ಗುಲ್ಬರ್ಗಾ

ಕೆಟ್ಟದ್ದನ್ನು ಟೀಕಿಸಿದಂತೆ ಒಳ್ಳೆಯದನ್ನು ಶ್ಲಾಘಿಸಿ

Published On :

ಗುಲ್ಬರ್ಗ: ಕೆಟ್ಟದ್ದನ್ನು ಮಾಡಿದಾಗ ನಿರ್ದಾಕ್ಷಿಣ್ಯವಾಗಿ ತೆಗಳಿದಂತೆ, ಒಳ್ಳೆಯದನ್ನು ಮಾಡಿದಾಗ ಶ್ಲಾಘಿಸಿರಿ. ಟೀಕೆ ಮಾಡುವಾಗ ಆರೋಗ್ಯಕರ ಟೀಕೆಗಳಿರುವಂತೆ ನೋಡಿಕೊಳ್ಳಿ ಎಂದು ಹಲವರು ಹೇಳಿದರೆ, ಇನ್ನೂ ಕೆಲವರು ಜರ್ನಲಿಸಂ ಎಂಬುದು ಈಗ ಸುದ್ದಿ ಕೊಡುವ ಆತುರದಲ್ಲಿ ಸೆನ್ಸೇಷನಲಿಸಂ ಆಗುತ್ತಿದೆ. ಆತುರದಲ್ಲೇ ಅವಘಡಗಳಾಗುತ್ತಿವೆ ಎಂದು ಪತ್ರಿಕೋದ್ಯಮದ ಕಾರ್ಯನಿರ್ವಹಣೆಯಲ್ಲಿನ ಲೋಪಗಳನ್ನು ಎತ್ತಿ ಹಿಡಿದರು. ಇನ್ನೂ ಕೆಲವರು ಪತ್ರಿಕೆಗಳು, ಪತ್ರಕರ್ತರನ್ನು ಜುಲಾಬ್ ಗೋಲಿ ಎಂದು ಹೇಳುತ್ತ ಸಮಾಜಕ್ಕೆ ಕೆಟ್ಟದಾಗುವುದನ್ನು ತಪ್ಪಿಸಿರಿ, ಉತ್ತಮರನ್ನು ತೆಗಳಿ ನೈತಿಕತೆಗೆ ಧಕ್ಕೆ ತರಬೇಡಿ ಎಂದು ಕಿವಿಮಾತು ಹೇಳಿದರು.
ಗುಲ್ಬರ್ಗದ ಕಕಾನಿಪಸಂ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ ಒಂದರರ್ಥದಲ್ಲಿ ಪತ್ರಕರ್ತರು, ಪತ್ರಿಕೆಗಳ ಆತ್ಮಾವಲೋಕನ ದಿನವಾಗಿ ಪರಿವರ್ತಿತವಾಗಿತ್ತು. ಸಮಾರಂಭಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಕೆಟ್ಟದ್ದನ್ನು ಕಂಡಾಗ ಟೀಕಿಸುವಂತೆ ಒಳ್ಳೆಯದನ್ನು ಕಂಡಾಗ ಅಷ್ಟೇ ಕಳಕಳಿಯಿಂದ ಶ್ಲಾಘಿಸಿ ಎಂದರು. ಗುಲ್ಬರ್ಗ ಪತ್ರಕರ್ತರ ಭವನಕ್ಕೆ 30 ಲಕ್ಷ ವೆಚ್ಚದಲ್ಲಿ ಮೇಲ್ಮಹಡಿ ನಿರ್ಮಾಣಕ್ಕೆ ತಾವು ಸರ್ಕಾರದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಮಾಜದ ಮೇಲೆ ಪತ್ರಿಕೆಗಳ ಪ್ರಭಾವ ತುಂಬಾ ಇದೆ. ಆದರೆ ಬ್ರೆಕಿಂಗ್ ನ್ಯೂಸ್ ಕೊಡುವ ಆತುರದಲ್ಲಿ ಟೀವಿಗಳು ಏನೆಲ್ಲಾ ನಕಾರಾತ್ಮಕ ಧೋರಣೆ ಬೆಳೆಸುತ್ತಿವೆ ಎಂದು ಅಸಮಾಧಾನ ಹೊರಹಾಕಿದರು. ಪತ್ರಕರ್ತರು, ಪತ್ರಿಕೆಗಳ ಬಗ್ಗೆ ಸಮಾಜದಲ್ಲಿ ಅಪಾರ ಗೌರವವಿದೆ. ಇದನ್ನು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಉಳಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಜುಲಾಬ ಗೋಲಿ ಇದ್ಹಂಗ: ಪತ್ರಕರ್ತರು, ಪತ್ರಿಕೆಗಳನ್ನು ಜುಲಾಬ ಗೋಲಿ (ಭೇದಿ ಕಮ್ಮಿ ಮಾಡುವ ಟ್ಯಾಬ್ಲೆಟ್) ಎಂದು ಬಣ್ಣಿಸಿದವರು ಸುಲಫಲ ಮಠದ ಮಹಾಂತ ಶ್ರೀಗಳು. ಸಮಾನತೆಯ ದೃಷ್ಟಿಕೋನದಿಂದ ಪತ್ರಿಕೆಗಳು, ಟೀವಿಗಳವರು ಕೆಲಸ ಮಾಡಬೇಕೇ ವಿನಹ ಯಾವುದೇ ಪೂರ್ವಗ್ರಹ ಪೀಡೆಗೆ ಒಳಗಾಗಬಾರದು ಎಂದರು.
ಇದ್ದದ್ದು ಇದ್ದಹಾಗೇ ಸುದ್ದಿ ಮಾಡಬೇಕು. ಯಾವುದೇ ಪ್ರಭಾವ, ವಶೀಲಿಗೆ ಒಳಗಾಗಿ, ಆಮಿಷಗಳಿಗೆ ಬಲಿಯಾಗಿ ಸುದ್ದಿ ಮಾಡಬಾರದೆಂದು ಈಚೆಗಿನ ಕೆಲ ವೇಳೆ ಸುದ್ದಿಗಳು ಅದ್ಹೇಗೆ ಕೆಟ್ಟ ಪರಿಮಾಮ ಬೀರಿದವು ಎಂಬುದನ್ನು ವಿವರಿಸಿದರು.
ಖಾಕಿ, ಖಾದಿ ಹಾಗೂ ಕಾವಿ ಎಡವಿದಾಗ ಕಿವಿ ಹಿಡಿದು ತಿದ್ದೋದು ಪತ್ರಿಕೆಗಳು. ಅವುಗಳೇ ಪೂರ್ವಗ್ರಹ ಪೀಡೆಗೊಳಗಾದರೆ ಸರಿಯಲ್ಲ, ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಪತ್ರಿಕೆಗಳು ಹಿಂದಿನಿಂದಲೂ ಕಾಪಾಡುತ್ತ ಬಂದಿವೆ, ಬರುವ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಜಾಣ್ಮೆ, ಜವಾಬ್ದಾರಿಯಿಂದ ಸಾಗಲಿ ಎಂದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೆವೂರ, ಅಲ್ಲಂಪ್ರಭು ಪಾಟೀಲ, ಡಿಸಿ ಡಾ. ಎನ್.ವಿ. ಪ್ರಸಾದ್, ಎಸ್ಪಿ ಅಮೀತ್‌ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಶ್ರೀನಿವಾಸ ಸಿರನೂರಕರ ಅವರು ಪತ್ರಿಕಗಳ ಹುಟ್ಟು, ಬೆಳವಣಿಗೆ, ಅವುಗಳ ಮುಂದಿರುವ ಸವಾಲುಗಳು, ಪತ್ರಕರ್ತರಿಗೆ ಯಾರು ಆದರ್ಶರಾಗಿರಬೇಕು, ಯಾವ ಸಂಗತಿಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಬೇಕೆಂಬವಿಷಯಗಳನ್ನು ಒಳಗೊಂಡ ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.