಜಾಜ್ ಅಬ್ದುಲ್ ಗನಿ ಇವರ ಪುತ್ರ ಮೊಹ್ಮದ್ ಅಬ್ದುಲ್ ವಸೀ (12) ಹೆಣವಾಗಿದ್ದಾನೆ.
ಮನೆ ಪಕ್ಕದಲ್ಲಿ 6 ತಿಂಗಳಿಂದ ಅರ್ಧಕ್ಕೆ ನಿಂತಿದ್ದ ಚರಂಡಿ ಕಾಮಗಾರಿ, ಅದರಿಂದಾಗಿ ಮಡುಗಟ್ಟಿದ್ದ ಕೊಳಕು ನೀರು, ಅದರೊಳಗಿನ ವಿದ್ಯುತ್ ಕಂಬಗಳೇ ಇಲ್ಲಿ ಮಗುವನ್ನು ಬಲಿ ಪಡೆದವಲ್ಲ ಎಂದು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.
ಪಾಲಿಕೆ- ಜೆಸ್ಕಾಂ ಅಲಕ್ಷತನ ಮಗನ ಬಲಿ ಪಡೀತು: ನಾನಂತೂ ಬಂಡಿ ವರ್ತಕ. ಮೂವರು ಮಕ್ಕಳ (2 ಗಂಡು, 1 ಹೆಣ್ಣು) ತುಂಬು ಸಂಸಾರಸ್ಥ. ದರ್ಗಾ ಬಳಿ ಬಂಡಿಯೊಂದಿಗೆ ವ್ಯಾಪಾರದಲ್ಲಿದ್ದಾಗಲೇ ಫೋನ್ ಬಂತು, ಮಗ ಕರೆಂಟ್ನಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಅಂತ. ದವಾಖಾನಿಗೆ ಹೋಗಿ ನೋಡುವಷ್ಟರಲ್ಲಿ ಮಗನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಇಜಾಜ್ ಅಬ್ದುಲ್ ಗನಿ ಅಳುತ್ತಿದ್ದಾನೆ.
ತನ್ನ ಮಗ ಚರಂಡಿ ನೀರಿನಿಂದ ತಪ್ಪಿಸಿಕೊಳ್ಳಲು ಹೋಗಿ ಪಕ್ಕದ ಸಿಮೆಂಟ್ ಬದುವಿನ ಮೂಲಕ ಹೊರಟಿದ್ದಾನೆ. ಪಕ್ಕದಲ್ಲೇ ವಿದ್ಯುತ್ ಕಂಬವಿದೆ. ಅಲ್ಲಿಂದ ಜೋತುಬಿದ್ದ ಕರೆಂಟ್ ಹರಿದಾಡುತ್ತಿದ್ದ ವೈರ್ ತುಂಡು ವಸೀಗೆ ತಗುಲಿ ದುರಂತವಾಯ್ತು ಎನ್ನುವ ಇಜಾಜ್ ಗ್ರಾಮಾಂತರ ಠಾಣೆಯಲ್ಲಿ ತನ್ನ ಮಗನ ಸಾವಿಗೆ ಪಾಲಿಕೆ- ಜೆಸ್ಕಾಂ ಏಜನ್ಸಿಗಳ ಅಲಕ್ಷತನ ಕಾರಣ ಎಂದು ದೂರು ದಾಖಲಿಸಿದ್ದಾನೆ.
ಇಲ್ಲಿ ನನ್ನ ಮಗನ ತಪ್ಪೇನಿದೆ ವಸೀ ಸಾವು ನ್ಯಾಯವೆ ನೀವೇ ಹೇಳಿ ಸ್ವಾಮಿ ಎನ್ನುವ ಇಜಾಜ್ ಇನ್ನೆರಡು ವರ್ಷಕ್ಕೆ ಮಗ ಕೈಗೆ ಬರ್ತಿದ್ದ ಎಂದು ರೋದಿಸುತ್ತಿದ್ದಾನೆ.
