ನಿಲ್ದಾಣ ಸ್ವಚ್ಛತೆಗೆ ಆದ್ಯತೆ
ಕ.ಪ್ರ. ವಾರ್ತೆ ಯಾದಗಿರಿ ಜು.23
ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಯಾಣಿಕರಿಗೆ ತೊಂದರೆಯಾದಂತೆ ಕ್ರಮ ಕೈಗೊಳ್ಳಬೇಕೆಂದು ಗುಂತಕಲ್ ರೈಲ್ವೆ ವಿಭಾಗದ ವ್ಯವಸ್ಥಾಪಕ ಮನೋಜ್ ಜೋಶಿ ಸಿಬ್ಬಂದಿಗೆ ಸೂಚಿಸಿದರು.
ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ, ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿರು. ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರ ಆದೇಶದಂತೆ ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿರುವುದರ ಹಿನ್ನೆಲೆಯಲ್ಲಿ ಗುಂತಕಲ್ ವ್ಯಾಪ್ತಿಯ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಭೇಚಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ನಿಲ್ದಾಣದಲ್ಲಿನ ಶೌಚಾಲಯ, ಪ್ರಯಾಣಿಕರ ಆಸನ ವ್ಯವಸ್ಥೆ, ವಿಶ್ರಾಂತಿ ಗೃಹ ಮತ್ತು ಟಿಕೆಟ್ ಕೌಂಟರ್ಗಳನ್ನು ವೀಕ್ಷಿಸಿ ನಿಲ್ದಾಣದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಪ್ರಯಾಣಿಕರಿಗೆ ತೊಂದರೆಯಾದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿಲ್ದಾಣದ ಸಿಬ್ಬಂದಿಗೆ ಸೂಚಿಸಿದರು.
ರೂಪುರೇಷೆ ಸಿದ್ಧ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ನಿಲ್ದಾಣದ ಶೌಚಾಲಯಗಳ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಲಾಗಿದೆ. ರೈಲ್ವೆ ಸಚಿವರು ಬಜೆಟ್ನಲ್ಲಿ ತಿಳಿಸಿದಂತೆ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ರೈಲ್ವೆ ಮಂಡಳಿ ಕೆಲವು ರೂಪುರೇಷೆಗಳನ್ನು ಸಿದ್ಧಪಡಿಸಿದೆ. ಸಾವಿರಾರು ಜನ ಪ್ರಯಾಣಿಸುವ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಇಲಾಖೆ ಮುಂದಾಗಿದೆ ಎಂದರು.
ಗುಂತಕಲ್ ವಿಭಾಗದ ವ್ಯಾಪ್ತಿಗೆ ಒಟ್ಟು 131 ನಿಲ್ದಾಣಗಳು ಬರುತ್ತಿದೆ. ಅದರಲ್ಲಿ ಪ್ರಮುಖ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ನೋಡಿಕೊಂಡು ಕೊರತೆ ಕಂಡುಬಂದಲ್ಲಿ ತಕ್ಷಣ ಪರಿಹಾರಕ್ಕೆ ಸೂಚಿಸಲಾಗುವುದು.
ತೊಂದರೆ ಕಂಡುಬಂದಲ್ಲಿ ತಿಳಿಸಿ: ಪ್ರಯಾಣಿಕರು, ವಿವಿಧ ಸಂಘ ಸಂಸ್ಥೆಗಳಿಂದ ಬಂದ ಮನವಿಯ ಆಧಾರದ ಮೇಲೆ ನಾವು ಮೇಲಾಧಿಕಾರಿಗಳಿಗೆ ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಸುತ್ತೇವೆ. ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಯಾವುದಾದರೂ ತೊಂದರೆ ಕಂಡು ಬಂದಲ್ಲಿ ಆಯಾ ಸ್ಟೇಷನ್ ಮ್ಯಾನೇಜರ್ಗೆ ತಿಳಿಸಬೇಕು. ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಯಾದಗಿರಿ ರೈಲು ನಿಲ್ದಾಣದಲ್ಲಿ ಪ್ರಮುಖ ಎಕ್ಸ್ಪ್ರೆಸ್ ರೈಲುಗಳಾದ ಅಹಮದಾಬಾದ್, ರಾಜಕೋಟ, ರಾಜಧಾನಿ, ಗೋರಖ್ಪುರ ಮತ್ತು ಶಿರಡಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಸಾಕಷ್ಟು ಮನವಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ಇಲಾಖೆಯ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದೆ. ಅಲ್ಲದೆ ಕೆ.ಕೆ. ಎಕ್ಸ್ಪ್ರೆಸ್ ಮತ್ತು ಯಶವಂತಪುರ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಸಾರ್ವಜನಿಕರ ಒತ್ತಾಯ ಹಿನ್ನೆಲೆ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಭದ್ರತೆ ಒದಗಿಸಿ: ಇಂಟರ್ಸಿಟಿ ಪ್ಯಾಸೆಂಜರ್ ರೈಲು ಸರಿಯಾದ ಸಮಯಕ್ಕೆ ಬಾರದೆ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಬಹಳಷ್ಟ ಹೊತ್ತು ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಇಲ್ಲಿನ ರೈಲು ನಿಲ್ದಾಣದಲ್ಲಿ ಇನ್ನೂ ಹೆಚ್ಚಿನ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈಲ್ವೆ ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಅಧಿಕಾರಿ ಸ್ವಾಮಿ ನಾಯಕ, ಉತ್ತರ ಡಿಇಎನ್ ಅಮಿತಕುಮಾರ್, ಯಾದಗಿರಿ ಸ್ಟೇಷನ್ ವ್ಯವಸ್ಥಾಪಕ ಎನ್.ನಾಗೇಶ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

