ಜಿಲ್ಲೆಯಲ್ಲಿ ನೂತನ ಎಸ್ಪಿ ಕಚೇರಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.2
ನೂತನ ಎಸ್ಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಇದೀಗ ಶುಕ್ರದೆಶೆ ಒದಗಿ ಬಂದಿದ್ದು, ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಕಳೆದ ಬಜೆಟ್ನಲ್ಲಿ 7 ಕೋಟಿ ರೂ.ಗಳನ್ನು ಮೀಸಲಿರಿಸಿದ್ದ ಹಣದಿಂದ ಹೊಸ ಕಟ್ಟಡ ನಿರ್ಮಾಣವಾಗಲಿದೆ.
ಯಾದಗಿರಿ ತಾಲೂಕು ಕೇಂದ್ರವಾಗಿದ್ದಾಗ ಡಿವೈಎಸ್ಪಿ ಕಚೇರಿಗಾಗಿ 2004ರಲ್ಲಿ ಖರ್ಗೆ ಅವರು ಕಟ್ಟಡ ನಿರ್ಮಿಸಿದ್ದರು. ಆದರೆ 2009ರಲ್ಲಿ ಬಿಜೆಪಿ ಸರ್ಕಾರ ಜಿಲ್ಲಾಕೇಂದ್ರ ಎಂದು ಘೋಷಣೆ ಮಾಡಿದ ತಕ್ಷಣ ತಾತ್ಕಾಲಿಕವಾಗಿ ಇದೇ ಸಂಕೀರ್ಣದಲ್ಲಿ ಎಸ್ಪಿ ಕಚೇರಿ ಆರಂಭಿಸಲು ಸರ್ಕಾರ ಆದೇಶ ನೀಡಿತ್ತು. ಇದರಿಂದ ಇರುವ ಸಣ್ಣ ಕಟ್ಟಡದಲ್ಲಿಯೇ ಕಚೇರಿ ಆರಂಭವಾದರೂ, ಕೆಲ ಮೂಲಸೌಕರ್ಯಗಳ ಕೊರತೆಯಿಂದ ಕಚೇರಿಯ ಸಿಬ್ಬಂದಿ ವರ್ಗ ಪರಿತಪಿಸುವಂತಾಗಿತ್ತು.
ಅನುದಾನ ಕೋರಿಕೆ: ಜಿಲ್ಲೆಯ ಮೊಟ್ಟಮೊದಲ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರೂಪಾ ಮೌದ್ಗಿಲ್ ಅವರು, ಗೃಹ ಇಲಾಖೆಗೆ ಪತ್ರ ಬರೆದು, ನೂತನ ಎಸ್ಪಿ ಕಟ್ಟಡ ಕಾರ್ಯಾಲಯ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಕೋರಿದ್ದರು.
ಅವರು ವರ್ಗವಾದ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪ್ರಸ್ತುತ ಎಸ್ಪಿ ವಂಶಿಕೃಷ್ಣ, ಹೊಸ ಕಾರ್ಯಾಲಯಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಿದ್ದರು. ಅಲ್ಲದೆ ಕಟ್ಟಡದ ರೂಪರೇಷೆಗಳನ್ನು ಸಿದ್ಧಪಡಿಸಿದ್ದು, ಇನ್ನೇನಿದ್ದರೂ ಹಣ ಬಿಡುಗಡೆಗಷ್ಟೆ ಕಾಯಬೇಕಿದೆ.
43 ಎಕರೆ ವಿಶಾಲ ಸ್ಥಳ: ಪ್ರಸ್ತುತ ಎಸ್ಪಿ ಕಾರ್ಯಾಲಯದ ಹಿಂಭಾಗದಲ್ಲಿ ಇಲಾಖೆ 43 ಎಕರೆ ವಿಶಾಲ ಜಾಗವಿದ್ದು, ಇದೇ ಸ್ಥಳದಲ್ಲಿ ನೂತನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಬಿ.ಆರ್ ಬಿಲ್ಡಿಂಗ್, ಮೋಟಾರ್ ಶೆಡ್ ಮತ್ತು ಕಾರ್ಯಾಲಯದ ಸಿಬ್ಬಂದಿ ಕೋಣೆಗಳೂ ಸೇರಿದಂತೆ ಮೂರು ಹಂತದಲ್ಲಿ ಕಟ್ಟಡಗಳು ತಲೆ ಎತ್ತಲಿವೆ.
ಸಾರ್ವಜನಿಕರಿಗೆ ಅನುಕೂಲ: ಜಿಲ್ಲೆಯ ಸಾರ್ವಜನಿಕರು ಕಚೇರಿಗೆ ಆಗಮಿಸಿ ಪೊಲೀಸ್ ಅಧಿಕಾರಿಗಳಿಗೆ ಭೇಟಿಯಾಗಲು ಅನುಕೂಲವಾಗುವಂತೆ ನಿರ್ಮಾಣವಾಗಲಿರುವ ಕಟ್ಟಡಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಿರುವ ಕಟ್ಟಡದಲ್ಲಿ ಸ್ಥಳದ ಸಮಸ್ಯೆ ಕಾರಣ ಸಾರ್ವಜನಿಕರಿಗೂ ತೊಂದರೆ ಅನುಭವಿಸುವಂತಾಗಿತ್ತು.
ಒಟ್ಟಾರೆ ಜಿಲ್ಲಾ ಕೇಂದ್ರವಾಗಿ 4 ವರ್ಷಗಳ ನಂತರ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಲಯದ ಸ್ವಂತ ಕಟ್ಟಡಕ್ಕೆ ಕಾಲ ಕೂಡಿ ಬಂದಿದ್ದು, ಶೀಘ್ರದಲ್ಲಿ ನೂತನ ಕಚೇರಿ ಕಾಮಗಾರಿ ಪ್ರಾರಂಭವಾಗಲಿ ಎಂಬುದು ಜಿಲ್ಲೆಯ ಸಾರ್ವಜನಿಕರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

