ಗುಲ್ಬರ್ಗಾ

ರೈಲು ಹಳಿ ಮೇಲೆ ಸ್ಫೋಟಕ ಪತ್ತೆ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ.5
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ, ಗೃಹ ಇಲಾಖೆ, ಆಂತರಿಕ ಭದ್ರತೆ (ಇಂಟರ್ನಲ್ ಸೆಕ್ಯೂರಿಟಿ) ವಿಭಾಗ, ರೇಲ್ವೆ ಪೊಲೀಸ್‌ರನ್ನೆಲ್ಲ ತುದಿಗಾಲಲ್ಲಿ ನಿಲ್ಲಿಸಿದ್ದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ಹಾಗೂ ಮಳಖೇಡ ರೈಲು ಹಳಿಗಳ ಮೇಲಿನ ಸ್ಫೋಟಕ ಪತ್ತೆ ಪ್ರಕರಣ ಠುಸ್ ಆಗಿದೆ!
  ಹಳಿಗುಂಟ ಸ್ಫೋಟಕ ಅಳವಡಿಸುವಾಗಲೇ ಖದೀಮರೊಂದಿಗೆ ಸೆಣಸಿದೆ ಎಂಬ ಹೇಳಿಕೆ ಕಟ್ಟು ಕಥೆ ಎಂದು ಖುದ್ದು ಕೀಮ್ಯಾನ್ ಪೊಲೀಸರೆದುರೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ಪ್ರಕರಣ ತಣ್ಣಗಾಗಿದ್ದು ಈ ಸಂಗತಿಯನ್ನು ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಖಚಿತಪಡಿಸಿವೆ.
  ಸ್ಫೋಟಕ ಮೊದಲು ಮಳಖೇಡ ಹಳಿ ಮೇಲೆ ಕಂಡಿತ್ತು, ತುಸು ಹೊತ್ತಲ್ಲೇ ಚಿತ್ತಾಪುರ ಬಳಿ ಹಳಿಗಳ ಮೇಲೆ ಸ್ಫೋಟಕ ಅಳವಡಿಸುತ್ತಿದ್ದ ನಾಲ್ವರು ಆಗಂತುಕರೊಂದಿಗೆ ಮಾರಾಮಾರಿ ನಡೆಸಿದ್ದಾಗಿ ರೇಲ್ವೆ ಕೀ ಮ್ಯಾನ್ ಹೇಳಿಕೆ ನೀಡಿದ್ದರಿಂದ ಪ್ರಕರಣ ತುಸು ಗಂಭೀರವಾಗಿತ್ತು. ಆದರೆ ಹೀಗೆ ಹೇಳಿಕೆ ಕೊಟ್ಟ ರೇಲ್ವೆ ಕೀ ಮ್ಯಾನ್ ತನಿಖೆ ಗಂಭೀರವಾಗಿ ಸಾಗುತ್ತಿದ್ದ ಹಂತದಲ್ಲೇ ತಾನು ಹೇಳಿದಂತೆ ಆಗಂತುಕರ ತಂಡ ಸ್ಫೋಟಕ ಅಳವಡಿಸುವುದನ್ನು ಕಂಡಿಲ್ಲ, ಅವರೊಂದಿಗೆ ಮಾರಾಮಾರಿ ನಡೆಸಿಲ್ಲ. ಇದೆಲ್ಲ ನಾನೇ ಕಟ್ಟಿದ ಕಥೆ ಎಂದು ಚಿತ್ತಾಪುರ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ.
  2 ವಾರಗಳ ಹಿಂದೆಯೇ ಈ ಬೆಳವಣಿಗೆಯಾಗಿದ್ದು ಕೀ ಮ್ಯಾನ್ ಹೇಳಿಕೆಯನ್ನು ಪೊಲೀಸರು ಚಿತ್ರೀಕರಿಸಿಕೊಂಡಿದ್ದಲ್ಲದೆ, ಈ ಬೆಳವಣಿಗೆ ಬಗ್ಗೆ ಆಂತರಿಕ ಭದ್ರತೆ ಎಡಿಜಿಪಿ ಅಮರಕುಮಾರ ಪಾಂಡೆ, ಎಡಿಜಿಪಿ (ಕಾನೂನು- ಸುವ್ಯವಸ್ಥೆ) ಎಂಎನ್ ರೆಡ್ಡಿ, ಈಶಾನ್ಯ ವಲಯ ಐಜಿಪಿ ಡಾ. ಸುರೇಶ ಮೊಹ್ಮದ್, ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಗಮನ ಸೆಳೆದಿದ್ದಾರೆ ಎಂಬುದು ತಿಳಿದು ಬಂದಿದೆ.
ಅನುಮಾನಗಳು ಕಾಡಿದ್ದವು:  ಹಳಿ ಮೇಲೆ ದೊರಕಿದ್ದ ಸ್ಫೋಟಕ, ಅಲ್ಲಿನ ಸಂದರ್ಭಗಳಿಗೂ ರೇಲ್ವೆ ಕೀ ಮ್ಯಾನ್ ಹೇಳಿಕೆಗೂ ಆರಂಭದಿಂದಲೇ ಹೊಂದಾಣಿಕೆ ಇರಲಿಲ್ಲ. ನಿಜ ಸ್ವರೂಪ ಅರಿಯಲು ಕಲ್ಲಿದ್ದಲು ಗಣಿಗಳಿರುವ ಸಿಂಗಾರೇಣಿ, ಜಾರ್ಖಂಡ್, ರಾಮಗುಂಡಂಗಳಿಗೆ ತಜ್ಞರ ತಂಡ ಭೇಟಿ ನೀಡಿ ವೈಜ್ಞಾನಿಕ ಮಾಹಿತಿ ಕಲೆ ಹಾಕಿತ್ತು. ಹಳಿ ಮೇಲೆ ನನ್ನನ್ನು ಎತ್ತಿ ಒಗೆದರು ಎಂದು ಕೀ ಮ್ಯಾನ್ ರೋಚಕವಾಗಿ ಬಣ್ಣಿಸಿದ್ದನಾದರೂ ಈ ಮಾತು ನಂಬುವುದಾದಲ್ಲಿ ಆತನ ಮೇ ಮೇಲೆ ಯಾವುದೇ ತರಚು ಗಾಯವೂ ಆಗಿರಲಿಲ್ಲ. ಹಳಿ ಮೇಲೆ ಜಲ್ಲಿಕಲ್ಲು ರಾಶಿಯೇ ಇರುತ್ತದೆ. ಎತ್ತಿ ಒಗೆದಾಗ ಕೀ ಮ್ಯಾನ್ ದೇಹ ಗಾಯ ಮುಕ್ತವಾಗದಿರುವುದೇ ಪೊಲೀಸರನ್ನು ಶಂಕೆ ರೂಪದಲ್ಲಿ ಬಲವಾಗಿ ಕಾಡಿತ್ತು.
  ಸದ್ಯ ಕೀ ಮ್ಯಾನ್‌ನೇ ತಪ್ಪೊಪ್ಪಿಕೊಂಡಿರುವುದರಿಂದ ಈ ಸ್ಫೋಟಕಗಳು ಕಲ್ಲಿದ್ದಲನ್ನು ಸಾಗಿಸುತ್ತಿದ್ದ ರೈಲಿನ ಬೋಗಿಯಿಂದ ತಪ್ಪಿ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ.

 ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.