ಜುಬೇರ್ ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ಬಿಟ್ಟಿದ್ದರಿಂದ ಕೊಳಕು ನೀರು ರಸ್ತೆಯಲ್ಲೇ ಮಡುಗಟ್ಟಿದೆ. ತಕ್ಷಣ ಕಾಮಗಾರಿಗೆ ಮರು ಚಾಲನೆ ಕೊಡಿ ಎಂದು ಪಾಲಿಕೆ ಆಯುಕ್ತ ಶ್ರೀಮಂತ ಕಟ್ಟಿಮನಿ ಹಾಗೂ ವಲಯ ಅಧಿಕಾರಿ ವಿಜಯಕುಮಾರ್ ಇಬ್ಬರಿಗೂ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ನಿಂದ ಮನವಿ ಸಲ್ಲಿಸಿದದ್ದರೂ ಸುಮ್ಮನಿದ್ದ ಕಹಿಫಲ ಈ ಬಾಲಕನ ಸಾವು. ಪಾಲಿಕೆಯ ಅಲಕ್ಷತನ, ಜೆಸ್ಕಾಂ ಹೊಣೆಗೇಡಿತನದಿಂದ ಈ ದುರಂತ. ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಇಲ್ಲದೆ ಹೋದಲ್ಲಿ ಹೋರಾಟ ನಡೆಸುತ್ತೇವೆ.
ಟಿ ಇಮಾದ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕಾರ್ಯಕರ್ತ, ಜುಬೇರ್ ಕಾಲೋನಿ
ಕಾರ್ಪೋರೇಷನ್ ಮಂದಿಗೆ ಇಲ್ಲಿನ ಸಮಸ್ಯೆ ಹೇಳಿ ಸಾಕಾಗಿತ್ತು. 6 ತಿಂಗಳಿಗಿಂತ ಹೆಚ್ಚು ಅವಧಿ ಇಲ್ಲಿ ರಸ್ತೆಯಲ್ಲೇ ನೀರು ನಿಂತಿತ್ತು. ಕಾಮಗಾರಿ ಅರ್ಧಕ್ಕೇ ನಿಲ್ಲಿಸಿಬಿಟ್ಟಿದ್ದರು. ಈಗ ಹುಡುಗನ ಸಾವಾಗಿದೆ. ಇದಕ್ಕೇ ಪಾಲಿಕೆಯವರೇ ನೇರ ಹೊಣೆಗಾರರು. ಇದಕ್ಕೆ ಪಾಲಿಕೆ- ಜೆಸ್ಕಾಂ ಹೊಣೆ ಹೊರಬೇಕು. ಬಾಲಕನ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲೇಬೇಕು. ಅರ್ಧಂಬರ್ಧ ಕಾಮಗಾರಿಗಳು ನಗರದಲ್ಲಿ ಎಲ್ಲಿಯಾದರೂ ಇದ್ದಲ್ಲಿ ತಕ್ಷಣ ಕೆಲಸ ಮುಗಿಸಬೇಕು.
ಟಿ ಸೈಯ್ಯದ್ ತಾಹರ್,
ಸಾಮಾಜಿಕ ಕಾರ್ಯಕರ್ತ, ಜುಬೇರ್ ಕಾಲೋನಿ
ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯಕ್ಕೆ ಅಮಾಯಕನ ಬಲಿ ಪಾಲಿಕೆ, ಜೆಸ್ಕಾಂ ಅಲಕ್ಷತನ ಇಲ್ಲಿ ಬಡಪಾಯಿ ಬಾಲಕನ ಬಲಿ ಪಡೆದಿದೆ. ಪೊಲೀಸರು ಐಪಿಸಿ 304 (ಎ) ಹಾಕಿದ್ದಾರೆ. ಇದಕ್ಕಿಂತ ಖಡಕ್ ಕಲಂಗಳಡಿಯಲ್ಲಿ ಈ ಪ್ರಕರಣ ದಾಖಲಿಸಬೇಕು. ಜನರ ಪ್ರಾಣಕ್ಕೆ ಮುಳುವಾಗುವಂತಹ ಹೊಣೆಗೇಡಿತನ ಮೆರೆಯುವವರಿಗೆ ಶಿಕ್ಷೆ ಆಗಲೇಬೇಕಲ್ಲವೆ. ಈ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿಯಿಂದ ಸ್ಪಂದಿಸಬೇಕು. ಕುಟುಂಬಕ್ಕೆ ಪರಿಹಾರ ತಕ್ಷಣ ನೀಡಬೇಕಿತ್ತು. ಇಂದಿಗೂ ಪರಿಹಾರ ಹಣ ಕುಟುಂಬದವರ ಕೈಸೇರಿಲ್ಲ.
- ಮಝರ್ ಹುಸೈನ್, ವಕೀಲರು, ಮುಸ್ಲಿಂ ವೆಲಫೇರ್ ಅಸೋಸಿಯೇಶನ್ ಅಧ್ಯಕ್ಷ, ಗುಲ್ಬರ್ಗ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

