ಗುಲ್ಬರ್ಗಾ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ ಕೋಮಾರ್ ೤ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.4
ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆನೆಕಾಲು ರೋಗ ನಿವಾರಣೆಗಾಗಿ ಜೂ.5ರಿಂದ 15 ದಿನಗಳವರೆಗೆ ನಗರದ ಕೋಟಾಗಾರ ವಾಡ ಅಂಜನೇಯ ದೇವಸ್ಥಾನದ ಹತ್ತಿರದಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಔಷಧ ವಿತರಿಸುವ ಕಾರ್ಯಕ್ರಮಕ್ಕೆ  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ ಕೋಮಾರ್ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆನೆಕಾಲು ರೋಗ ತಡೆಗಟ್ಟಲು ಡಿಇಸಿ ಮತ್ತು ಅಲ್ಬೆಂಡಾಜೋಲ್ ಮಾತ್ರೆಗಳನ್ನು ತಪ್ಪದೇ ನುಂಗುವುದರ ಮೂಲಕ ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು. ಈ ರೋಗವನ್ನು ಒಮ್ಮೆಲೇ ಹೋಗಲಾಡಿಸಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರೋಗದ ನಿಯಂತ್ರಣ ಸಾಧ್ಯ ಎಂದರು.
ಪ್ರತಿಯೊಬ್ಬರು ಸೇವಿಸಿ: ಜಿಲ್ಲಾ ಆರೋಗ್ಯಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ಆನೆ ಕಾಲು ರೋಗವಿದ್ದವರು, ರೋಗ  ಇಲ್ಲದವರು ಈ ಮಾತ್ರೆಯನ್ನು ಸೇವಿಸಬೇಕು. 2 ವರ್ಷ ಮೇಲ್ಪಟ್ಟ ಪತ್ರಿಯೊಬ್ಬರು ಮಾತ್ರೆಗಳನ್ನು ನುಂಗಬೇಕು. ಅತೀವ ವೃದ್ಧಾಪ್ಯವಿರುವವರು, ಗರ್ಭಿಣಿಯರು ಹಾಗೂ ತೀವ್ರ ಕಾಯಿಲೆಯಿಂದ ನರಳುವವರು ಈ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಒಟ್ಟು 11,33,091 ಅರ್ಹ ಜನರಿಗೆ ಡಿಇಸಿ ಮಾತ್ರೆ ವಿತರಿಸಲಾಗುತ್ತಿದೆ. ಅದರಂತೆ ಚೀಪಬಹುದಾದ ಅಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಜಿಲ್ಲಾದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟು 4,448 ಔಷಧ ವಿತರಕರು ಮಾತ್ರೆಗಳನ್ನು ವಿತರಿಸಲಿದ್ದಾರೆ. ಅದರಂತೆ 482 ಮೇಲ್ವಿಚಾರಕರು ಸಹ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾವ್ ಹಯ್ಯಳಪ್ಪಗೋಳ್,  ನಗರಸಭೆ ಕೌನ್ಸಿಲರ್ ಮಹಾದೇವಮ್ಮ ಬೀರನೂರ, ಜಿಲ್ಲಾ ಆರೋಗ್ಯ ಸಮೀಕ್ಷಾಧಿಕಾರಿ ಡಾ. ಸೂರ್ಯಪ್ರಕಾಶ, ಜಿಲ್ಲಾ ಆಸ್ಪತ್ರೆ ಸರ್ಜನ್ ಭಗವಂತ ಅನ್ವರ್ ಮತ್ತು ಇತರರು ಉಪಸ್ಥಿತರಿದ್ದು, ಆನೆಕಾಲು ರೋಗ ನಿವಾರಣೆ ಕುರಿತು ಅವಶ್ಯಕ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.