ಬದುಕು ಅರಸಿ ಹೋದವರ ದುಸ್ಥಿತಿಗೆ ಸ್ಪಂದಿಸದ ಸರ್ಕಾರ
ಶಹಾಪುರ: ಭೀಕರ ರಸ್ತೆ ಅಪಘಾತದಲ್ಲಿ 35 ಕುರಿಗಳು, 3 ಜನರ ಸಾವು ಸಂಭವಿಸಿ ತಿಂಗಳಾಗುತ್ತಿದ್ದರೂ ಬಡ ಕುಟುಂಬಕ್ಕೆ ಸರ್ಕಾರ ಸ್ಪಂದಿಸಿಲ್ಲ. ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನಿರಾಸಕ್ತಿ, ಬದುಕು ಅರಸಿ ಹೊರಟವರ ಕಾಳಜಿ ಯಾರಿಗೂ ಇಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ.
ಜ. 9 ರಂದು ಮಧ್ಯರಾತ್ರಿ ದಿಗ್ಗಿ ಸೈದಾಪುರದಿಂದ ಫರಹತಾಬಾದಿಗೆ ಸುಮಾರು 600 ಕುರಿಗಳೊಂದಿಗೆ ಹೊರಟಿದ್ದ ಕುರಿಗಾಹಿಗಳಾದ ನಿಂಗಪ್ಪನಾಗಪ್ಪ, ಯಂಕಪ್ಪನಾಗಪ್ಪ, ಸಂಗಪ್ಪಬಸಪ್ಪ ಎಂಬುವರ ಮೇಲೆ ಲಾರಿಯೊಂದು ಹಾಯ್ದು 35 ಕುರಿಗಳ ಜೊತೆಗೆ ಆ ಮೂವರನ್ನು ಬಲಿ ತೆಗೆದುಕೊಂಡು ಇಡೀ ಕುಟುಂಬವನ್ನೇ ಶೋಕದ ಮಡುವಿಗೆ ತಳ್ಳಿತು. ಪೋಲಿಸರು ಸ್ಥಳದ ಪರಿಶೀಲನೆ ನಡೆಸಿ, ಮರಣೋತ್ತರ ಪರಿಕ್ಷೆ ನಡೆಸಿದ್ದಾರೆ. ಕುರಿಗಳಿಗೆ ಸಂಬಂಧಿಸಿದಂತೆ ಪಶುವೈದ್ಯಕೀಯ ಇಲಾಖೆಯವರು ವರದಿಯನ್ನು ಕೊಟ್ಟಿದ್ದಾರೆ.
ಆದರೆ ಇಲ್ಲಿಯವರೆಗೂ ಮಾನವೀಯತೆ ದೃಷ್ಟಿಯಿಂದ, ಬದುಕು ಅರಸಿ ಹೋರಟವರ ದಾರುಣ ಸಾವಿಗೆ ಸಂಬಂಧಿಸಿದಂತೆ ಸರ್ಕಾರವು ಸ್ವಲ್ಪವೂ ಕಾಳಜಿ ವಹಿಸದಿರುವುದು ಆತಂಕಕ್ಕೆ ಕಾರಣವಾಗಿದೆ.
ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಮಾಹಿತಿ ಕಲೆಹಾಕುವುದು ಮತ್ತು ಕುಟುಂಬದವರಿಗೆ ಸಹಾಯ ನೀಡುವುದು, ಬದುಕಿಗೆ ಆಶ್ರಯವಾಗಿದ್ದ ಕುರಿಗಳು ಸಾವಿಗೆ ಸೂಕ್ತ ಪರಿಹಾರ ಕಲ್ಪಿಸದಿರುವುದು,
ಜನಪ್ರತಿನಿಧಿಗಳ ಧ್ವನಿಗೆ ಸರ್ಕಾರ ಸ್ಪಂದಿಸದೆ ಇರುವುದಕ್ಕಾಗಿ ಕುರುಬ ಸಮಾಜದ ಮುಖಂಡ ಗಿರೆಪ್ಪಗೌಡ ಬಾಂತಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮೂವರ ಸಾವಿಗೆ ಬೆಲೆಯೇ ಇಲ್ಲವೇ? ಆಕಸ್ಮಿಕವಾಗಿ ನಡೆದ ದುರಂತಕ್ಕೆ ಸರ್ಕಾರ ಸ್ಪಂದಿಸದೆ ಇರುವುದು ಸರಿಯೇ? ಸರ್ಕಾರದ ಭಂಡತನ ಸರಿಯಲ್ಲ. ಪೊಲೀಸರು ಅಪಘಾತ ಮಾಡಿದ ವಾಹನ ಪತ್ತೆಹಚ್ಚುವಲ್ಲಿ ಕಠಿಣ ನಿಲುವು ತಾಳುತ್ತಿಲ್ಲ.
ಬೆಲೆಕಟ್ಟಲಾರದಂತಹ ಜೀವಗಳು ಹೋಗಿದ್ದರೂ ಯಾರು ಸಂಬಂಧವಿಲ್ಲದಂತೆ ಇರುವುದು ಇಡೀ ಕುಟುಂಬಕ್ಕೆ ನೋವು ತಂದಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ತಾಲೂಕಾ ಕುರುಬ ಸಮಾಜದ ವತಿಯಿಂದ ರಾಜ್ಯಾಧ್ಯಕ್ಷರ ಮೂಲಕ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಸರ್ಕಾರ ತಕ್ಷಣವೇ ಈ ಕುರಿತು ಸ್ಪಂದಿಸಿ ದಿಗ್ಗಿ ಸೈದಾಪುರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಗಿರೆಪ್ಪಗೌಡ ಎಚ್ಚರಿಸಿದ್ದಾರೆ.
ಪರಿಹಾರ ಕಲ್ಪಿಸುವ ಪ್ರಯತ್ನ: ಏತನ್ಮಧ್ಯೆ, ಸ್ಥಳೀಯ ಶಾಸಕ ಗುರುಪಾಟೀಲ ಶಿರವಾಳ ಖುದ್ದಾಗಿ ಸಿಎಂರನ್ನು ಭೇಟಿಯಾಗಿ ದಿಗ್ಗಿ ಸೈದಾಪುರ ಗ್ರಾಮದ ಅಪಘಾತದಲ್ಲಿ ಮೃತರಾದವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಶಹಾಪುರಕ್ಕೆ ಆಗಮಿಸಿದ್ದ ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೂ ಘಟನೆಯ ಮಾಹಿತಿ ನೀಡಿದ್ದಲ್ಲದೆ ವರದಿ ಸಲ್ಲಿಸಿದ್ದಾರೆ. ಮಂತ್ರಿಗಳೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಥ ಅವಘಡ ಸಂಬಂಧಿಸಿದಾಗ ತಕ್ಷಣವೇ ಪರಿಹಾರ ಘೋಷಿಸಿರುವ ಸಾಕಷ್ಟು ನಿದರ್ಶನಗಳಿದ್ದು ಶಹಾಪುರ ಘಟನೆ ಬಗ್ಗೆ ಕಾಳಜಿ ವಹಿಸದಿರುವುದು ಶಾಸಕರಿಗೂ ಬೇಸರ ತರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

